ನಾಗ್‌ಪುರದ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಭಾರತ 48 ರನ್‌ಗಳ ಗೆಲುವನ್ನು ದಾಖಲಿಸುವ ಮೂಲಕ 5 ಪಂದ್ಯಗಳ ಟಿ 20 ಸರಣಿಯಲ್ಲಿ 1 – 0 ಅಂತರದ ಮುನ್ನಡೆಯನ್ನು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅಭಿಷೇಕ್ ಶರ್ಮಾ ಸ್ಪೋಟಕ ಅರ್ಧಶತಕದ ನೆರವಿನಿಂದ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 238 ರನ್ ಕಲೆಹಾಕಿ ನ್ಯೂಜಿಲೆಂಡ್‌ಗೆ 239 ರನ್‌ಗಳ ಕಠಿಣ ಗುರಿ ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿದೆ.
ಭಾರತದ ಇನ್ನಿಂಗ್ಸ್: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಪರ ಆರಂಭಿಕನಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ 10 ರನ್ ಗಳಿಸಿದರು. ಬಳಿಕ ಇಶಾನ್ ಕಿಶನ್ 8 ರನ್ ಕಲೆಹಾಕಿದರು. ಹೀಗೆ ಕೇವಲ 27 ರನ್‌ಗೆ 2 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿದ ತಂಡಕ್ಕೆ ಮೂರನೇ ವಿಕೆಟ್‌ಗೆ ಜತೆಯಾದ ಸೂರ್ಯಕುಮಾರ್ ಯಾದವ್ ಹಾಗೂ ಅಭಿಷೇಕ್ ಶರ್ಮಾ ಜೋಡಿ 99 ರನ್‌ಗಳ ಜತೆಯಾಟವನ್ನಾಡುವ ಮೂಲಕ ಚೇತರಿಕೆ ನೀಡಿತು.
ಸೂರ್ಯಕುಮಾರ್ ಯಾದವ್ 32 ರನ್ ಗಳಿಸಿದರೆ, ಅಭಿಷೇಕ್ ಶರ್ಮಾ 35 ಎಸೆತಗಳಲ್ಲಿ 5 ಬೌಂಡರಿ ಹಾಗೂ 8 ಸಿಕ್ಸರ್ ಸಹಿತ 84 ರನ್ ಬಾರಿಸಿದರು. ಇನ್ನುಳಿದಂತೆ ಹಾರ್ದಿಕ್ ಪಾಂಡ್ಯ 25, ಶಿವಮ್ ದುಬೆ 9, ಅಕ್ಷರ್ ಪಟೇಲ್ 5, ಅರ್ಷ್‌ದೀಪ್ ಸಿಂಗ್ ಅಜೇಯ 6 ರನ್ ಹಾಗೂ ಅಂತಿಮ ಹಂತದಲ್ಲಿ ಅಬ್ಬರಿಸಿದ ರಿಂಕು ಸಿಂಗ್ 20 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ ಅಜೇಯ 44 ರನ್ ಚಚ್ಚಿದರು.
ನ್ಯೂಜಿಲೆಂಡ್ ಪರ ಜೇಕಬ್ ಡಫಿ ಹಾಗೂ ಕೈಲ್ ಜೇಮಿಸನ್ ತಲಾ ಎರಡು ವಿಕೆಟ್, ಕ್ರಿಸ್ಟಿಯನ್ ಕ್ಲಾರ್ಕ್, ಇಶ್ ಸೋಧಿ ಹಾಗೂ ಮಿಚೆಲ್ ಸ್ಯಾಂಟ್ನರ್ ತಲಾ ಒಂದೊಂದು ವಿಕೆಟ್ ಪಡೆದರು.
ನ್ಯೂಜಿಲೆಂಡ್ ಇನ್ನಿಂಗ್ಸ್: ತಂಡ ಕೇವಲ 1 ರನ್‌ಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಕಕ್ಕೆ ಸಿಲುಕಿತು. ಡಿವಾನ್ ಕಾನ್ವೆ ಡಕ್‌ಔಟ್ ಆದರೆ, ರಚಿನ್ ರವೀಂದ್ರ 1 ರನ್‌ಗೆ ವಿಕೆಟ್ ಒಪ್ಪಿಸಿದರು. ಹೀಗೆ ಆರಂಭದಲ್ಲೇ ಆಘಾತಕ್ಕೊಳಗಾದ ನ್ಯೂಜಿಲೆಂಡ್‌ಗೆ ಗ್ಲೆನ್ ಫಿಲಿಪ್ಸ್ ಹಾಗೂ ಟಿಮ್ ರಾಬಿನ್‌ಸನ್, ಗ್ಲೆನ್ ಫಿಲಿಪ್ಸ್ ಹಾಗೂ ಚಾಂಪ್ಮನ್ ಜೋಡಿ ಅರ್ಧಶತಕಗಳ ಜತೆಯಾಟವನ್ನಾಡುವ ಮೂಲಕ ತಂಡಕ್ಕೆ ಚೇತರಿಕೆ ತಂದರಾದರೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯವಲ್ಲಿ ಸಫಲರಾಗಲಿಲ್ಲ.
ಟಿಮ್ ರಾಬಿನ್‌ಸನ್ 21 ರನ್ ಗಳಿಸಿದರೆ, ಮಾರ್ಕ್ ಚಾಂಪ್ಮನ್ 39 ಹಾಗೂ ಗ್ಲೆನ್ ಫಿಲಿಪ್ಸ್ 40 ಎಸೆತಗಳಲ್ಲಿ 4 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 78 ರನ್ ಬಾರಿಸಿದರು. ಇನ್ನುಳಿದಂತೆ ಡ್ಯಾರಿಲ್ ಮಿಚೆಲ್ 28, ಕ್ರಿಸ್ಟಿಯನ್ ಕ್ಲಾರ್ಕ್ ಡಕ್‌ಔಟ್, ಕೈಲ್ ಜೇಮಿಸನ್ ಅಜೇಯ 1 ರನ್ ಹಾಗೂ ಮಿಚೆಲ್ ಸ್ಯಾಂಟ್ನರ್ ಅಜೇಯ 20 ರನ್ ಗಳಿಸಿದರು.
ಭಾರತದ ಪರ ವರುಣ್ ಚಕ್ರವರ್ತಿ ಹಾಗೂ ಶಿವಮ್ ದುಬೆ ತಲಾ ಎರಡು ವಿಕೆಟ್ ಪಡೆದರೆ, ಅರ್ಷ್‌ದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ ಹಾಗೂ ಅಕ್ಷರ್ ಪಟೇಲ್ ತಲಾ ಒಂದೊಂದು ವಿಕೆಟ್ ಪಡೆದರು.

