ಹೈದರಾಬಾದ್‌ನ ಮಾಧಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ರಸ್ತೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆದಿದೆ. ಇನ್-ಆರ್ಬಿಟ್ ಮಾಲ್ ಎದುರು ನಡೆದ ರಸ್ತೆ ಅಪಘಾತದಲ್ಲಿ 26 ವರ್ಷದ ಮಾಲ್ ಉದ್ಯೋಗಿ ಭಾರತಿ ಮುಖಿ ಮೃತಪಟ್ಟ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ. ಈ ಸಂಬಂಧ ಉದ್ಯಮಿ ಹಾಗೂ ಸಂಸದ ಲಿಂಗಮನೇನಿ ರಮೇಶ್ ಅವರ ಪುತ್ರ ಲಿಂಗಮನೇನಿ ಸಂಜೂಷ್ ಅವರನ್ನು ಆರೋಪಿಯನ್ನಾಗಿ ಸೇರಿಸಿ ಪ್ರಕರಣ ದಾಖಲಿಸಲಾಗಿದೆ.
ಅಸಲಿಗೆ ಏನಾಯಿತು?
ದೂರುದಾರರು ನೀಡಿರುವ ಮಾಹಿತಿಯ ಪ್ರಕಾರ, ಇನ್-ಆರ್ಬಿಟ್ ಮಾಲ್‌ನಲ್ಲಿರುವ ಪ್ರತಿಷ್ಠಿತ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ ಭಾರತಿ ಮುಖಿ, ತನ್ನ ಸಹೋದ್ಯೋಗಿ ಪೂಜಾ ಅಶೋಕ್ ಅವರೊಂದಿಗೆ ಈ ತಿಂಗಳ 16ರಂದು ಮಧ್ಯಾಹ್ನ ಐಟಿಸಿ ಕೊಹಿನೂರ್‌ಗೆ ತೆರಳಿ ವಾಪಸ್ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ.
ರಸ್ತೆ ದಾಟುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಆಸ್ಟನ್ ಮಾರ್ಟಿನ್ ಕಾರು ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗಂಭೀರವಾಗಿ ಗಾಯಗೊಂಡ ಭಾರತಿ ಮುಖಿ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮೃತ ಯುವತಿಯ ಮ್ಯಾನೇಜರ್ ನೀಡಿದ ದೂರಿನ ಆಧಾರದ ಮೇಲೆ ಮಾಧಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ವ್ಯಕ್ತಿಯ ಸಾವಿಗೆ ಕಾರಣವಾದ ಆರೋಪದಡಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 106(1) ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ, ಮುಂದಿನ ತನಿಖೆ ನಡೆಸುತ್ತಿದ್ದಾರೆ.

