ಬೆಂಗಳೂರು: ಬೆಂಗಳೂರಿನಲ್ಲಿ ಯುವತಿಯೊಬ್ಬರ ವಿರುದ್ಧ ಹನಿಟ್ರ್ಯಾಪ್ ಕೇಸ್ ದಾಖಲಾಗಿತ್ತು. ಈಗ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಆರೋಪಿ ಯುವತಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಅಮೃತಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಯುವತಿ ತನ್ನ ಮೇಲೆ ಗ್ಯಾಂಗ್ರೇಪ್ ನಡೆದಿದೆ ಎಂದು ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪ್ರಕರಣ ಸಂಬಂಧ ನಿಖಿಲ್ ಮತ್ತು ಡಿಕ್ಸನ್ ಸಾಂಡ್ರಾ ಎಂಬ ಇಬ್ಬರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ತನ್ನನ್ನು ಪಾರ್ಟಿಯೊಂದಕ್ಕೆ ಕರೆದೊಯ್ದು ಬಲವಂತವಾಗಿ ಮಾದಕವಸ್ತು ನೀಡಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾಳೆ.
ಇದಕ್ಕೂ ಮುನ್ನ ಫೆ.21ರಂದು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಯುವತಿ ವಿರುದ್ಧ ಹನಿಟ್ರ್ಯಾಪ್ ಕೇಸ್ ದಾಖಲಾಗಿತ್ತು. ಈಗ ಯುವತಿ ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂದು ದೂರು ದಾಖಲಿಸಿದ್ದಾಳೆ.
2026ರ ಜನವರಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಡಿಕ್ಸನ್ ಸಾಂಡ್ರಾ ಎಂಬಾತನ ಪರಿಚಯವಾಗಿದ್ದು, ಸ್ನೇಹ ಪ್ರೀತಿಗೆ ತಿರುಗಿತ್ತು. ಬಳಿಕ ಇಬ್ಬರೂ ಹಲವು ಬಾರಿ ಭೇಟಿ ಆಗಿದ್ದೆವು. ಹೀಗಿರುವಾಗ ಫೆಬ್ರವರಿ 14ರಂದು ಕರೆ ಮಾಡಿದ್ದ ಡಿಕ್ಸನ್, ಜಕ್ಕೂರಿನಲ್ಲಿರುವ ವಿಲ್ಲಾವೊಂದಕ್ಕೆ ಪಾರ್ಟಿಗೆ ಬರುವಂತೆ ಕರೆದಿದ್ದ. ಹೀಗಾಗಿ ಗೆಳತಿಯ ಜೊತೆ ತಾನು ಮಧ್ಯರಾತ್ರಿ ಸುಮಾರು 1.15ಕ್ಕೆ ವಿಲ್ಲಾಗೆ ತೆರಳಿದ್ದು, ಈ ವೇಳೆ ಡಿಕ್ಸನ್ ಆತನ ಗೆಳೆಯ ಎಂದು ನಿಖಿಲ್ ಎಂಬಾತನನ್ನು ಪರಿಚಯಿಸಿದ್ದ. ಪಾರ್ಟಿ ನಡುವೆ ಡಿಕ್ಸನ್ ಮತ್ತು ನಿಖಿಲ್ ಸೇರಿ ಬಲವಂತವಾಗಿ ಮಾತ್ರೆಯನ್ನು ತಿನ್ನಿಸಿದ್ದಾರೆ. ಈ ವೇಳೆ ಕಣ್ಣುಗಳು ಮಂಜಾಗತೊಡಗಿದ್ದು, ಡಿಕ್ಸನ್ ರೂಮಿಗೆ ಕರೆದೊಯ್ದು ಮಲಗಿಸಿದ್ದ. ಆದಾದ ನಂತರ ನನಗೆ ಪ್ರಜ್ಞೆತಪ್ಪಿದೆ. ನನಗೆ ಎಚ್ಚರ ಆದಾಗ ನನ್ನ ದೇಹದ ಮೇಲೆ ಅರ್ಧಂಬರ್ಧ ಬಟ್ಟೆ ಇರುವುದರ ಜೊತೆಗೆ ಪಕ್ಕದಲ್ಲಿ ನಿಖಿಲ್ ಇರುವುದನ್ನು ಕಂಡು ಶಾಕ್ ಆಗಿದ್ದೇನೆ ಎಂದು ಯುವತಿ ಆರೋಪಿಸಿದ್ದಾಳೆ.
ಮೊದಲೇ ಗಾಬರಿಗೊಂಡಿದ್ದ ತಾನು ಡಿಕ್ಸನ್ ಬಗ್ಗೆ ಕೇಳಿದಾಗ ಹೊರಗಿನಿಂದ ಬಂದ ಆತ ತನ್ನ ಬಟ್ಟೆಯನ್ನು ಕಿತ್ತೆಸೆದಿದ್ದು, ಇಬ್ಬರೂ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಈ ವೇಳೆ ತಾನು ಜೋರಾಗಿ ಕಿರುಚಾಡಿದ ಪರಿಣಾಮ ನನ್ನನ್ನು ರೂಮ್ನಲ್ಲಿ ಲಾಕ್ ಮಾಡಲಾಗಿತ್ತು. ಬಳಿಕ ಮರುದಿನ ಮಧ್ಯಾಹ್ನದ ವೇಳೆಗೆ ಆರೋಪಿಗಳು ರೂಮ್ ಬಾಗಿಲು ತೆರೆದಿದ್ದು, ರಾತ್ರಿ ನಡೆದ ವಿಚಾರವನ್ನು ಯಾರಿಗಾದರೂ ಅಥವಾ ಪೊಲೀಸರಿಗೆ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ನಿಖಿಲ್ ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಇನ್ನು ಫೆ.21ರಂದು ಇದೇ ಯುವತಿಯ ವಿರುದ್ಧ ನಿಖಿಲ್ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ. ಅದರ ಬೆನ್ನಲ್ಲೇ ಖಾಸಗಿ ವಾಹನಿಯ ಕ್ರೈಂ ಬ್ಯೂರೋ ಹೆಡ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೋರ್ವರ ಕರೆ ಬಂದಿದ್ದು, ನಾವು ಹೇಳಿದ ಜಾಗಕ್ಕೆ ನೀವು ಬರಬೇಕು. ಹೇಳಿದಷ್ಟು ಹಣ ಕೊಡಬೇಕು. ಇಲ್ಲದಿದ್ದರೆ ಈ ವಿಚಾರವನ್ನು ನ್ಯೂಸ್ ಚಾನೆಲ್ನಲ್ಲಿ ಹಾಕಿ ಪ್ರಕಟಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದ.

