HomeHealthಗರ್ಭಕಂಠದ ಕ್ಯಾನ್ಸರ್ ತಡೆಗೆ HPV ಲಸಿಕಾ ಅಭಿಯಾನ: ವಿಶೇಷತೆಗಳು

ಗರ್ಭಕಂಠದ ಕ್ಯಾನ್ಸರ್ ತಡೆಗೆ HPV ಲಸಿಕಾ ಅಭಿಯಾನ: ವಿಶೇಷತೆಗಳು

ಗರ್ಭಕಂಠದ ಕ್ಯಾನ್ಸರ್ ಭಾರತದಲ್ಲಿ ಮಹಿಳೆಯರಲ್ಲಿ ಎರಡನೇ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್ ಎಂದು ಪರಿಗಣಿಸಲಾಗಿದ್ದು, 2022ರ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ವಾರ್ಷಿಕವಾಗಿ 79,000ಕ್ಕೂ ಹೆಚ್ಚು ಹೊಸ ಪ್ರಕರಣಗಳು ಮತ್ತು 34,800 ಸಾವುಗಳು ಇದರಿಂದ ಸಂಭವಿಸುತ್ತಿವೆ.

ಗರ್ಭಕಂಠದ ಕ್ಯಾನ್ಸರ್‌ಗೆ ಒಳಗಾಗುವುದನ್ನು ತಡೆಗಟ್ಟಲು ಆರೋಗ್ಯ ಇಲಾಖೆ ವತಿಯಿದ ಮುನ್ನೆಚ್ಚರಿಕ ಕ್ರಮವಾಗಿ 14 ರಿಂದ 15 ವರ್ಷದೊಳಗಿನ ಎಲ್ಲಾ ಹೆಣ್ಣುಮಕ್ಕಳಿಗೆ ಉಚಿತವಾಗಿ ಹೆಚ್.ಪಿ.ವಿ. ಲಸಿಕೆ ನೀಡುವ (3 ತಿಂಗಳ) ಅಭಿಯಾನವನ್ನು ಆರಂಭಿಸಲು ಸಿದ್ದತೆ ಮಾಡಿಕೊಂಡಿದೆ.

ಉತ್ತರ ಕನ್ನಡ ಜಿಲ್ಲೆಯಾದ್ಯಂತ 14 ರಿಂದ 15 ವರ್ಷದೊಳಗಿನ 14,835 ಹೆಣ್ಣುಮಕ್ಕಳಿಗೆ ಉಚಿತವಾಗಿ ಹೆಚ್.ಪಿ.ವಿ. ಲಸಿಕೆ ನೀಡಲು ಗುರಿ ಹೊಂದಲಾಗಿದ್ದು, ಈಗಾಗಲೇ ಜಿಲ್ಲೆಗೆ ಮೊದಲ ಹಂತದಲ್ಲಿ 5,300 ಲಸಿಕೆಗಳು ಆಗಮಿಸಿದ್ದು, ಜಿಲ್ಲೆಗೆ ಅಗತ್ಯವಿರುವಷ್ಟು, ಸಂಖ್ಯೆಯಲ್ಲಿ ಲಸಿಕೆಯನ್ನು ಪೂರೈಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಿದ್ದವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಲಸಿಕೆಯನ್ನು ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನೀಡಲು ಸಿದ್ದತೆಗಳನ್ನು ಮತ್ತು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ.

ಲಸಿಕೆಯ ಬಗ್ಗೆ ಮಾಹಿತಿ: ಹೆಚ್.ಪಿ.ವಿ. ಲಸಿಕೆ ನೀಡುವ ವಿಧಾನಗಳ ಬಗ್ಗೆ ಮತ್ತು ಲಸಿಕೆಯ ಪರಿಣಾಮಗಳ ಕುರಿತಂತೆ ಆರೋಗ್ಯ ಇಲಾಖೆಯ ಎಲ್ಲಾ ವೈದ್ಯರು ಮತ್ತು ಶುಶ್ರೂಷಕ ಸಿಬ್ಬಂದಿಗೆ ಅಗತ್ಯ ತರಬೇತಿಯನ್ನು ನೀಡಲಾಗಿದ್ದು, ಈ ಲಸಿಕೆಯನ್ನು ಶಾಲೆಗಳಲ್ಲಿ ನೀಡದ ಕಾರಣ, ಮಕ್ಕಳು ತಮ್ಮ ಪೋಷಕರೊಂದಿಗೆ ಆರೋಗ್ಯ ಕೇಂದ್ರಗಳಿಗೆ ಆಗಮಿಸಿ ಲಸಿಕೆ ಪಡೆಯಬೇಕಾಗಿದ್ದು, ಲಸಿಕೆಯ ಮಹತ್ವ ಮತ್ತು ಇದನ್ನು ಪಡೆಯುವಂತೆ ಎಲ್ಲಾ ಶಾಲೆಗಳಲ್ಲಿ ಶೀಘ್ರದಲ್ಲಿ ಪೋಷಕರ ಮತ್ತು ಶಿಕ್ಷಕರ ಸಭೆಯನ್ನು ಕರೆದು, ಸಭೆಯಲ್ಲಿ ಈ ಬಗ್ಗೆ ಮಾಹಿತಿ ನೀಡುವಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ತಿಳಿಸಲಾಗಿದೆ.

