ನವದೆಹಲಿ: ಚೀನಾ ಸದರ್ನ್ ಏರ್‌ಲೈನ್ಸ್ ಸೆಪ್ಟೆಂಬರ್ 21, 2026ರಿಂದ ನವದೆಹಲಿಯಿಂದ ಚೀನಾದ ಗುವಾಂಗ್‌ಝೌಗೆ ನೇರ ಪ್ರಯಾಣಿಕ ವಿಮಾನ ಸೇವೆಯನ್ನು ಪುನರಾರಂಭಿಸಲಿದೆ. ಈ ಮೂಲಕ ಆರು ವರ್ಷಗಳಿಂದ ಸ್ಥಗಿತಗೊಂಡಿದ್ದ ಈ ಮಾರ್ಗದ ವಿಮಾನ ಸೇವೆ ಮತ್ತೆ ಆರಂಭವಾಗಲಿದ್ದು, ಭಾರತದಲ್ಲಿ ಚೀನಾ ಸದರ್ನ್ ಏರ್‌ಲೈನ್ಸ್‌ನ ಪುನರಾಗಮನಕ್ಕೂ ಇದು ಸಾಕ್ಷಿಯಾಗಲಿದೆ.
ಭಾರತ ಮತ್ತು ಚೀನಾ ನಡುವಿನ ನೇರ ವಿಮಾನ ಸಂಪರ್ಕ ಹಂತಹಂತವಾಗಿ ಪುನಶ್ಚೇತನಗೊಳ್ಳುತ್ತಿರುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆದಿದೆ. ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಸುಧಾರಣೆಯ ಲಕ್ಷಣಗಳು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ನಗರಗಳ ನಡುವೆ ವಿಮಾನ ಸೇವೆಗಳನ್ನು ಮತ್ತೆ ಆರಂಭಿಸಲಾಗುತ್ತಿದೆ.
ದೆಹಲಿ-ಗುವಾಂಗ್‌ಝೌ ನಡುವೆ ಪ್ರತಿದಿನ ವಿಮಾನ
ಚೀನಾ ಸದರ್ನ್ ಏರ್‌ಲೈನ್ಸ್ ನವದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಗುವಾಂಗ್‌ಝೌ ಬೈಯುನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಪ್ರತಿದಿನ ಒಂದು ಸುತ್ತಿನ ವಿಮಾನ ಸೇವೆ ನಡೆಸಲಿದೆ.
ಗ್ಲೋಬಲ್ ಟೈಮ್ಸ್ ವರದಿ ಪ್ರಕಾರ, CZ359 ವಿಮಾನವು ಗುವಾಂಗ್‌ಝೌನಿಂದ ಮಧ್ಯಾಹ್ನ ಸುಮಾರು 3.35ಕ್ಕೆ ಹೊರಟು, ಸಂಜೆ 7 ಗಂಟೆ ಸುಮಾರಿಗೆ ನವದೆಹಲಿಗೆ ತಲುಪಲಿದೆ.
ಮತ್ತೊಂದೆಡೆ, CZ360 ವಾಪಸ್ ವಿಮಾನವು ದೆಹಲಿಯಿಂದ ರಾತ್ರಿ 8ರಿಂದ 8.20ರ ನಡುವೆ ಹೊರಟು, ಮರುದಿನ ಬೆಳಗ್ಗೆ ಸುಮಾರು 4.15ಕ್ಕೆ ಗುವಾಂಗ್‌ಝೌ ತಲುಪುವ ನಿರೀಕ್ಷೆಯಿದೆ.
ಈ ವಿಮಾನ ಸೇವೆಯನ್ನು ಬೋಯಿಂಗ್ 737 ವಿಮಾನಗಳ ಮೂಲಕ, ವಿಶೇಷವಾಗಿ 737-8/ MAX 8 ಸರಣಿಯ ವಿಮಾನಗಳನ್ನು ಬಳಸಿ ನಿರ್ವಹಿಸಲಾಗುತ್ತದೆ.
ಭಾರತಕ್ಕೆ ವಿಮಾನ ಸೇವೆ ಪುನರಾರಂಭಿಸಿದ ಮೂರನೇ ಪ್ರಮುಖ ಚೀನಾ ಏರ್‌ಲೈನ್ಸ್
ಚೀನಾ ಸದರ್ನ್ ಏರ್‌ಲೈನ್ಸ್ ಭಾರತಕ್ಕೆ ವಿಮಾನ ಸೇವೆ ಪುನರಾರಂಭಿಸುತ್ತಿರುವ ಮೂರನೇ ಪ್ರಮುಖ ಚೀನೀ ವಿಮಾನಯಾನ ಸಂಸ್ಥೆಯಾಗಿದೆ.ಈ ಹಿಂದೆ ಚೀನಾ ಈಸ್ಟರ್ನ್ ಏರ್‌ಲೈನ್ಸ್ ಶಾಂಘೈ-ದೆಹಲಿ ಮಾರ್ಗದ ಸೇವೆಯನ್ನು ಪುನರಾರಂಭಿಸಿದ್ದು, ಕುನ್ಮಿಂಗ್-ಕೊಲ್ಕತ್ತಾ ಮಾರ್ಗದಲ್ಲಿಯೂ ವಿಮಾನಗಳನ್ನು ನಿರ್ವಹಿಸುತ್ತಿದೆ.ಇನ್ನು ಏರ್ ಚೈನಾ 2026ರ ಏಪ್ರಿಲ್‌ನಲ್ಲಿ ಬೀಜಿಂಗ್-ದೆಹಲಿ ವಿಮಾನ ಸೇವೆಯನ್ನು ಮತ್ತೆ ಆರಂಭಿಸಿತ್ತು.
