ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಸರ್ಕಾರ ರಚನೆಯ ವಿಚಾರದಲ್ಲಿ ಭಾರಿ ಹಗ್ಗಜಗ್ಗಾಟ ನಡೆಯುತ್ತಿದೆ. ಈ ಮಧ್ಯೆ, ನಟ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ತಮಿಳು ಚಿತ್ರರಂಗದ ಮತ್ತೊಬ್ಬ ಖ್ಯಾತ ನಟ ವಿಶಾಲ್ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ಒಂದು ವೇಳೆ ವಿಜಯ್ ಅವರ ಟಿವಿಕೆ ಸರ್ಕಾರ ರಚಿಸದಿದ್ದರೆ, ರಾಜ್ಯದ ಭವಿಷ್ಯಕ್ಕೆ ಅದು ದೊಡ್ಡ ಅಪಾಯ ಎಂದು ವಿಶಾಲ್ ಎಚ್ಚರಿಸಿದ್ದಾರೆ.
ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿರುವ ವಿಶಾಲ್, “ಒಂದು ವೇಳೆ ವಿಜಯ್ ಅವರ ಪಕ್ಷ ಅಧಿಕಾರಕ್ಕೆ ಬರದೇ, ಅನಿರೀಕ್ಷಿತವಾಗಿ ಡಿಎಂಕೆ ಮತ್ತು ಎಐಎಡಿಎಂಕೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದರೆ, ಅದು ಮತದಾರರಿಗೆ ಮತ್ತು ರಾಜ್ಯದ ಜನತೆಗೆ ಮಾಡುವ ದೊಡ್ಡ ದ್ರೋಹವಾಗಲಿದೆ. ಇಂತಹ ಮೈತ್ರಿಯನ್ನು ಜನರು ಎಂದಿಗೂ ಒಪ್ಪುವುದಿಲ್ಲ ಮತ್ತು ಇದು ವಿನಾಶಕಾರಿ ನಿರ್ಧಾರವಾಗಲಿದೆ” ಎಂದು ಗುಡುಗಿದ್ದಾರೆ.
ಯಾಕಾಗಿ ಈ ಗೊಂದಲ? ತಮಿಳುನಾಡಿನ ಒಟ್ಟು 234 ವಿಧಾನಸಭಾ ಕ್ಷೇತ್ರಗಳಲ್ಲಿ ವಿಜಯ್ ಅವರ ಟಿವಿಕೆ 108 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ, ಸರ್ಕಾರ ರಚಿಸಲು ಅಗತ್ಯವಿರುವ ಮ್ಯಾಜಿಕ್ ನಂಬರ್ 118ಕ್ಕೆ ಇನ್ನೂ 10 ಸ್ಥಾನಗಳ ಕೊರತೆಯಿದೆ. ಈ ಹಂತದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು, ವಿಜಯ್ ಅವರಿಗೆ ತಮ್ಮ ಬಹುಮತ ಸಾಬೀತುಪಡಿಸಲು 118 ಶಾಸಕರ ಬೆಂಬಲ ಪತ್ರ ನೀಡುವಂತೆ ಸೂಚಿಸಿದ್ದಾರೆ.
ಶಾಸಕರ ರಾಜೀನಾಮೆ ಎಚ್ಚರಿಕೆ: ಇನ್ನೊಂದೆಡೆ, ವಿಜಯ್ ಅವರ ಪಕ್ಷವು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಅತಿದೊಡ್ಡ ಪಕ್ಷವಾಗಿ ನಮಗೇ ಸರ್ಕಾರ ರಚಿಸಲು ಮೊದಲ ಆದ್ಯತೆ ನೀಡಬೇಕು ಎಂಬುದು ಟಿವಿಕೆ ಆಗ್ರಹವಾಗಿದೆ. ಒಂದು ವೇಳೆ ನಮಗೆ ಅವಕಾಶ ನೀಡದೆ ವಿರೋಧಿ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ಕೈಜೋಡಿಸಿ ಸರ್ಕಾರ ರಚಿಸಲು ಮುಂದಾದರೆ, ಟಿವಿಕೆಯ ಎಲ್ಲಾ 107 ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ಎಚ್ಚರಿಕೆ ನೀಡಿವೆ. ಈ ಬೆಳವಣಿಗೆಯಿಂದಾಗಿ ತಮಿಳುನಾಡು ರಾಜಕೀಯದಲ್ಲಿ ಹೈಡ್ರಾಮಾ ಮುಂದುವರಿದಿದೆ.

