ನಾಸಿಕ್: ಮಹಾರಾಷ್ಟ್ರದಲ್ಲಿ ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆದಿದ್ದಕ್ಕಾಗಿ 19 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅಹಲ್ಯಾನಗರ ಜಿಲ್ಲೆಯ ಕರ್ಜತ್ ತಾಲ್ಲೂಕಿನ ಜಲಾಲ್ಪುರ್ ಗ್ರಾಮದ ತನ್ನ ಮನೆಯಲ್ಲಿ ಶನಿವಾರ 19 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನೀಟ್ ಮರು ಪರೀಕ್ಷೆಯಲ್ಲಿ ಅಂಕ ಪಡೆದಿದ್ದಕ್ಕೆ ನಿರಾಶೆಗೊಂಡಿದ್ದಾಳೆಂದು ಸ್ಥಳದಲ್ಲಿ ಪತ್ತೆಯಾದ ಒಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಸಮಯದಲ್ಲಿ ಅಂಕಿತಾ ಮನೆಯಲ್ಲಿ ಒಬ್ಬಳೇ ಇದ್ದಳು, ಆಕೆಯ ಪೋಷಕರು ಮತ್ತು ಅಣ್ಣ ಆಶಾಢ ಏಕಾದಶಿಗೆ ಪಂಢರಪುರಕ್ಕೆ ಹೋಗಿದ್ದರು. ಸಂಜೆ 5.30 ರ ಸುಮಾರಿಗೆ, ಹತ್ತಿರದ ಸಂಬಂಧಿಕರು ಮನೆಗೆ ಹೋಗಿ ಪರಿಶೀಲಿಸಿದಾಗ ಅವರು ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ ಎಂದು ಕರ್ಜತ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಹನುಮಾನ್ ಗಾಯಕ್ವಾಡ್ ತಿಳಿಸಿದ್ದಾರೆ.
ಮೃತಳನ್ನು ಅಂಕಿತಾ ಸಾಂಗ್ಲೆ ಎಂದು ಗುರುತಿಸಲಾಗಿದೆ. ಅವರು ಆನ್‌ಲೈನ್ ಕೋಚಿಂಗ್ ತರಗತಿಗಳ ಮೂಲಕ ನೀಟ್‌ಗೆ ತಯಾರಿ ನಡೆಸುತ್ತಿದ್ದರು. ವಿದ್ಯಾರ್ಥಿನಿ ಬರೆದಿದ್ದಾರೆಂದು ಹೇಳಲಾದ ನೋಟ್ ಅನ್ನು ಮನೆಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಗಾಯಕ್ವಾಡ್ ಹೇಳಿದ್ದಾರೆ.
ನೀಟ್ ಮರುಪರೀಕ್ಷೆಯಲ್ಲಿನ ತನ್ನ ಸಾಧನೆಯಿಂದ ನಿರಾಶೆಗೊಂಡ ಕಾರಣ ತಾನು ಈ ಆತ್ಮಹತ್ಯೆ ನಿರ್ಧಾರ ಕೈಗೊಂಡಿರುವ ಬಗ್ಗೆ ನೋಟ್ ನಲ್ಲಿ ಹೇಳಲಾಗಿದೆ. ಅವರು ತಮ್ಮ ಪೋಷಕರು ಮತ್ತು ಸಹೋದರನ ಬಳಿ ಕ್ಷಮೆಯಾಚಿಸಿದ್ದಾರೆ, ಅವರ ನಿರೀಕ್ಷೆಗಳನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ ಮತ್ತು ತಮ್ಮನ್ನು ಸರಾಸರಿ ವಿದ್ಯಾರ್ಥಿನಿ ಎಂದು ಹೇಳಿಕೊಂಡಿದ್ದಾರೆ. ಅಂಕಿತಾ ಮರುಪರೀಕ್ಷೆಯಲ್ಲಿ 177 ರ ಕಟ್ ಆಫ್ ವಿರುದ್ಧ 166 ಅಂಕಗಳನ್ನು ಗಳಿಸಿದ್ದರು ಎಂದು ಗಾಯಕ್ವಾಡ್ ಹೇಳಿದರು. ಕರ್ಜತ್ ಪೊಲೀಸರು ಆಕಸ್ಮಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ.
ಈ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ ಎನ್‌ಸಿಪಿ(ಎಸ್‌ಪಿ) ಶಾಸಕ ರೋಹಿತ್ ಪವಾರ್, “ದೆಹಲಿಯಲ್ಲಿ ವಿದ್ಯಾರ್ಥಿ ಚಳವಳಿ ಯಶಸ್ಸನ್ನು ಸಾಧಿಸುತ್ತಿರುವಾಗಲೂ ಅತ್ಯಂತ ದುಃಖಕರ ಸುದ್ದಿಯ ಬಗ್ಗೆ ತಿಳಿಯಿತು. ನೀಟ್ ಅವ್ಯವಸ್ಥೆಯ ನಡುವೆ ಆತ್ಮವಿಶ್ವಾಸವನ್ನು ಕಳೆದುಕೊಂಡ ಕರ್ಜತ್‌ನ ಜಲಾಲ್ ಪುರದ ವಿದ್ಯಾರ್ಥಿನಿ ಅಂಕಿತಾ ತನ್ನ ಜೀವನವನ್ನು ಕೊನೆಗೊಳಿಸಿಕೊಂಡಿದ್ದಾಳೆ. ಅವಳ ಕುಟುಂಬಕ್ಕೆ ಆಗಿರುವ ದುಃಖದಲ್ಲಿ ನಾವು ಭಾಗಿಯಾಗಿದ್ದೇವೆ. ಅಂಕಿತಾಗೆ ಹೃತ್ಪೂರ್ವಕ ಗೌರವಗಳು ಎಂದು ತಿಳಿಸಿದ್ದಾರೆ.
ಹಿನ್ನಡೆಗಳ ನಂತರ ಭರವಸೆ ಕಳೆದುಕೊಳ್ಳಬೇಡಿ ಎಂದು ಪವಾರ್ ವಿದ್ಯಾರ್ಥಿಗಳಿಗೆ ಮನವಿ ಮಾಡಿದ್ದು, ನಿಮ್ಮ ಕುಟುಂಬದ ಬಗ್ಗೆ ಯೋಚಿಸಿ. ಯಶಸ್ಸಿಗೆ ಹೋರಾಡುವುದಕ್ಕಿಂತ ಪರ್ಯಾಯವಿಲ್ಲ. ನಿಮ್ಮೆಲ್ಲರಿಗೂ ಸಾಮರ್ಥ್ಯವಿದೆ, ಮತ್ತು ನೀವು ಶ್ರಮಿಸಿದರೆ, ಯಶಸ್ಸನ್ನು ಸಾಧಿಸುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ, ಅದನ್ನು ಎಂದಿಗೂ ಮರೆಯಬೇಡಿ ಎಂದು ಅವರು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.

