ಈ ನಾಯಕ 2023ರ ಚುನಾವಣೆಯಲ್ಲಿ ಬಿಜೆಪಿ ಆಕಾಂಕ್ಷಿಯಾಗಿದ್ದರು. ಟಿಕೆಟ್ ಸಿಗಲಿಲ್ಲ ಎಂದು ಬಂಡಾಯದ ಬಾವುಟ ಹಾರಿಸಿ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಚುನಾವಣೆಯಲ್ಲಿ 49,362 ಮತಗಳನ್ನು ಪಡೆದು ಬಿಜೆಪಿ ಅಭ್ಯರ್ಥಿ ಸೋಲಿಗೂ ಕಾರಣರಾದರು. ಈಗ ಅವರು ಜೆಡಿಎಸ್ ಸೇರಿದ್ದು, ಇದೆಂಥ ಬಿಜೆಪಿ-ಜೆಡಿಎಸ್ ಮೈತ್ರಿಕೂಟ? ಎಂದು ಜನರು ಪ್ರಶ್ನೆ ಮಾಡುವಂತೆ ಮಾಡಿದೆ.
ಗುರುವಾರ ಜೆಡಿಎಸ್ ಪಕ್ಷದ ರಾಜ್ಯ ಕಛೇರಿ ಜೆಪಿ ಭವನದಲ್ಲಿ ಕೇಂದ್ರ ಸಚಿವ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ಸಮ್ಮುಖದಲ್ಲಿ ಮಾಲೂರು ತಾಲ್ಲೂಕಿನ ಹೂಡಿ ವಿಜಯಕುಮಾರ್ ಪಕ್ಷ ಸೇರ್ಪಡೆಗೊಂಡರು.
ಜೆಡಿಎಸ್ ಪಕ್ಷದ ಸಿದ್ಧಾಂತ, ಮಾಜಿ ಪ್ರಧಾನಮಂತ್ರಿಗಳಾದ ಶ್ರೀ ಹೆಚ್.ಡಿ. ದೇವೇಗೌಡ ಸಾಹೇಬರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರು ನಾಡಿಗೆ ನೀಡಿದ ಕೊಡುಗೆಯನ್ನು ಮೆಚ್ಚಿ ಪಕ್ಷವನ್ನು ಸೇರ್ಪಡೆಯಾದ ಶ್ರೀ ಹೂಡಿ ವಿಜಯಕುಮಾರ್ ಮತ್ತು ಅವರ ಧರ್ಮಪತ್ನಿ ಶ್ವೇತಾ ವಿಜಯಕುಮಾರ್ ಹಾಗೂ ಅವರ ಅಪಾರ ಬೆಂಬಲಿಗರಿಗೆ ಪಕ್ಷಕ್ಕೆ ಆತ್ಮೀಯವಾಗಿ ಸ್ವಾಗತಿಸುತ್ತೇನೆ ಎಂದು ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪೋಸ್ಟ್ ಹಾಕಿದ್ದಾರೆ.
ಮುಂಬರುವ ದಿನಗಳಲ್ಲಿ ಜೆಡಿಎಸ್ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುವ ಮೂಲಕ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಕಾರ್ಯಕರ್ತರ ಗೆಲುವಿಗೆ ನಾವೆಲ್ಲರೂ ಶ್ರಮಿಸೋಣ, ಜೆಡಿಎಸ್ ಪಕ್ಷ ಎಲ್ಲರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಲು ನಾಡಿಗೆ ನಮ್ಮದೆಯಾದ ಕೊಡುಗೆ ನೀಡಲು ಕಂಕಣಬದ್ಧರಾಗಿ ದುಡಿಯೋಣ ಎಂದು ಅವರು ಕರೆ ನೀಡಿದ್ದಾರೆ.
