ಅಮೆರಿಕದಲ್ಲಿ ಖಾಯಂ ನಿವಾಸಿ ಹಕ್ಕು ಅಥವಾ ಗ್ರೀನ್ ಕಾರ್ಡ್ ಪಡೆಯಲು ಕಾಯುತ್ತಿರುವ ಭಾರತೀಯ ವೃತ್ತಿಪರರ ಸಂಖ್ಯೆ ಸಾರ್ವಕಾಲಿಕ ಏರಿಕೆ ಕಂಡಿದೆ. ನ್ಯಾಷನಲ್ ಫೌಂಡೇಶನ್ ಫಾರ್ ಅಮೇರಿಕನ್ ಪಾಲಿಸಿ ವರದಿಯ ಪ್ರಕಾರ, ಸುಮಾರು 10 ಲಕ್ಷ ಭಾರತೀಯರು ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್‌ಗಾಗಿ ಸಾಲಿನಲ್ಲಿ ನಿಂತಿದ್ದಾರೆ. ಅಮೆರಿಕದ ಒಟ್ಟು ಗ್ರೀನ್ ಕಾರ್ಡ್ ಬಾಕಿ ಅರ್ಜಿಗಳಲ್ಲಿ ಶೇಕಡಾ 79 ರಷ್ಟು ಭಾರತೀಯರದೇ ಆಗಿದೆ.
ಇತ್ತೀಚಿನ ಅಂದಾಜಿನ ಪ್ರಕಾರ, ಜನವರಿ 2026 ಅಥವಾ ಆನಂತರ ಅರ್ಜಿ ಸಲ್ಲಿಸಿದ ಇಬಿ 2 ವಿಭಾಗದ ಭಾರತೀಯರಿಗೆ ಗ್ರೀನ್ ಕಾರ್ಡ್ ಸಿಗಲು ಬರೋಬ್ಬರಿ 179 ವರ್ಷಗಳ ಕಾಲ ಕಾಯಬೇಕಾಗಬಹುದು. ಇಬಿ 3 ವಿಭಾಗದ ಅಭ್ಯರ್ಥಿಗಳಿಗೆ 38 ವರ್ಷಗಳ ಕಾಯುವಿಕೆ ಅನಿವಾರ್ಯವಾಗಿದ್ದರೆ, ಇಬಿ 1 ವಿಭಾಗಕ್ಕೆ 4 ರಿಂದ 5 ವರ್ಷಗಳ ಕಾಲಾವಕಾಶ ತಗಲಬಹುದು. ಡಿಸೆಂಬರ್ 2025 ರ ಅಂತ್ಯಕ್ಕೆ ಇಬಿ 1 ರಲ್ಲಿ 51,619, ಇಬಿ 2 ರಲ್ಲಿ 7,31,566 ಹಾಗೂ ಇಬಿ 3 ವಿಭಾಗದಲ್ಲಿ 2,13,414 ಭಾರತೀಯರು ಕಾಯುವಿಕೆಯ ಪಟ್ಟಿಯಲ್ಲಿದ್ದಾರೆ.
ಈ ಸುದೀರ್ಘ ವಿಳಂಬಕ್ಕೆ ಅಮೆರಿಕದ ವಲಸೆ ನೀತಿಯಲ್ಲಿರುವ ಕಠಿಣ ನಿಯಮಗಳೇ ಮುಖ್ಯ ಕಾರಣ. ಅಮೆರಿಕ ಸರ್ಕಾರವು ವರ್ಷಕ್ಕೆ ಕೇವಲ 1.40 ಲಕ್ಷ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್‌ಗಳನ್ನು ನೀಡುತ್ತದೆ. ಇದಲ್ಲದೆ ಪ್ರತಿಯೊಂದು ದೇಶಕ್ಕೂ ಶೇಕಡಾ 7 ರಷ್ಟು ಮಾತ್ರವೇ ಗ್ರೀನ್ ಕಾರ್ಡ್ ಹಂಚಿಕೆ ಮಾಡಬೇಕು ಎಂಬ ನಿಯಮವಿದೆ. ಐಸ್‌ಲ್ಯಾಂಡ್‌ನಂತಹ ಸಣ್ಣ ದೇಶಕ್ಕೂ ಮತ್ತು ಭಾರತದಂತಹ ಅಪಾರ ಸಂಖ್ಯೆಯ ಅರ್ಜಿದಾರರಿರುವ ದೇಶಕ್ಕೂ ಒಂದೇ ಪ್ರಮಾಣದ ಮಿತಿ ಇರುವುದು ಭಾರತೀಯ ತಂತ್ರಜ್ಞರು ಮತ್ತು ವೃತ್ತಿಪರರಿಗೆ ಹಿನ್ನಡೆಯಾಗಿದೆ.
ಹೆಚ್ಚಿನ ವಿದ್ಯಾಭ್ಯಾಸ ಮತ್ತು ನೈಪುಣ್ಯತೆ ಹೊಂದಿರುವ ಲಕ್ಷಾಂತರ ಭಾರತೀಯರು ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಈ ಕಾನೂನಿನ ತೊಡಕಿನಿಂದಾಗಿ ದಶಕಗಳ ಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ಹೊಸ ಅರ್ಜಿದಾರರು ಸಾಲಿಗೆ ಸೇರುತ್ತಿರುವುದರಿಂದ ಈ ಸಮಸ್ಯೆಯು ಇನ್ನಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ.

