ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆ ಹತ್ಯೆ ಪ್ರಕರಣದ ರಾಜ್ಯಾದ್ಯಂತ ಸುದ್ದಿಯಾಗಿದೆ. ಪ್ರೀತಿಸಿ ವಿವಾಹವಾದ ಕಾರಣಕ್ಕೆ ಗರ್ಭಿಣಿಯಾಗಿದ್ದ ಮಾನ್ಯಾಳನ್ನು ತಂದೆಯೇ ಹತ್ಯೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಲಾಗಿದೆ.
ಇನಾಂ ವೀರಾಪಿರ ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ದೌರ್ಜನ್ಯಕ್ಕೆ ಒಳಗಾದ ಕುಟುಂಬಕ್ಕೆ ನಿಯಮಾನುಸಾರ ಪರಿಹಾರ, ರಕ್ಷಣೆ ನೀಡಬೇಕು ಎಂದು ಬಾಗಲಕೋಟ ಜಿಲ್ಲಾ ಉಸ್ತುವಾರಿ ಹಾಗೂ ಅಬಕಾರಿ ಇಲಾಖೆ ಸಚಿವ ಆರ್.ಬಿ.ತಿಮ್ಮಾಪುರ ಪೊಲೀಸ್ ಮತ್ತು ಧಾರವಾಡ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಮಂಗಳವಾರ ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿದ ಸಚಿವರು, ಇನಾಂ ವೀರಾಪುರ ಗ್ರಾಮದಲ್ಲಿನ ದೌರ್ಜನ್ಯ, ಕೊಲೆ ಪ್ರಕರಣದ ಮಾಹಿತಿ ಪಡೆದರು. ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಶುಭ ಪಿ. ಘಟನೆ ಕುರಿತು, ಇಲಾಖೆ ಕೈಗೊಂಡ ಕ್ರಮಗಳ ಕುರಿತು ವಿವರಿಸಿದರು.
ಸಚಿವರು ಹೇಳಿದ್ದೇನು?: ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, “ಇದೊಂದು ಅಮಾನವೀಯ ಘಟನೆ. ಇಂತಹ ಮನಸ್ಥಿತಿಗಳಿಂದ ಸಾಮಾಜಿಕ ವ್ಯವಸ್ಥೆ ಹಾಳಾಗುತ್ತಿದೆ. ಈ ಘಟನೆಯಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ಸರ್ಕಾರಿ ಅಭಿಯೋಜಕರಿಗೆ ಅಗತ್ಯ ಸಹಕಾರ ನೀಡಬೇಕು” ಎಂದರು.
“ಈಗಾಗಲೇ ದಾಖಲಿಸಿರುವ ಎಫ್‌ಐಆರ್ ಪ್ರಕಾರ ಎಲ್ಲರ ಬಂಧನವಾಗಬೇಕು. ಗ್ರಾಮದ ಸಾಮರಸ್ಯಕ್ಕೆ, ಸೌಹಾರ್ದತೆಗೆ ದಕ್ಕೆ ಆಗದಂತೆ ಅಧಿಕಾರಿಗಳು ಕ್ರಮವಹಿಸಬೇಕು. ಘಟನೆ ಬಗ್ಗೆ ಕಂದಾಯ, ಸಮಾಜ ಕಲ್ಯಾಣ ಇಲಾಖೆಗಳು ತಮ್ಮ ಕರ್ತವ್ಯ ನಿರ್ವಹಿಸಿವೆ. ಆದರೂ ಇನ್ನಷ್ಟು ತ್ವರೀತವಾಗಿ ಸ್ಪಂದಿಸಬೇಕಿತ್ತು. ಗುಪ್ತವಾರ್ತೆಯ ವಿಭಾಗದ ಸಕಾಲಿಕ ಮಾಹಿತಿ ಕೊರತೆಯಿಂದ ದುರ್ಘಟನೆ ತಡೆಗಟ್ಟಲು ಸಾಧ್ಯವಾಗಿಲ್ಲ” ಎಂದು ಹೇಳಿದರು.
