ಸಾಮಾನ್ಯವಾಗಿ ಮದುವೆ, ಮುಂಜಿ ಅಥವಾ ದೂರದ ಪ್ರವಾಸಗಳಿಗೆ ಹೋಗಬೇಕೆಂದರೆ ನಾವು ಖಾಸಗಿ ಬಸ್ ಅಥವಾ ಟೆಂಪೋ ಟ್ರಾವೆಲರ್‌ಗಳನ್ನು ಹುಡುಕುತ್ತೇವೆ. ಆದರೆ, ಈಗ ನೀವು ರಾಜನಂತೆ ಇಡೀ ರೈಲು ಅಥವಾ ಒಂದು ಪ್ರತ್ಯೇಕ ಕೋಚ್ ಅನ್ನೇ ನಿಮ್ಮ ಕುಟುಂಬಕ್ಕಾಗಿ ಬಾಡಿಗೆಗೆ ಪಡೆಯಬಹುದು!ಭಾರತೀಯ ರೈಲ್ವೆಯ ಐಆರ್‌ಸಿಟಿಸಿ (IRCTC) ತನ್ನ ‘ಫುಲ್ ಟಾರಿಫ್ ರೇಟ್’ (FTR) ಯೋಜನೆಯಡಿ ಸಾರ್ವಜನಿಕರಿಗೆ ಈ ಭರ್ಜರಿ ಅವಕಾಶ ನೀಡಿದೆ. ರೈಲಿನಲ್ಲಿ ನಿಮ್ಮವರ ಜೊತೆ ಮಾತ್ರವೇ ಪ್ರಯಾಣಿಸುತ್ತಾ, ಹರಟೆ ಹೊಡೆಯುತ್ತಾ ಸಂಭ್ರಮದಿಂದ ಮದುವೆ ಮನೆಗೆ ಹೋಗಬೇಕೆಂಬ ಆಸೆ ನಿಮಗಿದ್ದರೆ, ಈ ಬುಕ್ಕಿಂಗ್ ಪ್ರಕ್ರಿಯೆ, ತಗಲುವ ವೆಚ್ಚ ಮತ್ತು ನಿಯಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೌದು. ಭಾರತೀಯ ರೈಲ್ವೆಯಲ್ಲೂ ನೀವು ಇಡೀ ರೈಲನ್ನು ಅಥವಾ ಒಂದು ಪ್ರತ್ಯೇಕ ಕೋಚ್ ಅನ್ನು ನಿಮ್ಮ ಖಾಸಗಿ ಕಾರ್ಯಕ್ರಮಗಳಿಗಾಗಿ ಬಾಡಿಗೆಗೆ ಪಡೆಯಬಹುದು!ಐಆರ್‌ಸಿಟಿಸಿ (IRCTC) ತನ್ನ ಫುಲ್ ಟಾರಿಫ್ ರೇಟ್ (FTR) ಪೋರ್ಟಲ್ ಮೂಲಕ ಈ ವಿಶೇಷ ಸೌಲಭ್ಯವನ್ನು ಕಲ್ಪಿಸಿದೆ.
ಬುಕ್ಕಿಂಗ್ ಮಾಡುವುದು ಹೇಗೆ?
ಪ್ರಯಾಣಿಕರು ಪ್ರತ್ಯೇಕ ಕೋಚ್ ಅಥವಾ ಇಡೀ ರೈಲನ್ನು ಬುಕ್ ಮಾಡಲು ಐಆರ್‌ಸಿಟಿಸಿಯ ಅಧಿಕೃತ ವೆಬ್‌ಸೈಟ್ ftr.irctc.co.in ಗೆ ಭೇಟಿ ನೀಡಬೇಕು. ಇಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದು.
ಸೆಕ್ಯೂರಿಟಿ ಡೆಪಾಸಿಟ್ ಎಷ್ಟು?
ರೈಲು ಅಥವಾ ಕೋಚ್ ಬುಕ್ ಮಾಡಲು ಮೊದಲು ಭದ್ರತಾ ಠೇವಣಿ (Security Deposit) ಪಾವತಿಸಬೇಕಾಗುತ್ತದೆ:
- ಒಂದು ಕೋಚ್ ಬುಕ್ ಮಾಡಲು: 50,000 ರೂಪಾಯಿ ಡೆಪಾಸಿಟ್ ನೀಡಬೇಕು.
- ಇಡೀ ರೈಲು (18 ಕೋಚ್‌ಗಳು) ಬುಕ್ ಮಾಡಲು: ಬರೋಬ್ಬರಿ 9 ಲಕ್ಷ ರೂಪಾಯಿ ಡೆಪಾಸಿಟ್ ಪಾವತಿಸಬೇಕು.
ಗಮನಿಸಿ: ಈ ಡೆಪಾಸಿಟ್ ಮೊತ್ತವು ಕೇವಲ ಮುಂಗಡ ಮಾತ್ರ. ಪ್ರಯಾಣ ಮುಗಿದ ನಂತರ ಅಂತಿಮ ಬಿಲ್‌ನಲ್ಲಿ ಈ ಹಣವನ್ನು ಅಡ್ಜಸ್ಟ್ ಮಾಡಲಾಗುತ್ತದೆ. ಬಾಡಿಗೆ ದರವು ಸಾಮಾನ್ಯ ಟಿಕೆಟ್ ದರಕ್ಕಿಂತ 30% ಹೆಚ್ಚಿರುತ್ತದೆ ಮತ್ತು ಹೆಚ್ಚುವರಿ ಸರ್ವಿಸ್ ಚಾರ್ಜ್ ಅನ್ವಯಿಸುತ್ತದೆ.
ಎಷ್ಟು ದಿನ ಮುಂಚಿತವಾಗಿ ಬುಕ್ ಮಾಡಬೇಕು?
- ಕನಿಷ್ಠ ಅವಧಿ: ಪ್ರಯಾಣದ ದಿನಾಂಕಕ್ಕಿಂತ ಕನಿಷ್ಠ 30 ದಿನಗಳ ಮೊದಲು ಬುಕ್ ಮಾಡಬೇಕು.
- ಗರಿಷ್ಠ ಅವಧಿ: ಪ್ರಯಾಣಕ್ಕೆ 6 ತಿಂಗಳ ಮೊದಲೇ ಬುಕ್ಕಿಂಗ್ ಮಾಡಲು ಅವಕಾಶವಿದೆ.
ನಿಯಮಗಳೇನು?
ಕೇವಲ ಮೇಲ್ (Mail) ಅಥವಾ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಮಾತ್ರ ಈ ಸೌಲಭ್ಯ ಲಭ್ಯ.ವಂದೇ ಭಾರತ್, ರಾಜಧಾನಿ ಮತ್ತು ಶತಾಬ್ದಿಯಂತಹ ಪ್ರೀಮಿಯಂ ರೈಲುಗಳನ್ನು ಈ ರೀತಿ ಪ್ರತ್ಯೇಕವಾಗಿ ಬುಕ್ ಮಾಡಲು ಅವಕಾಶವಿಲ್ಲ. ದೊಡ್ಡ ತಂಡಗಳ ಪ್ರವಾಸ ಅಥವಾ ಮದುವೆ ಮೆರವಣಿಗೆಗೆ ಇದು ಅತ್ಯಂತ ಆರಾಮದಾಯಕ ಮತ್ತು ಸ್ಮರಣೀಯ ಅನುಭವ ನೀಡುತ್ತದೆ.

