ರಾಯಚೂರು: ಕರೆಂಟ್ ಶಾಕ್ ನಿಂದ ಸ್ನೇಹಿತ ಸಾವನ್ನಪ್ಪುತ್ತಿದ್ದಂತೆ ಭಯಗೊಂಡ ಅಪ್ರಾಪ್ತ ಬಾಲಕರು ಆತನ ಶವವನ್ನು ಚೀಲದಲ್ಲಿ ತುಂಬಿ ಕೆರೆಗೆ ಎಸೆದಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಕರಡಕಲ್ ಕೆರೆಯಲ್ಲಿ ನಡೆದಿದೆ.
ಕಾರ್ತಿಕ್ (15) ಮೃತ ಬಾಲಕ. ಮಾರ್ಚ್ ರಂದು ಗುಂಡಸಾಗರದ ಕಾರ್ತಿಕ್ ಲಿಂಗಸಗೂರುಗೆ ಬಂದಿದ್ದ. ಶಾಲಾ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಸ್ನೇಹಿತರೆಲ್ಲ ಸೇರಿ ಹೊಸ ಬಟ್ಟೆ ಖರೀದಿಸಲು ಲಿಂಗಸಗೂರು ಪಟ್ಟಣಕ್ಕೆ ಹೋಗುತ್ತಿದ್ದರು. ಈವೇಳೆ ಮಾರ್ಗ ಮಧ್ಯೆ ಬಾಯಾರಿಕೆಯಾಗಿದ್ದರಿಂದ ಸಮೀಪವೇ ಇದ್ದ ಬೋರ್ ವೆಲ್ ಬಳಿ ನೀರು ಕುಡಿಯಲು ಕಾರ್ತಿಕ್ ಹೋಗಿದ್ದಾನೆ.
ಈ ವೇಳೆ ಕಾರ್ತಿಕ್ ಗೆ ಕರೆಂಟ್ ಶಾಕ್ ಹೊಡೆದಿದೆ. ಉಳಿದ ಸ್ನೇಹಿತರು ಆತನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ಮಾರ್ಗ ಮಧ್ಯೆಯೇ ಕಾರ್ತಿಕ್ ಕೊನೆಯುಸಿರೆಳೆದಿದ್ದಾನೆ. ಇದರಿಂದ ಭಯಗೊಂಡ ಆತನ ಸ್ನೇಹಿತರು, ಕಾರ್ತಿಕ್ ಮೃತದೇಹವನ್ನು ಚೀಲದಲ್ಲಿ ತುಂಬಿ ಕರಡಕಲ್ ಕೆರೆಗೆ ಎಸೆದಿದ್ದಾರೆ. ಈಗ ಬಾಲಕನ ಶವ ನೀರಿನಲ್ಲಿ ತೇಲುತ್ತಿರುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತನಿಖೆ ನಡೆಸಿದಾಗಲೇ ಬಾಲಕನ ಸಾವಿನ ರಹಸ್ಯ ಬಯಲಾಗಿದೆ.

