ಭಾರತ ಇಂದು ತನ್ನ 77ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿದೆ. ದೆಹಲಿಯ ಕರ್ತವ್ಯ ಪಥದಲ್ಲಿ ಸಾಗುತ್ತಿರುವ ಭವ್ಯ ಮಿಲಿಟರಿ ಪರೇಡ್, ದೇಶದ ರಕ್ಷಣಾ ಶಕ್ತಿ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಜಗತ್ತಿನೆದುರು ಅನಾವರಣಗೊಳಿಸುತ್ತಿದೆ. 1950ರಲ್ಲಿ ಇದೇ ದಿನದಂದು ಭಾರತದ ಸಂವಿಧಾನ ಅಧಿಕೃತವಾಗಿ ಜಾರಿಗೆ ಬಂದು, ನಮ್ಮ ದೇಶವು ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಇಡೀ ವಿಶ್ವಕ್ಕೆ ಮಾದರಿಯಾಗಿ ಉದಯಿಸಿತು.
ಇಂದು ನಾವು ನೂರಾರು ಕೋಟಿ ರೂಪಾಯಿ ವೆಚ್ಚದ ವೈಭವವನ್ನು ಕಣ್ತುಂಬಿಕೊಳ್ಳುತ್ತಿದ್ದೇವೆ. ಆದರೆ, ಬ್ರಿಟಿಷ್ ಕಾಲದ ದಾಖಲೆಗಳ ಪ್ರಕಾರ ಭಾರತದ ಮೊದಲ ಗಣರಾಜ್ಯೋತ್ಸವದ ಕಥೆಯೇ ಬೇರೆಯಾಗಿತ್ತು. ಅಂದು ಯಾವುದೇ ಅತ್ಯಾಧುನಿಕ ಟೆಕ್ನಾಲಜಿ ಇರಲಿಲ್ಲ, ಇಂದಿನಷ್ಟು ಬಜೆಟ್ ಕೂಡ ಇರಲಿಲ್ಲ. ಆದರೂ, ಅಂದಿನ ಆಚರಣೆಯಲ್ಲಿ ಒಂದು ವಿಶಿಷ್ಟವಾದ ದೇಶಭಕ್ತಿಯ ಕಿಚ್ಚಿತ್ತು. ಆ ಸರಳತೆಯ ಸಂಭ್ರಮದಿಂದ ಇಂದಿನ ಜಾಗತಿಕ ಮಟ್ಟದ ಈ ಭವ್ಯತೆಯವರೆಗೆ ಭಾರತದ ಗಣತಂತ್ರ ನಡೆದುಬಂದ ಹಾದಿ ನಿಜಕ್ಕೂ ಸ್ಫೂರ್ತಿದಾಯಕ.
ಅಂದು 11 ಸಾವಿರ.. ಇಂದು 300 ಕೋಟಿ ದಾಟಿದ ವೆಚ್ಚ
ಭಾರತದ ಮೊದಲ ಗಣರಾಜ್ಯೋತ್ಸವ ನಡೆದಿದ್ದು 1950ರಲ್ಲಿ. ಅಂದು ಒಟ್ಟು ಆಚರಣೆಗೆ ತಗುಲಿದ ವೆಚ್ಚ ಕೇವಲ ₹11,093. ವರ್ಷಗಳು ಉರುಳಿದಂತೆ ಈ ಸಂಭ್ರಮ ಮತ್ತು ವೆಚ್ಚ ಎರಡೂ ಹೆಚ್ಚುತ್ತಾ ಸಾಗಿವೆ:
1956: ₹5,75,000
1971: ₹17,12,000
1988: ₹69,69,159
2015: ಅಂದಾಜು ₹320 ಕೋಟಿಗೂ ಅಧಿಕ
ಭವ್ಯತೆಗಿಂತ ಜನಸೇವೆಗೆ ಆದ್ಯತೆ ನೀಡಿದ್ದ ಮೊದಲ ಗಣರಾಜ್ಯೋತ್ಸವ
ಇಂದಿನ ಪರೇಡ್‌ಗಳು ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸಿದರೆ 1950ರ ಮೊದಲ ಆಚರಣೆ ಅತ್ಯಂತ ಸರಳವಾಗಿತ್ತು. ಅಂದು ದೆಹಲಿ ಆಡಳಿತವು ಅದ್ದೂರಿ ಕಾರ್ಯಕ್ರಮದ ಬದಲು ಸಮಾಜ ಕಲ್ಯಾಣಕ್ಕೆ ಒತ್ತು ನೀಡಿತ್ತು.
ಮಕ್ಕಳು ಮತ್ತು ಮಹಿಳೆಯರಿಗೆ ಸಿಹಿ: ಪರಿಹಾರ ಕೇಂದ್ರಗಳಲ್ಲಿದ್ದ ಮಕ್ಕಳಿಗೆ ನೆನಪಿನ ತಟ್ಟೆಗಳು, ಆಟಿಕೆಗಳು ಮತ್ತು ಮಹಿಳೆಯರಿಗೆ ಹಣ್ಣು-ಹಂಪಲು ವಿತರಿಸುವ ಮೂಲಕ ಹಬ್ಬವನ್ನು ಆಚರಿಸಲಾಗಿತ್ತು.
ದೇಶ ವಿಭಜನೆಯ ನೋವು: ಅಂದು ಭಾರತ ಇನ್ನೂ ದೇಶ ವಿಭಜನೆಯ (Partition) ನೋವಿನಿಂದ ಚೇತರಿಸಿಕೊಳ್ಳುತ್ತಿತ್ತು. ಹೀಗಾಗಿ, ನಿರಾಶ್ರಿತರ ಶಿಬಿರಗಳಲ್ಲಿ ಗಣರಾಜ್ಯೋತ್ಸವ ಆಚರಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿತ್ತು.
ಕಡಿಮೆ ವೆಚ್ಚ: ಮಹಿಳಾ ಕಲ್ಯಾಣ ವಿಭಾಗದ ಆಚರಣೆಗಾಗಿ ಅಂದು ಕೇವಲ ₹750 ಮಂಜೂರಾಗಿತ್ತು, ಅದರಲ್ಲಿ ₹525 ಮಾತ್ರ ಖರ್ಚಾಗಿತ್ತು
1950ರ ಮೊದಲ ಸಂಭ್ರಮ ಹೇಗಿತ್ತು?
ಇಂದು ನಾವು ಟಿವಿ ಮತ್ತು ಮೊಬೈಲ್‌ಗಳಲ್ಲಿ ಲೈವ್ ಆಗಿ ಪರೇಡ್ ನೋಡುತ್ತಿದ್ದೇವೆ. ಆದರೆ 1950ರಲ್ಲಿ ಇಂತಹ ತಂತ್ರಜ್ಞಾನ ಇರಲಿಲ್ಲ. ಅಂದಿನ ವಿಶೇಷತೆಗಳು ಇಲ್ಲಿವೆ:
ಡಾ. ರಾಜೇಂದ್ರ ಪ್ರಸಾದ್ ಪ್ರಮಾಣವಚನ: ಗವರ್ನಮೆಂಟ್ ಹೌಸ್‌ನ (ಇಂದಿನ ರಾಷ್ಟ್ರಪತಿ ಭವನ) ದರ್ಬಾರ್ ಹಾಲ್‌ನಲ್ಲಿ ಭಾರತದ ಮೊದಲ ರಾಷ್ಟ್ರಪತಿಯಾಗಿ ಡಾ. ರಾಜೇಂದ್ರ ಪ್ರಸಾದ್ ಪ್ರಮಾಣವಚನ ಸ್ವೀಕರಿಸಿದರು.
ಅತಿಥಿಯಾಗಿ ಸುಕರ್ಣೋ: ಇಂಡೋನೇಷ್ಯಾದ ಆಗಿನ ಅಧ್ಯಕ್ಷ ಸುಕರ್ಣೋ ಅವರು ಭಾರತದ ಮೊದಲ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು. ಇದು ಭಾರತದ ವಿದೇಶಾಂಗ ನೀತಿಯ ಮಹತ್ವದ ಹೆಜ್ಜೆಯಾಗಿತ್ತು.
ಇರ್ವಿನ್ ಸ್ಟೇಡಿಯಂನ ಪರೇಡ್: ಅಂದು 5 ಮೈಲಿ ಉದ್ದದ ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರವೇ ಸೇರಿತ್ತು. ಜನಸಾಮಾನ್ಯರು ಮೇಲ್ಛಾವಣಿಗಳ ಮೇಲೆ ನಿಂತು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದರು
2026ರ 77ನೇ ಗಣರಾಜ್ಯೋತ್ಸವದ ಹತ್ತು ಹಲವು ಮೊದಲುಗಳು
ಈ ಬಾರಿಯ ಪರೇಡ್ ಕೇವಲ ಮೆರವಣಿಗೆಯಲ್ಲ, ಇದು ಬದಲಾದ ಭಾರತದ ಬಲಿಷ್ಠ ರೂಪ:
ಬ್ಯಾಟಲ್ ಅರೇ (ಸಮರ ವಿನ್ಯಾಸ): ಇದೇ ಮೊದಲ ಬಾರಿಗೆ ಸೇನೆಯು ಯುದ್ಧ ಭೂಮಿಯಲ್ಲಿ ಸನ್ನದ್ಧವಾಗಿರುವಂತೆ (Battle Array) ಟ್ಯಾಂಕರ್ ಮತ್ತು ಡ್ರೋನ್‌ಗಳೊಂದಿಗೆ ಪಥಸಂಚಲನ ನಡೆಸಲಿದೆ.