“ಘಟನೆ ನಂತರ ವಿವಿಧ ಇಲಾಖೆಗಳ ನಿರ್ವಹಿಸಿದ ಕಾರ್ಯಗಳ ಕುರಿತು, ನಿಯಮ ಪಾಲನೆ ಕುರಿತು ತನಿಖೆ ಮಾಡಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಪಾರದರ್ಶಕವಾಗಿ ತನಿಖೆ ಮಾಡಿ, ವರದಿ ನೀಡಬೇಕು” ಎಂದು ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, “ವಿವೇಕಾನಂದ ದೊಡ್ಡಮನಿ ಕುಟುಂಬದ ಬೇಡಿಕೆಗಳನ್ನು ಜಿಲ್ಲಾಡಳಿತ ಹಂತದಲ್ಲಿ ಈಡೇರಿಸಲಾಗಿದೆ. ಅವರ ಕೆಲವು ಬೇಡಿಕೆಗಳ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು” ಎಂದರು.
“ಈಗಾಗಲೇ ಗ್ರಾಮದಲ್ಲಿ ಶಾಂತಿ ಸಭೆ ಮಾಡಿ, ದೊಡ್ಡಮನಿ ಕುಟುಂಬವನ್ನು ಅವರ ಮನೆಗೆ ಸೇರಿಸಲಾಗಿದೆ. ಶಾಂತಿ, ಸೌಹಾರ್ದತೆಯಿಂದ ಎಲ್ಲರೂ ಇರುವುದಾಗಿ ಗ್ರಾಮಸ್ಥರು ಭರವಸೆ ನೀಡಿದ್ದಾರೆ” ಎಂದು ವಿವರಣೆ ಕೊಟ್ಟರು.
“ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್, ಕುಟುಂಬದವರಿಗೆ ಅಗತ್ಯ ಚಿಕಿತ್ಸೆ, ಕೌನ್ಸಿಲಿಂಗ್ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ರೂ. 5 ಲಕ್ಷ ಪರಿಹಾರ ನೀಡಲಾಗಿದೆ. ಗ್ರಾಮ ಹಾಗೂ ಕುಟುಂಬಗಳ ಮೇಲೆ ಮುನ್ನೆಚರಿಕೆಯಾಗಿ ನಿಗಾವಹಿಸಲಾಗಿದೆ” ಎಂದು ತಿಳಿಸಿದರು.
ಇನಾಂ ವೀರಾಪುರ ಗ್ರಾಮದ ಮಾನ್ಯ ದಲಿತ ಯುವಕನನ್ನು ಪ್ರೀತಿಸಿ ವಿವಾಹವಾಗಿದ್ದಳು. ವಿವಾಹವಾದ ಬಳಿಕ ಅವರು ಹಾವೇರಿ ಜಿಲ್ಲೆಯಲ್ಲಿ ವಾಸವಾಗಿದ್ದರು. ಆದರೆ ಮಾನ್ಯ ತಂದೆ 7 ತಿಂಗಳ ಗರ್ಭಿಣಿ ಆಗಿದ್ದ ಮಗಳನ್ನ ಹತ್ಯೆ ಮಾಡಿದ್ದ. ಮೇಲ್ಜಾತಿ ಕುಟುಂಬದ ಮಾನ್ಯ ದಲಿತ ಯುವಕ ವಿವೇಕಾನಂದನನ್ನು ಮದುವೆ ಆದ ಕಾರಣಕ್ಕೆ ಈ ಹತ್ಯೆ ಮಾಡಲಾಗಿತ್ತು.
ಮದುವೆ ಬಳಿಕ ಮೊದಲ ಬಾರಿಗೆ ಗ್ರಾಮಕ್ಕೆ ಆಗಮಿಸಿದ್ದ ಮಾನ್ಯ ಮತ್ತು ವಿವೇಕಾನಂದ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಮಾನ್ಯಾಳ ತಂದೆ ಮತ್ತು ಆತನ ಕುಟುಂಬ ಮಾನ್ಯ ಹಾಗೂ ವಿವೇಕಾನಂದ ಮೇಲೆ ದಾಳಿ ಮಾಡಿತ್ತು. ಗಾಯಗೊಂಡಿದ್ದ ಗರ್ಭಿಣಿ ಮಾನ್ಯಾ ಸಾವನ್ನಪ್ಪಿದ್ದಳು.
ಈ ಪ್ರಕರಣ ಸಂಬಂಧ ಪ್ರಕಾಶ್ ಗೌಡ ಪಾಟೀಲ್, ವೀರನಗೌಡ ಪಾಟೀಲ್, ಅರುಣ್ ಗೌಡ ಪಾಟೀಲ್ ಎಂಬ ಮೂವರನ್ನು ಅದೇ ದಿನ ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಬಂಧಿಸಿದ್ದರು. ಈಗ ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

