ತುರ್ತು ಸಂದರ್ಭಗಳಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ (PF) ಒಂದು ದೊಡ್ಡ ಆರ್ಥಿಕ ಆಸರೆಯಾಗಿದೆ. ಈ ಮೊದಲು ಪಿಎಫ್ ಹಣ ಕೈಗೆ ಸಿಗಲು ತಿಂಗಳುಗಟ್ಟಲೆ ಸಮಯ ಹಿಡಿಯುತ್ತಿತ್ತು, ಆದರೆ ಈಗ ನಿಯಮಗಳು ಸರಳವಾಗಿದ್ದು ಕೇವಲ ಕೆಲವೇ ದಿನಗಳಲ್ಲಿ ಹಣ ಖಾತೆಗೆ ಜಮೆಯಾಗುತ್ತಿದೆ.
ತುರ್ತು ಆರ್ಥಿಕ ಅಗತ್ಯಗಳಿಗಾಗಿ ಪಿಎಫ್ (PF) ಹಣ ಹಿಂಪಡೆಯುವ ಪ್ರಕ್ರಿಯೆಯನ್ನು ಈಪಿಯಫ್ಒ (EPFO) ಗಣನೀಯವಾಗಿ ಸರಳಗೊಳಿಸಿದೆ. ವಿಶೇಷವೆಂದರೆ, ಒಂದು ತಿಂಗಳಲ್ಲಿ ಎಷ್ಟು ಬಾರಿ ಹಣ ಹಿಂಪಡೆಯಬಹುದು ಎಂಬ ಬಗ್ಗೆ ಯಾವುದೇ ಕಠಿಣ ಮಿತಿಗಳನ್ನು ವಿಧಿಸಲಾಗಿಲ್ಲವಾದರೂ, ವೈದ್ಯಕೀಯ ವೆಚ್ಚ, ಮಕ್ಕಳ ಶಿಕ್ಷಣ ಮತ್ತು ವಿವಾಹದಂತಹ ನಿರ್ದಿಷ್ಟ ಕಾರಣಗಳಿಗೆ ಅನುಗುಣವಾಗಿ ಪ್ರತ್ಯೇಕ ನಿಯಮಗಳನ್ನು ರೂಪಿಸಲಾಗಿದೆ. ಚಿಕಿತ್ಸೆಗಾಗಿ ಎಷ್ಟು ಬಾರಿಯಾದರೂ ಹಣ ಪಡೆಯಲು ಅವಕಾಶವಿದ್ದರೂ, ಮನೆ ಖರೀದಿ ಅಥವಾ ನಿರ್ಮಾಣದಂತಹ ಉದ್ದೇಶಗಳಿಗಾಗಿ ಜೀವನದುದ್ದಕ್ಕೂ ಕೇವಲ ಒಂದು ಬಾರಿ ಮಾತ್ರ ಹಣ ಹಿಂಪಡೆಯಲು ಸಾಧ್ಯವಾಗುತ್ತದೆ.
ತಿಂಗಳಲ್ಲಿ ಎಷ್ಟು ಬಾರಿ ಬೇಕಾದರೂ ಹಣ ಹಿಂಪಡೆಯಬಹುದೇ?
- ಒಂದು ತಿಂಗಳಲ್ಲಿ ಪಿಎಫ್ ಖಾತೆಯಿಂದ ಎಷ್ಟು ಬಾರಿ ಹಣ ಹಿಂಪಡೆಯಬೇಕು ಎಂಬುದರ ಕುರಿತು EPFO ಯಾವುದೇ ಕಠಿಣ ಮಿತಿಯನ್ನು ವಿಧಿಸಿಲ್ಲ.
- ನೀವು ಒಂದು ತಿಂಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಹಣಕ್ಕಾಗಿ ಕ್ಲೈಮ್ ಮಾಡಬಹುದು. ಆದರೆ ಇದಕ್ಕೆ ಕೆಲವು ನಿಬಂಧನೆಗಳಿವೆ.
- ಹಣವನ್ನು ಏಕೆ ಹಿಂಪಡೆಯುತ್ತಿದ್ದೀರಿ ಎಂಬುದಕ್ಕೆ ಸರಿಯಾದ ಕಾರಣವನ್ನು ನೀಡಬೇಕು.