ಭಾರತೀಯ ವಿಮಾನಯಾನ ಸಂಸ್ಥೆಗಳೂ ಚೀನಾದ ವಿವಿಧ ನಗರಗಳಿಗೆ ವಿಮಾನ ಸಂಪರ್ಕವನ್ನು ಹಂತಹಂತವಾಗಿ ಪುನರಾರಂಭಿಸುತ್ತಿವೆ ಮತ್ತು ವಿಸ್ತರಿಸುತ್ತಿವೆ.
ಆರು ವರ್ಷಗಳ ವಿಮಾನ ಸೇವೆ ಸ್ಥಗಿತ ಅಂತ್ಯ
2020ರ ವೇಳೆಯಲ್ಲಿ ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಭಾರತ ಮತ್ತು ಚೀನಾ ನಡುವಿನ ನೇರ ವಿಮಾನ ಸಂಪರ್ಕ ಬಹುತೇಕ ಸ್ಥಗಿತಗೊಂಡಿತ್ತು. ನಂತರ ಗಡಿ ವಿವಾದದ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಉಂಟಾದ ಉದ್ವಿಗ್ನತೆಯಿಂದ ವಿಮಾನ ಸೇವೆಗಳ ಪುನರಾರಂಭವೂ ವಿಳಂಬವಾಗಿತ್ತು.ಇದೀಗ ಉಭಯ ದೇಶಗಳ ನಡುವಿನ ಸಂಬಂಧ ಸುಧಾರಿಸುವ ಪ್ರಯತ್ನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ನೇರ ವಿಮಾನ ಸೇವೆಗಳು ಮತ್ತೆ ಆರಂಭವಾಗುತ್ತಿವೆ.ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರು ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಭಾರತಕ್ಕೆ ಆಗಮಿಸುತ್ತಿರುವ ಸಂದರ್ಭದಲ್ಲೇ ಈ ವಿಮಾನ ಸಂಪರ್ಕ ಪುನರಾರಂಭದ ಘೋಷಣೆ ಹೊರಬಂದಿರುವುದು ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ವ್ಯಾಪಾರ, ಪ್ರವಾಸೋದ್ಯಮಕ್ಕೆ ಉತ್ತೇಜನ
ಪುನರಾರಂಭಗೊಳ್ಳುವ ವಿಮಾನ ಸೇವೆಯಿಂದ ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ವ್ಯಾಪಾರ, ಪ್ರವಾಸೋದ್ಯಮ, ವಿದ್ಯಾರ್ಥಿಗಳ ಪ್ರಯಾಣ ಹಾಗೂ ಜನರ ನಡುವಿನ ಸಂಪರ್ಕ ಮತ್ತಷ್ಟು ಹೆಚ್ಚಾಗಲಿದೆ ಎಂದು ಚೀನಾ ಸದರ್ನ್ ಏರ್‌ಲೈನ್ಸ್ ತಿಳಿಸಿದೆ.
ಇಂಡಿಯಾ ಟುಡೇ ವರದಿ ಪ್ರಕಾರ, ಸೇವೆ ಪುನರಾರಂಭವಾದ ಬಳಿಕ ದಕ್ಷಿಣ ಏಷ್ಯಾದಲ್ಲಿ ಎಂಟು ಸುತ್ತಿನ ಮಾರ್ಗಗಳಲ್ಲಿ ವಾರಕ್ಕೆ 100ಕ್ಕೂ ಹೆಚ್ಚು ವಿಮಾನಗಳನ್ನು ನಿರ್ವಹಿಸುವ ನಿರೀಕ್ಷೆಯನ್ನು ವಿಮಾನಯಾನ ಸಂಸ್ಥೆ ಹೊಂದಿದೆ.ದೆಹಲಿ-ಗುವಾಂಗ್‌ಝೌ ನೇರ ವಿಮಾನ ಸಂಪರ್ಕದಿಂದ ದಕ್ಷಿಣ ಚೀನಾಕ್ಕೆ ತೆರಳುವ ಪ್ರಯಾಣಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ. ಉದ್ಯಮಿಗಳು, ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳಿಗೆ ಪ್ರಯಾಣದ ಆಯ್ಕೆಗಳು ಹೆಚ್ಚಾಗಲಿವೆ.
ಟಿಕೆಟ್ ಬುಕ್ಕಿಂಗ್ ಆರಂಭ
ಸೆಪ್ಟೆಂಬರ್ 21ರಿಂದ ವಿಮಾನ ಸೇವೆ ಪುನರಾರಂಭವಾಗಲಿರುವ ಹಿನ್ನೆಲೆಯಲ್ಲಿ ಈಗಾಗಲೇ ಟಿಕೆಟ್‌ಗಳ ಬುಕ್ಕಿಂಗ್ ಲಭ್ಯವಿದೆ.ಚೀನಾ ಈಸ್ಟರ್ನ್ ಏರ್‌ಲೈನ್ಸ್ ಮತ್ತು ಏರ್ ಚೈನಾದ ಬಳಿಕ ಚೀನಾ ಸದರ್ನ್ ಏರ್‌ಲೈನ್ಸ್ ಕೂಡ ಭಾರತಕ್ಕೆ ತನ್ನ ಸೇವೆಗಳನ್ನು ಪುನರಾರಂಭಿಸುತ್ತಿರುವುದರಿಂದ, ಹಲವು ವರ್ಷಗಳಿಂದ ಸೀಮಿತವಾಗಿದ್ದ ಭಾರತ-ಚೀನಾ ನೇರ ವಿಮಾನ ಸಂಪರ್ಕ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯಿದೆ.