HPV ಎಂದು ಕರೆಯಲ್ಪಡುವ ಹ್ಯೂಮನ್ ಪ್ಯಾಪಿಲೋಮವೈರಸ್ ಸೋಂಕು ಗರ್ಭಕಂಠದ ಕ್ಯಾನ್ಸರ್ ಆಗಿ ಪರಿವರ್ತನೆಯಾಗಲಿದ್ದು, ಆರಂಭಿಕ ತಪಾಸಣೆಯ ಮೂಲಕ ಗರ್ಭಕಂಠದ ಕ್ಯಾನ್ಸರ್ ಅನ್ನು ಹೆಚ್ಚಾಗಿ ತಡೆಗಟ್ಟಬಹುದಾದರೂ, ಲಸಿಕಾ ಕಾರ್ಯಕ್ರಮವು ಹೆಚ್.ಪಿ.ವಿ. ಸೋಂಕು ಕ್ಯಾನ್ಸರ್ ಆಗಿ ಪರಿವರ್ತನೆಯಾಗುವ ಮೊದಲೇ ಅದನ್ನು ತಡೆಗಟ್ಟುವ ಮೂಲಕ ಕ್ಯಾನ್ಸರ್ ಸವಾಲನ್ನು ನೇರವಾಗಿ ಪರಿಹರಿಸಲಿದೆ.

ಅಲ್ಲದೇ ಈ ಲಸಿಕೆಯು ಹೆಚ್.ಪಿ.ವಿ. ಯಿಂದ ಉಂಟಾಗುವ ಬಾಯಿ, ಗಂಟಲು, ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಗಳಿಂದಲೂ ರಕ್ಷಿಸುತ್ತದೆ. ಈಗಾಗಲೇ ವಿಶ್ವದ 160ಕ್ಕೂ ಹೆಚ್ಚು ದೇಶಗಳಲ್ಲಿ ಈ ಲಸಿಕೆಯನ್ನು ನೀಡಲಾಗುತ್ತಿದ್ದು, ಲಸಿಕೆಯ ನಂತರ ಹೆಚ್.ಪಿ.ವಿ. ಸೋಂಕಿನ ಪ್ರಮಾಣ, ಕ್ಯಾನ್ಸರ್ ಪೂರ್ವದ ಗಾಯಗಳು ಮತ್ತು ಗರ್ಭಕಂಠದ ಕ್ಯಾನ್ಸರ್ ಸಂಭವಿಸುವಿಕೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ 14 ರಿಂದ 15 ವರ್ಷದ ಒಳಗಿನ ಹೆಣ್ಣುಮಕ್ಕಳಿಗೆ ಹೆಚ್.ಪಿ.ವಿ. ಲಸಿಕೆ ನೀಡಲು ಈಗಾಗಲೇ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಗತ್ಯ ಸೂಚನೆಗಳನ್ನು ನೀಡಲಾಗಿದೆ.

“ಗರ್ಭಕಂಠದ ಕ್ಯಾನ್ಸರ್‌ಗೆ ಒಳಗಾಗುವುದನ್ನು ತಡೆಗಟ್ಟಲು ನೀಡಲಾಗುತ್ತಿರುವ ಈ ಲಸಿಕೆಯನ್ನು ಜಿಲ್ಲೆಯ ಅರ್ಹ ಎಲ್ಲಾ ಹೆಣ್ಣುಮಕ್ಕಳು ಪಡೆಯುವ ಮೂಲಕ ಭವಿಷ್ಯದಲ್ಲಿ ಗರ್ಭಕಂಠದ ಕ್ಯಾನ್ಸರ್ಗೆ ಒಳಗಾಗುವುದರಿಂದ ರಕ್ಷಣೆ ಪಡೆಯಬೇಕು”  ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶಂಕರ್ ರಾವ್ ಮನವಿ ಮಾಡಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular