ಪುಣೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯ ವಾಯುಪಡೆಯ (IAF) ವಿಮಾನವೊಂದು ತುರ್ತು ಭೂಸ್ಪರ್ಶ ಮಾಡಿದ ಪರಿಣಾಮ ರನ್ ವೇ ತಾತ್ಕಾಲಿಕವಾಗಿ ಬಂದ್ ಆಗಿದ್ದು, ಕನಿಷ್ಠ ಎಂಟು ವಿಮಾನಗಳನ್ನು ಬೇರೆ ನಗರಗಳಿಗೆ ತಿರುಗಿಸಲಾಗಿದೆ. ವಿಮಾನದ ಸಿಬ್ಬಂದಿ ಸುರಕ್ಷಿತವಾಗಿದ್ದು, ಯಾವುದೇ ನಾಗರಿಕ ಆಸ್ತಿಗೆ ಹಾನಿಯಾಗಿಲ್ಲ.
ಗುರುವಾರ ತಡರಾತ್ರಿ ಭಾರತೀಯ ವಾಯುಪಡೆಯ ಸುಖೋಯ್-30 MKI (Su-30 MKI) ವಿಮಾನವು ಪುಣೆ ರನ್ ವೇನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಹಾರ್ಡ್ ಲ್ಯಾಂಡಿಂಗ್ ಮಾಡಿತು.ಐಎಎಫ್ ಮಾಧ್ಯಮ ಸಮನ್ವಯ ಕೇಂದ್ರದ ಪ್ರಕಾರ, ವಿಮಾನದ ಪೈಲಟ್‌ಗಳು ಸುರಕ್ಷಿತವಾಗಿದ್ದಾರೆ ಮತ್ತು ಯಾವುದೇ ನಾಗರಿಕ ಹಾನಿ ಸಂಭವಿಸಿಲ್ಲ.
ವಿಮಾನಗಳ ಮಾರ್ಗ ಬದಲಾವಣೆ: ಪುಣೆಗೆ ಬರಬೇಕಿದ್ದ ಸುಮಾರು ಎಂಟು ವಿಮಾನಗಳನ್ನು ಸೂರತ್, ಮನೋಹರ್ (ಗೋವಾ), ನವಿ ಮುಂಬೈ, ಚೆನ್ನೈ ಮತ್ತು ಕೊಯಮತ್ತೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಗಿದೆ. ರನ್ ವೇ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಇಂದು (ಏಪ್ರಿಲ್ 18) ಬೆಳಿಗ್ಗೆ 8 ಗಂಟೆಗೆ ಕಾರ್ಯಾಚರಣೆ ಪುನರಾರಂಭಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರ್ಷದ ಎರಡನೇ ಘಟನೆ:
ಈ ವರ್ಷ ಸುಖೋಯ್-30 MKI ವಿಮಾನಕ್ಕೆ ಸಂಬಂಧಿಸಿದ ಎರಡನೇ ಘಟನೆ ಇದಾಗಿದೆ. ಮಾರ್ಚ್ 5 ರಂದು ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಸುಖೋಯ್ ವಿಮಾನವೊಂದು ಪತನಗೊಂಡು ಇಬ್ಬರು ಪೈಲಟ್‌ಗಳು ಸಾವನ್ನಪ್ಪಿದ್ದರು. ಪ್ರಸ್ತುತ ಪುಣೆ ನಿಲ್ದಾಣದಲ್ಲಿ ವಿಮಾನಯಾನ ಕಾರ್ಯಾಚರಣೆಯನ್ನು ಸಹಜ ಸ್ಥಿತಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ.

