ಬೆಂಗಳೂರು: ನವೀಕರಣ ಆಗದ, ರದ್ದಾದ ಮತ್ತು ಮುಟ್ಟುಗೊಲು ಹಾಕಿಕೊಂಡ ಅಬಕಾರಿ ಲೈಸೆನ್ಸ್ ಗಳನ್ನು ನಿಗದಿತ ಮೀಸಲಿಗೆ ಅನುಗುಣವಾಗಿ ಇ-ಹರಾಜು ಮಾಡಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಅನುಮತಿ ನೀಡಿದೆ.
ಇದರೊಂದಿಗೆ ಕಳೆದ ನವಂಬರ್ ನಿಂದ ಸ್ಥಗಿತವಾಗಿದ್ದ 569ಕ್ಕೈ ಹೆಚ್ಚು ಪರವಾನಗಿಗಳ ಇ-ಹರಾಜಿಗೆ ಹಾದಿ ಸುಗಮವಾಗಿದೆ ಎಂದು ಹೇಳಲಾಗಿದೆ.
2025ರ ನವೆಂಬರ್ ನಲ್ಲಿ ಹೈಕೋರ್ಟ್ ಏಕ ಸದಸ್ಯಪೀಠ ಇ- ಹರಾಜು ಪ್ರಕ್ರಿಯೆಗೆ ತಡೆ ನೀಡಿದ್ದನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ಪೀಠದಿಂದ ಈ ಆದೇಶ ನೀಡಲಾಗಿದೆ.
ಸರ್ಕಾರದ ಆದೇಶವು ಮೇಲ್ನೋಟಕ್ಕೆ ನಿಯಮಬಾಹಿರವಾಗಿದೆ. ಅದರ ಪರಿಕಲ್ಪನೆ ಅಗತ್ಯವಿದೆ ಎಂದು ಹೇಳಲಾಗಿದೆ. ಶಾಸನದ ಅಮಾನ್ಯತೆಗೆ ಬಲವಾದ ಕಾರಣ ನೀಡದ ಹೊರತೂ ಅದರ ಕಾರ್ಯಾಚರಣೆಗಳಿಗೆ ತಡೆಯಾಜ್ಞೆ ನೀಡುವುದಿಲ್ಲ ಎಂದು ವಾದ ಪ್ರತಿವಾದ ಆಲಿಸಿದ ನಂತರ ನ್ಯಾಯಾಲಯ ತಿಳಿಸಿದೆ.
ಅಬಕಾರಿ ಪರವಾನಗಿದಾರರಾಗಿರುವ ಅರ್ಜಿದಾರರು 2025 ರಲ್ಲಿ ಎರಡನೇ ತಿದ್ದುಪಡಿ ಮೂಲಕ ಕರ್ನಾಟಕ ಅಬಕಾರಿ ನಿಯಮಗಳು 1968ರ ನಿಯಮ 5, 5ಎ ಮತ್ತು 12ಕ್ಕೆ ತರಲಾದ ತಿದ್ದುಪಡಿಗಳನ್ನು ಏಕ ಸದಸ್ಯ ಪೀಠದ ಮುಂದೆ ಪ್ರಶ್ನಿಸಿದ್ದಾರೆ. ತಿದ್ದುಪಡಿ ಮಾಡಿದ ನಿಯಮಗಳು 5 ಮತ್ತು 5ಎ ಗಳ ಕಾರ್ಯಾಚರಣೆ ಅನುಷ್ಠಾನ ಜಾರಿಗೆ ಏಕ ಸದಸ್ಯ ಪೀಠ ತಡೆ ನೀಡಿದ್ದು, ಅದು ಮಧ್ಯಂತರ ಆದೇಶವಾಗಿದ್ದರೂ ನಂತರ ಅದನ್ನು ವಿಸ್ತರಣೆ ಮಾಡಲಾಗಿದೆ. ಆಕ್ಷೇಪಾರ್ಹ ನಿಯಮಗಳು ಮೇಲ್ನೋಟಕ್ಕೆ ಅಮಾನ್ಯವಾಗಿವೆ ಎಂಬ ಏಕಸದಸ್ಯ ಪೀಠದ ನಿಲುವನ್ನು ಒಪ್ಪಲಾಗದು. ಅರ್ಜಿದಾರರು ಆಕ್ಷೇಪಾರ್ಹ ನಿಯಮಗಳಿಗೆ ತಡೆ ಪಡೆಯಲು ನಿಯಮಗಳನ್ನು ಕಾನೂನು ಬಾಹಿರವೆಂದು ಕರೆದಿದ್ದಾರೆ ಎಂದು ವಿಭಾಗೀಯ ಪೀಠ ತಿಳಿಸಿದೆ.

