ಕೋಲ್ಕತ್ತಾ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಪಶ್ಚಿಮ ಬಂಗಾಳದ 2026ರ ವಿಧಾನಸಭಾ ಚುನಾವಣೆಗಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಈ ಪ್ರಣಾಳಿಕೆಯು ಜನಕಲ್ಯಾಣ ಯೋಜನೆಗಳು, ಆಡಳಿತಾತ್ಮಕ ಸುಧಾರಣೆಗಳು ಮತ್ತು ಭದ್ರತಾ ಕ್ರಮಗಳ ಮಿಶ್ರಣವನ್ನು ಒಳಗೊಂಡಿದೆ.
ಪ್ರಣಾಳಿಕೆ ಬಿಡುಗಡೆ ಮಾಡಿದ ನಂತರ ಮಾತನಾಡಿದ ಶಾ, “ಇಂದು ಬಿಜೆಪಿ ಬಿಡುಗಡೆ ಮಾಡಿರುವ ಈ ಸಂಕಲ್ಪ ಪತ್ರವು ಬಂಗಾಳದ ಎಲ್ಲಾ ವರ್ಗದ ಜನರಲ್ಲಿ ಮನೆಮಾಡಿರುವ ತೀವ್ರ ಹತಾಶೆಯನ್ನು ಹೋಗಲಾಡಿಸುವ ಮಾರ್ಗವಾಗಿದೆ. ಬೆಳೆ ನಷ್ಟದಿಂದ ಕಂಗಾಲಾಗಿರುವ ರೈತರಿಗೆ, ನಿರುದ್ಯೋಗಿ ಯುವಕರಿಗೆ ಮತ್ತು ಭಯದಲ್ಲಿ ಬದುಕುತ್ತಿರುವ ಮಹಿಳೆಯರಿಗೆ ಇದು ಹೊಸ ದಿಕ್ಕನ್ನು ತೋರಿಸುತ್ತದೆ. ಬಂಗಾಳದ ಸಂಸ್ಕೃತಿ ಮತ್ತು ಹೆಮ್ಮೆಯ ಬಗ್ಗೆ ಕಾಳಜಿ ಹೊಂದಿರುವ ಪ್ರತಿ ನಾಗರಿಕನಿಗೆ ಇದು ಹೊಸ ಭರವಸೆ ಮತ್ತು ವಿಶ್ವಾಸವನ್ನು ನೀಡುತ್ತದೆ,” ಎಂದರು.
ಬಿಜೆಪಿಯ ಪ್ರಮುಖ ಚುನಾವಣಾ ಭರವಸೆಗಳು:
ಯುಸಿಸಿ ಜಾರಿ: ಸರ್ಕಾರ ರಚನೆಯಾದ ಆರು ತಿಂಗಳೊಳಗೆ ಏಕರೂಪ ನಾಗರಿಕ ಸಂಹಿತೆಯನ್ನು (UCC) ಜಾರಿಗೆ ತರುವುದಾಗಿ ಬಿಜೆಪಿ ಭರವಸೆ ನೀಡಿದೆ.
ಉದ್ಯೋಗ ಸೃಷ್ಟಿ: ರಾಜ್ಯದಲ್ಲಿ ಒಂದು ಕೋಟಿ ಉದ್ಯೋಗಗಳನ್ನು ಸೃಷ್ಟಿಸುವುದಾಗಿ ಪಕ್ಷವು ವಾಗ್ದಾನ ಮಾಡಿದೆ.
ಆರ್ಥಿಕ ನೆರವು: ಮಹಿಳೆಯರಿಗೆ ಪ್ರತಿ ತಿಂಗಳು 3,000 ರೂ. ಮತ್ತು ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು 3,000 ರೂ. ಸಹಾಯಧನ ನೀಡಲಾಗುವುದು.
ಸಂಬಳ ಮತ್ತು ಸೌಲಭ್ಯ: ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಜಾರಿ ಮತ್ತು ಆಯುಷ್ಮಾನ್ ಭಾರತ್ ಸೇರಿದಂತೆ ಎಲ್ಲಾ ಕೇಂದ್ರದ ಯೋಜನೆಗಳ ಸಂಪೂರ್ಣ ಅನುಷ್ಠಾನ.
ಮಹಿಳಾ ಆರೋಗ್ಯ: ಉಚಿತ ಲಸಿಕೆ, ಕ್ಯಾನ್ಸರ್ ತಪಾಸಣೆ ಮತ್ತು ಸಾಂಸ್ಥಿಕ ಹೆರಿಗೆ ಸೌಲಭ್ಯಗಳ ಭರವಸೆ.