ಹೂಡಿ ವಿಜಯಕುಮಾರ್: ಹೂಡಿ ವಿಜಯಕುಮಾರ್ 2023ರ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷ ಕೆ.ಎಸ್.ಮಂಜುನಾಥ ಗೌಡರಿಗೆ ಟಿಕೆಟ್ ನೀಡಿತು. ಬಂಡಾಯದ ಬಾವುಟವನ್ನು ಹೂಡಿ ವಿಜಯಕುಮಾರ್ ಹಾರಿಸಿದರು.
ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿದರು. ಚುನಾವಣೆಯಲ್ಲಿ ಹೂಡಿ ವಿಜಯಕುಮಾರ್ 49,362 ಮತಗಳನ್ನು ಪಡೆದು 3ನೇ ಸ್ಥಾನಗಳಿಸಿದರು. ಬಿಜೆಪಿ ಅಭ್ಯರ್ಥಿ ಕೆ.ಎಸ್.ಮಂಜುನಾಥ ಗೌಡ 50,707 ಮತಗಳನ್ನು ಪಡೆದು ಸೋಲು ಕಂಡರು.
ಕೆ.ಎಸ್.ಮಂಜುನಾಥ ಗೌಡ, ಹೂಡಿ ವಿಜಯಕುಮಾರ್ ನಡುವಿನ ಸ್ಪರ್ಧೆಯಲ್ಲಿ ಮಾಲೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೆ.ವೈ.ನಂಜೇಗೌಡ 50,955 ಮತಗಳನ್ನು ಪಡೆದು ಜಯಗಳಿಸಿದರು. ಆದರೆ ಈಗ ಹೂಡಿ ವಿಜಯಕುಮಾರ್ ಜೆಡಿಎಸ್ ಸೇರಿದ್ದಾರೆ.
2028ರ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾದರೆ ಮಾಲೂರು ಕ್ಷೇತ್ರದ ಟಿಕೆಟ್ ಯಾರಿಗೆ?. ಆಗ ಮೈತ್ರಿಕೂಟದ ನಿಲುವು ಏನು? ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಬಿಜೆಪಿ ನಾಯಕನ ಸೋಲಿಗೆ ಕಾರಣವಾದ ಹೂಡಿ ವಿಜಯಕುಮಾರ್ ಅವರನ್ನು ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಂಡಿದ್ದು ಹೇಗೆ? ಎಂದು ಪ್ರಶ್ನಿಸಲಾಗುತ್ತಿದೆ.
ಹೂಡಿ ವಿಜಯಕುಮಾರ್, “2024ರ ಲೋಕಸಭೆ ಚುನಾವಣೆ ಸಮಯದಲ್ಲಿಯೂ ನಾನು ಜೆಡಿಎಸ್ ಪಕ್ಷದ ಅಭ್ಯರ್ಥಿ ಗೆಲುವಿಗೆ ಕೆಲಸ ಮಾಡಿದ್ದೇನೆ. ನಾನು ಪಕ್ಷ ಸೇರ್ಪಡೆ ಆಗುವುದು ಆಗಲೇ ತೀರ್ಮಾನವಾಗಿತ್ತು” ಎಂದು ಹೇಳಿದ್ದಾರೆ.
ಈ ಸೇರ್ಪಡೆಗೆ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ.ಎಸ್.ಮಂಜುನಾಥ ಗೌಡ ಆಕ್ಷೇಪ ವ್ಯಕ್ತಪಡಿಸಿದ್ದಾರೆ, “2023ರಲ್ಲಿ ಬಿಜೆಪಿ ವಿರುದ್ಧ ಬಂಡಾಯ ಎದ್ದಿದ್ದ ಹೂಡಿ ವಿಜಯ್ ಕುಮಾರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಜೆಡಿಎಸ್ ನಾಯಕರು ಮೈತ್ರಿ ಧರ್ಮ ಮುರಿದಿದ್ದಾರೆ” ಎಂದು ಆರೋಪಿಸಿದ್ದಾರೆ.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗೆ ಕೆಲವು ದಿನಗಳು ಇರುವಾಗ ಮಾಲೂರು ಕ್ಷೇತ್ರದ ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ.

