ಬಾಲಿವುಡ್‌ನ ಯುವ ನಟಿ ವೇದಿಕಾ ಪಿಂಟೊ ತಮ್ಮ ಆರೋಗ್ಯಕರ ದೇಹದಾಡ್ಯತೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಕೇವಲ ವ್ಯಾಯಾಮವಷ್ಟೇ ಅಲ್ಲದೆ, ಆಹಾರ ಕ್ರಮ ಹಾಗೂ ದೈನಂದಿನ ಜೀವನಶೈಲಿಯಲ್ಲಿ ಸಮತೋಲನ ಕಾಯ್ದುಕೊಳ್ಳುವ ಮೂಲಕ ಅವರು ಫಿಟ್ ಆಗಿರಲು ಆದ್ಯತೆ ನೀಡುತ್ತಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಅವರು ತಮ್ಮ ಫಿಟ್‌ನೆಸ್ ಹಾಗೂ ಆಹಾರ ಪದ್ಧತಿಯ ಬಗ್ಗೆ ಹಲವು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ವೇದಿಕಾ ತಮ್ಮ ಫಿಟ್‌ನೆಸ್ ದಿನಚರಿಯಲ್ಲಿ ವೈವಿಧ್ಯತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಜಿಮ್‌ನಲ್ಲಿ ಭಾರ ಎತ್ತುವ ವ್ಯಾಯಾಮದ ಜತೆಗೆ ಪೈಲೇಟ್ಸ್ ಅಭ್ಯಾಸ ಮಾಡುವುದನ್ನು ಅವರು ರೂಢಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ವೇಟ್ ಲಿಫ್ಟಿಂಗ್ ದೇಹದ ಶಕ್ತಿ ಹಾಗೂ ಮಾಂಸಖಂಡಗಳ ಬೆಳವಣಿಗೆಗೆ ಸಹಕಾರಿಯಾದರೆ, ಪೈಲೇಟ್ಸ್ ಮೈಬಾಗುವಿಕೆಯನ್ನು ಹೆಚ್ಚಿಸಿ ದೇಹಕ್ಕೆ ಚುರುಕುತನ ಹಾಗೂ ನಮ್ಯತೆಯನ್ನು ನೀಡುತ್ತದೆ ಎಂದು ತಿಳಿಸಿದ್ದಾರೆ.
ಆಹಾರ ಪದ್ಧತಿಯ ವಿಚಾರದಲ್ಲೂ ವೇದಿಕಾ ಬಹಳ ಕಟ್ಟುನಿಟ್ಟಾದ ಮತ್ತು ಸೃಜನಶೀಲವಾದ ದಾರಿಯನ್ನು ಅನುಸರಿಸುತ್ತಾರೆ. ಆರೋಗ್ಯಕರ ಆಹಾರದ ಜತೆಗೆ ಬಾಯಿಗೆ ರುಚಿಕರವಾದ ತಿಂಡಿಗಳನ್ನು ತಿನ್ನುವುದನ್ನು ಅವರು ಇಷ್ಟಪಡುತ್ತಾರೆ. ಪ್ರೋಟೀನ್ ಯುಕ್ತ ಪ್ಯಾನ್‌ಕೇಕ್‌ಗಳು ಇವರ ದಿನದ ಮೆಚ್ಚಿನ ಉಪಹಾರವಾಗಿದ್ದು, ಇದು ಸಿಹಿ ತಿನ್ನುವ ಆಸೆಯನ್ನು ತಣಿಸುವುದರ ಜತೆಗೆ ದೇಹಕ್ಕೆ ಅಗತ್ಯವಾದ ಪೋಷಕಾಂಶ ಒದಗಿಸುತ್ತದೆ. ಅಡುಗೆ ಮನೆಯಲ್ಲೇ ಆರೋಗ್ಯ ಹಾಗೂ ಸಂತೋಷ ಎರಡೂ ಅಡಗಿವೆ ಎಂದು ಅವರು ನಂಬಿದ್ದಾರೆ. ಇನ್‌ಸ್ಟಾಗ್ರಾಮ್ ಮೂಲಕ ಹೊಸ ಪಾಕವಿಧಾನಗಳನ್ನು ತಿಳಿದುಕೊಂಡು, ತಮ್ಮ ಮನೆಯ ಅಡುಗೆಯವರಾದ ಸೋನಿ ಅವರೊಂದಿಗೆ ಪ್ರಯೋಗಗಳನ್ನು ಮಾಡುವುದಾಗಿ ನಟಿ ಹೇಳಿಕೊಂಡಿದ್ದಾರೆ.
ಇನ್ನು ದೈನಂದಿನ ಮುಂಜಾನೆಯ ದಿನಚರಿಯ ಬಗ್ಗೆ ಮಾತನಾಡಿರುವ ವೇದಿಕಾ, ಇದು ಇನ್ನೂ ಪ್ರಯೋಗದ ಹಂತದಲ್ಲಿದೆ ಎಂದು ತಿಳಿಸಿದ್ದಾರೆ. ಉಸಿರಾಟದ ವ್ಯಾಯಾಮಗಳು ಹಾಗೂ ಸ್ಟ್ರೆಚಿಂಗ್ ಅಭ್ಯಾಸಗಳನ್ನು ಮಾಡಲು ಪ್ರಯತ್ನಿಸುತ್ತಿದ್ದರೂ, ಬೆಳಗಿನ ವೇಳೆ ಮೊಬೈಲ್ ದೂರವಿಡುವುದು ತಮಗೆ ಕಷ್ಟವಾಗುತ್ತಿದೆ ಎಂದು ಮುಕ್ತವಾಗಿ ಒಪ್ಪಿಕೊಂಡಿದ್ದಾರೆ. ಆದಾಗ್ಯೂ, ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ತಮ್ಮ ಸಾಕು ನಾಯಿ ಬೆಂಜಿ ಜತೆಗೆ ಕಾಲ ಕಳೆಯುವುದನ್ನು ಮಾತ್ರ ಅವರು ತಪ್ಪಿಸುವುದಿಲ್ಲ. ಇದು ತಮಗೆ ದಿನವಿಡೀ ಉತ್ಸಾಹ ತುಂಬಲು ಅಗತ್ಯವಿರುವಷ್ಟು ಖುಷಿಯನ್ನು ನೀಡುತ್ತದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

