ಬೆಂಗಳೂರು: ತಮ್ಮ ವಿರುದ್ಧದ 26 ಕೋಟಿ ರೂಪಾಯಿ ಅಕ್ರಮ ಆಸ್ತಿ ಸಂಪಾದನೆ ಆರೋಪದ ಬಗ್ಗೆ ದಾಖಲೆ ಸಹಿತ ಮಾಹಿತಿ ನೀಡಲು ಲೋಕಾಯುಕ್ತ ಪೊಲೀಸರಿಂದ ಸಚಿವ ಜಮೀರ್ ಅಹ್ಮದ್ ಖಾನ್ ಅವರಿಗೆ ಸಮಯ ನೀಡಲಾಗಿದೆ.
ಸಚಿವರ ಮನವಿಗೆ ಸ್ಪಂದಿಸಿರುವ ಲೋಕಾಯುಕ್ತ ಪೊಲೀಸರು ಆಗಸ್ಟ್ 21ರೊಳಗೆ ಸ್ಪಷ್ಟ ಪುರಾವೆಗಳ ಸಹಿತ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಮೀರ್ ಅಹ್ಮದ್ ಅವರಿಗೆ ತಾತ್ಕಾಲಿಕವಾಗಿ ನಿರಾಳತೆ ಸಿಕ್ಕಿದೆ.
ಅಕ್ರಮ ಆಸ್ತಿ ಪ್ರಕರಣ ಸಂಪಾದನೆ ಪ್ರಕರಣದ ತನಿಖೆಗೆ ನಡೆಸಿ ಕೋರ್ಟ್ ಗೆ ಸಚಿವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಗೆ ರಾಜ್ಯಪಾಲರಿಂದ ಪ್ರಾಸಿಕ್ಯೂಷನ್ ಗೆ ಲೋಕಾಯುಕ್ತ ಪೊಲೀಸರು ಅನುಮತಿ ಕೋರಿದ್ದರು. ಆದರೆ ಪ್ರಾಸಿಕ್ಯೂಷನ್ ಅನುಮತಿಗೆ ಇಂಗ್ಲಿಷ್ ಭಾಷೆಗೆ ತರ್ಜುಮೆ ಮಾಡಿ ವರದಿ ಸಲ್ಲಿಸುವಂತೆ ಲೋಕಭವನ ಕಡತ ಮರಳಿಸಿತ್ತು. ಇದರ ಬೆನ್ನಲ್ಲೇ ಲೋಕಾಯುಕ್ತ ಪೊಲೀಸರಿಗೆ ಅಕ್ರಮ ಆಸ್ತಿ ಸಂಪಾದನೆ ಕುರಿತು ದಾಖಲೆ ನೀಡಲು ಸಚಿವ ಜಮೀರ್ ಅಹ್ಮದ್ ಸಮಯ ಕೋರಿದ್ದು, ಇದೇ ತಿಂಗಳ 21ರೊಳಗೆ ದಾಖಲೆ ಸಹಿತ ಹಾಜರಾಗಿ ನೀಡುವಂತೆ ಲೋಕಾಯುಕ್ತ ಪೊಲೀಸರು ಸೂಚಿಸಿದ್ದಾರೆ.