ಸೂರ್ಯಾಸ್ತ್ರ ರಾಕೆಟ್ & ಭೈರವ: 300 ಕಿ.ಮೀ ದೂರದ ಶತ್ರು ಅಡಗುತಾಣ ಧ್ವಂಸ ಮಾಡುವ ‘ಸೂರ್ಯಾಸ್ತ್ರ ರಾಕೆಟ್ ಲಾಂಚರ್’ ಮತ್ತು ಹೊಸದಾಗಿ ರಚನೆಯಾದ ‘ಭೈರವ ಬೆಟಾಲಿಯನ್’ ವಿಶೇಷ ಆಕರ್ಷಣೆ.
ಮುಧೋಳ ನಾಯಿಗಳ ಅಬ್ಬರ: ಸೈನಿಕರ ಜೊತೆಗೆ ಕರ್ನಾಟಕದ ಹೆಮ್ಮೆಯ ‘ಮುಧೋಳ ನಾಯಿಗಳು’, ಜನ್ಸ್‌ಕಾರ್ ಕುದುರೆಗಳು ಮತ್ತು ಒಂಟೆಗಳು ಇದೇ ಮೊದಲ ಬಾರಿಗೆ ಪರೇಡ್‌ನಲ್ಲಿ ಹೆಜ್ಜೆ ಹಾಕಲಿವೆ.
ನಾರೀಶಕ್ತಿಯ ನಾಯಕತ್ವ: ಸಿಮ್ರನ್ ಬಾಲಾ ಸಾರಥ್ಯ
ಈ ಬಾರಿ ಲಿಂಗ ಸಮಾನತೆಗೆ ದೊಡ್ಡ ಸಾಕ್ಷಿ ಸಿಗಲಿದೆ. 140 ಪುರುಷರಿರುವ ಸಿಆರ್‌ಪಿಎಫ್ ತುಕಡಿಯನ್ನು ಜಮ್ಮು ಕಾಶ್ಮೀರದ ಮಹಿಳಾ ಅಧಿಕಾರಿ ಸಿಮ್ರನ್ ಬಾಲಾ ಮುನ್ನಡೆಸಲಿದ್ದಾರೆ. ರಜೌರಿ ಗ್ರಾಮದಿಂದ ಅಧಿಕಾರಿಯಾಗಿ ಸೇರಿದ ಮೊದಲ ಮಹಿಳೆ ಇವರು ಎಂಬುದು ಹೆಮ್ಮೆಯ ವಿಷಯ.
ಗ್ಯಾಲರಿಗಳಿಗೆ ನದಿಗಳ ಹೆಸರು
ಅತಿಥಿಗಳು ಕುಳಿತುಕೊಳ್ಳುವ ಗ್ಯಾಲರಿಗಳಿಗೆ ಕೇವಲ ಸಂಖ್ಯೆ ನೀಡುವ ಬದಲು, ಭಾರತದ ಜೀವನಾಡಿಗಳಾದ ಗಂಗಾ, ಯಮುನಾ, ಕಾವೇರಿ, ಕೃಷ್ಣ ಮುಂತಾದ ಪ್ರಮುಖ ನದಿಗಳ ಹೆಸರಿಡಲಾಗಿದೆ.
ವಿಭಿನ್ನ ಅತಿಥಿಗಳು: ಜನಸಾಮಾನ್ಯರೇ ವಿಐಪಿಗಳು
ಈ ಬಾರಿ 10,000 ವಿಶೇಷ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ. ಇವರಲ್ಲಿ ಕೇವಲ ಗಣ್ಯರಿಲ್ಲ; ಬದಲಾಗಿ ಯಶಸ್ವಿ ರೈತರು, ವಿಜ್ಞಾನಿಗಳು, ಬೀದಿ ವ್ಯಾಪಾರಿಗಳು, ಭಿಕ್ಷಾಟನೆಯಿಂದ ರಕ್ಷಿಸಲ್ಪಟ್ಟವರು ಮತ್ತು ಕುಶಲಕರ್ಮಿಗಳು ಅತಿಥಿಗಳ ಸಾಲಿನಲ್ಲಿದ್ದಾರೆ.

