ನವದೆಹಲಿ: ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲು ಜೂನ್ ಅಂತ್ಯದೊಳಗೆ ಸಂಚಾರ ಆರಂಭಿಸಲಿದೆ. ಅಲ್ಲದೆ, ನಂತರದ ದಿನಗಳಲ್ಲಿದು ವಂದೇ ಭಾರತ್ ಸ್ಲೀಪರ್ ರೈಲಾಗಿ ಪರಿವರ್ತನೆಗೊಳ್ಳುವ ಸೂಚನೆ ಸಹ ಸಿಕ್ಕಿದೆ.
ಈ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಅವರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.
ರಾಜಧಾನಿ ಬೆಂಗಳೂರಿನಿಂದ ಪ್ರಮುಖ ವಾಣಿಜ್ಯ ನಗರಿ ಮುಂಬೈಗೆ ತೆರಳುವ ಈ ಸೂಪರ್ ಫಾಸ್ಟ್ ರೈಲು ಮಧ್ಯ ಕರ್ನಾಟಕದ ತುಮಕೂರು, ದಾವಣಗೆರೆ, ಹಾವೇರಿ ಹಾಗೂ ಉತ್ತರ ಕರ್ನಾಟಕದ ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿ ಮಾರ್ಗದ ಮೂಲಕ ಸಂಚರಿಸಲಿದೆ. ತಮ್ಮ ಒತ್ತಾಸೆಯಂತೆ ಈ ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲು ಸಂಚಾರವನ್ನು ಬಹುತೇಕ ಜೂನ್ ಅಂತ್ಯದೊಳಗೆ ಆರಂಭಿಸುವುದಾಗಿ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಇದೇ ವೇಳೆ ಸಚಿವ ಜೋಶಿ ಅವರು, ಮುಂದಿನ ದಿನಗಳಲ್ಲಿ ಬೆಂಗಳೂರು-ಮುಂಬೈ ನಡುವಿನ ಈ ಸೂಪರ್ ಫಾಸ್ಟ್ ರೈಲನ್ನು ವಂದೇ ಭಾರತ್ ಸ್ಲೀಪರ್ ರೈಲಾಗಿ ಸಹ ಬದಲಾಯಿಸುವಂತೆ ಮನವಿ ಮಾಡಿದ್ದು, ಇದಕ್ಕೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಮ್ಮತಿ ವ್ಯಕ್ತಪಡಿಸಿದ್ದಾರೆ.
ಇದರೊಂದಿಗೆ, ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ರೈಲ್ವೆ ನಿಲ್ದಾಣದ ನವೀಕರಣ ಮತ್ತು ಹೆಚ್ಚಿನ ಅತ್ಯಾಧುನಿಕ ಸೌಕರ್ಯಗಳನ್ನು ಕಲ್ಪಿಸುವ ಕುರಿತು ಸಚಿವ ಜೋಶಿ ಅವರು ರೈಲ್ವೆ ಸಚಿವರೊಂದಿಗೆ ಚರ್ಚಿಸಿದ್ದಾರೆ.
ಲೋಕಾಪುರ-ಸವದತ್ತಿ-ಧಾರವಾಡ ರೈಲ್ವೆ ಮಾರ್ಗ ಪುನರ್ ಸರ್ವೆ ಬಗ್ಗೆ ಸಹ ಸಚಿವದ್ವಯರು ಸುದೀರ್ಘ ಚರ್ಚೆ ನಡೆಸಿದ್ದು, ಈ ಸಂಬಂಧ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