- ಒಂದು ಕ್ಲೈಮ್ ಪ್ರಕ್ರಿಯೆ ಪೂರ್ಣಗೊಳ್ಳಲು ಸಾಮಾನ್ಯವಾಗಿ 3 ರಿಂದ 20 ದಿನಗಳ ಸಮಯ ಬೇಕಾಗುತ್ತದೆ. ಆದ್ದರಿಂದ ಒಂದೇ ತಿಂಗಳಲ್ಲಿ ಹೆಚ್ಚು ಕ್ಲೈಮ್ಗಳನ್ನು ಮಾಡಿದರೆ ಪ್ರಕ್ರಿಯೆಯಲ್ಲಿ ವಿಳಂಬವಾಗುವ ಸಾಧ್ಯತೆ ಇರುತ್ತದೆ.
ಯಾವ ಅವಶ್ಯಕತೆಗೆ ಎಷ್ಟು ಬಾರಿ ಹಣ ಹಿಂಪಡೆಯಬಹುದು? ತಿಂಗಳ ಮಿತಿಯಿಲ್ಲದಿದ್ದರೂ, ನಿಮ್ಮ ಜೀವನದುದ್ದಕ್ಕೂ ಕೆಲವು ನಿರ್ದಿಷ್ಟ ಕಾರಣಗಳಿಗಾಗಿ ಹಣ ಪಡೆಯಲು ಮಿತಿಗಳಿವೆ:
- ವೈದ್ಯಕೀಯ ವೆಚ್ಚಗಳು: ಚಿಕಿತ್ಸೆಗಾಗಿ ನೀವು ಎಷ್ಟು ಬಾರಿಯಾದರೂ ಹಣವನ್ನು ಹಿಂಪಡೆಯಬಹುದು. ಒಂದೇ ತಿಂಗಳಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಕೂಡ ಕ್ಲೈಮ್ ಮಾಡಬಹುದು, ಆದರೆ ಇದಕ್ಕೆ ವೈದ್ಯಕೀಯ ದಾಖಲೆಗಳು ಅವಶ್ಯಕ.
- ಮಕ್ಕಳ ಶಿಕ್ಷಣ: ಉನ್ನತ ಶಿಕ್ಷಣಕ್ಕಾಗಿ ಜೀವನದುದ್ದಕ್ಕೂ ಗರಿಷ್ಠ 10 ಬಾರಿ ಮಾತ್ರ ಹಣ ಹಿಂಪಡೆಯಲು ಅವಕಾಶವಿದೆ.
- ಮದುವೆ: ಸ್ವಂತ ಮದುವೆ ಅಥವಾ ಮಕ್ಕಳ ಮದುವೆಗಾಗಿ ಜೀವನದುದ್ದಕ್ಕೂ 5 ಬಾರಿ ಹಣ ಪಡೆಯುವ ಅವಕಾಶವಿದೆ.
- ಮನೆ/ನಿವಾಸ: ಮನೆ ಖರೀದಿಸಲು, ನಿರ್ಮಿಸಲು ಅಥವಾ ದುರಸ್ತಿಗಾಗಿ ಜೀವನದುದ್ದಕ್ಕೂ ಕೇವಲ ಒಂದು ಬಾರಿ ಮಾತ್ರ ಪಿಎಫ್ ಹಣ ಹಿಂಪಡೆಯಬಹುದು.
ಕೆಲಸ ಹೋದರೆ ಹಣ ಪಡೆಯುವುದು ಹೇಗೆ?
- ಒಂದು ವೇಳೆ ಕೆಲಸ ಕಳೆದುಕೊಂಡು ಒಂದು ತಿಂಗಳವರೆಗೆ ನಿರುದ್ಯೋಗಿಗಳಾಗಿದ್ದರೆ, ನಿಮ್ಮ ಪಿಎಫ್ ನಿಧಿಯ 75% ಹಣವನ್ನು ಹಿಂಪಡೆಯಬಹುದು.
- ಎರಡನೇ ತಿಂಗಳೂ ಕೆಲಸ ಸಿಗದಿದ್ದರೆ ಉಳಿದ 100% ಮೊತ್ತವನ್ನೂ ಹಿಂಪಡೆಯುವ ಅವಕಾಶವಿದೆ.
ಪ್ರಮುಖ ಸೂಚನೆಗಳು:
- ನೀವು ಭಾಗಶಃ ಹಣವನ್ನು ಹಿಂಪಡೆಯಬೇಕಾದರೆ (Partial Withdrawal) ಕನಿಷ್ಠ 12 ತಿಂಗಳ ಸೇವೆ ಪೂರ್ಣಗೊಳಿಸಿರಬೇಕು.
- 5 ವರ್ಷಕ್ಕಿಂತ ಕಡಿಮೆ ಸೇವಾವಧಿಯಲ್ಲೇ ಹಣ ಹಿಂಪಡೆದರೆ ಟಿಡಿಎಸ್ (TDS) ಕಡಿತಗೊಳಿಸಲಾಗುತ್ತದೆ.