ಭದ್ರತೆ: ಗಡಿ ಭಾಗದಲ್ಲಿ ಗೋವುಗಳ ಅಕ್ರಮ ಸಾಗಾಣಿಕೆಗೆ ತಡೆ ಮತ್ತು ಮಹಿಳೆಯರ ಆತ್ಮರಕ್ಷಣೆಗಾಗಿ ‘ದುರ್ಗಾ ಸುರಕ್ಷಾ ಸ್ಕ್ವಾಡ್’ ಸ್ಥಾಪನೆ.
ಅಮಿತ್ ಶಾ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿ, “ಅಕ್ರಮ ವಲಸೆ ಮತ್ತು ಸಿಂಡಿಕೇಟ್ ಮೂಲಕ ಅವರು ಮೂರನೇ ಬಾರಿಗೆ ಗೆದ್ದಿದ್ದಾರೆ. ಇಲ್ಲಿ ಜನರು ಭಯ ಮತ್ತು ಹತಾಶೆಯಲ್ಲಿದ್ದಾರೆ. ನಾವು ಪ್ರಬಲ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ಈ ಪ್ರಣಾಳಿಕೆಯು ಕತ್ತಲೆಯಿಂದ ಹೊರಬರುವ ದಾರಿಯಾಗಿದೆ,” ಎಂದು ಹೇಳಿದರು.
ಇತರ ಪ್ರಮುಖ ಘೋಷಣೆಗಳು:
- ಟಿಎಂಸಿ ಸರ್ಕಾರದ ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆಯ ಕುರಿತು ಶ್ವೇತಪತ್ರ ಬಿಡುಗಡೆ.
- ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಭ್ರಷ್ಟಾಚಾರದ ಬಗ್ಗೆ ತ್ವರಿತ ತನಿಖೆ.
- ಆಲೂಗಡ್ಡೆ, ಮಾವು ಮತ್ತು ಭತ್ತದಂತಹ ಕೃಷಿ ಉತ್ಪನ್ನಗಳಿಗೆ ವಿಶೇಷ ಯೋಜನೆಗಳು.
- ಬಂಗಾಳದ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲು ‘ವಂದೇ ಮಾತರಂ ಮ್ಯೂಸಿಯಂ’ ಸ್ಥಾಪನೆ.
- ದಾರ್ಜಿಲಿಂಗ್ ಚಹಾಕ್ಕಾಗಿ ವಿಶೇಷ ಆಯೋಗ ಮತ್ತು ಹಳೆಯ ಚಹಾ ತೋಟಗಳ ಪುನರುಜ್ಜೀವನ.
ರವೀಂದ್ರನಾಥ ಟ್ಯಾಗೋರ್ ಅವರ ಗೀತಾಂಜಲಿಯ ಸಾಲುಗಳನ್ನು ಉಲ್ಲೇಖಿಸಿದ ಶಾ, “ಮನಸ್ಸು ಭಯಮುಕ್ತವಾಗಿದ್ದಾಗ ಮತ್ತು ತಲೆ ಎತ್ತಿ ನಿಂತಾಗ ಅಭಿವೃದ್ಧಿ ಸಾಧ್ಯ. ನಾವು ‘ಭರೋಸೆ’ (ವಿಶ್ವಾಸ) ಮೂಲಕ ಬಂಗಾಳದ ಅಭಿವೃದ್ಧಿಯನ್ನು ಆರಂಭಿಸುತ್ತೇವೆ,” ಎಂದರು. ಅಕ್ರಮ ವಲಸಿಗರ ಬಗ್ಗೆ ಕಠಿಣ ನಿಲುವು ತಳೆದ ಅವರು, ನುಸುಳುಕೋರರನ್ನು ಆಯ್ದು ಹೊರಹಾಕಲಾಗುವುದು (Select, Delete, Deport) ಎಂದು ಪುನರುಚ್ಚರಿಸಿದರು. ಏಪ್ರಿಲ್ 15 ರಿಂದ ಫೆಬ್ರವರಿ 9 ರವರೆಗಿನ ಅವಧಿಯನ್ನು ‘ಭರೋಸೆಯ ಪಯಣ’ ಎಂದು ಬಣ್ಣಿಸಿದ ಅವರು, ಇದು ‘ಸೋನಾರ್ ಬಾಂಗ್ಲಾ’ (ಚಿನ್ನದ ಬಂಗಾಳ) ಕನಸನ್ನು ನನಸು ಮಾಡಲಿದೆ ಎಂದರು.

