ಪ್ರಪಂಚದಲ್ಲಿ ಒಂದಲ್ಲ ಒಂದು ರೀತಿಯ ಹವ್ಯಾಸ ಹೊಂದಿರುವ ಜನರಿರುತ್ತಾರೆ. ಆದರೆ ಬ್ರಿಟನ್‌ನ 26 ವರ್ಷದ ಸ್ಕಾಟ್ ಫೆನ್ಸೋಮ್ ಎಂಬ ಯುವಕನ ಹವ್ಯಾಸ ಮಾತ್ರ ತುಂಬಾನೇ ವಿಚಿತ್ರ ಮತ್ತು ಸಾಹಸಮಯವಾಗಿದೆ. ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಮರೆತು ಹೋದ ಅಥವಾ ವಾರಸುದಾರರಿಲ್ಲದ (Unclaimed Luggage) ಬ್ಯಾಗ್‌ಗಳನ್ನು ಹರಾಜಿನಲ್ಲಿ ಲಕ್ಷಾಂತರ ರೂಪಾಯಿ ನೀಡಿ ಖರೀದಿಸುವುದೇ ಈತನ ಕಾಯಕ.
ಲಕ್ಷ ಬೆಲೆಯ ಬ್ಯಾಗ್‌ನಲ್ಲಿ ಏನಿತ್ತು? ಇತ್ತೀಚೆಗೆ ಸ್ಕಾಟ್ ಸುಮಾರು 1.08 ಲಕ್ಷ ರೂಪಾಯಿ ($1,200) ನೀಡಿ ಪ್ರಸಿದ್ಧ ‘ನೈಕ್’ ಕಂಪನಿಯ ಬ್ಯಾಗ್ ಒಂದನ್ನು ಹರಾಜಿನಲ್ಲಿ ಖರೀದಿಸಿದ್ದನು. ಇಷ್ಟು ದೊಡ್ಡ ಮೊತ್ತ ನೀಡಿ ಖರೀದಿಸಿದ ಮೇಲೆ ಅದರೊಳಗೆ ಬೆಲೆಬಾಳುವ ವಸ್ತುಗಳು ಇರಬಹುದು ಎಂಬುದು ಅವನ ನಿರೀಕ್ಷೆಯಾಗಿತ್ತು. ಕುತೂಹಲದಿಂದ ಬ್ಯಾಗ್ ಬಿಚ್ಚಿದಾಗ ಅಲ್ಲಿ ಕಂಡ ದೃಶ್ಯಗಳು ಅವನನ್ನೇ ದಂಗಾಗಿಸಿವೆ.
ಬ್ಯಾಗ್‌ನ ಮೇಲ್ಭಾಗದಲ್ಲಿ ಹಳೆಯ ಸಿಗರೇಟ್ ತುಂಡುಗಳು, ಕೆಲವು ನಾಣ್ಯಗಳು, ಪೆನ್ನು ಮತ್ತು ಎರಡು ಸಿಮ್ ಕಾರ್ಡ್‌ಗಳು ಸಿಕ್ಕಿವೆ. ಇನ್ನು ಬ್ಯಾಗ್‌ನ ಒಳಗಡೆ ರನ್‌ವೇ ಶೂಗಳು, ಹಳೆಯ ಹೆಡ್‌ಫೋನ್, ಕನ್ನಡಕ, ಗ್ಲೌಸ್ ಮತ್ತು ಕುಡಿದು ಎಸೆದ ಖಾಲಿ ರೆಡ್‌ಬುಲ್ ಕ್ಯಾನ್ ಪತ್ತೆಯಾಗಿವೆ. ಇಷ್ಟೇ ಅಲ್ಲದೆ, ಕೆಲಸಗಾರರು ಬಳಸುವ ಕೆಲವು ಉಪಕರಣಗಳು, ಹಳೆಯ ಜಾಕೆಟ್, ಹೋಟೆಲ್ ಬಿಲ್ ಮತ್ತು ಎಲೆಕ್ಟ್ರಿಕಲ್ ಕೇಬಲ್‌ಗಳು ಆ ಬ್ಯಾಗ್‌ನಲ್ಲಿದ್ದವು.
ಹವ್ಯಾಸವನ್ನೇ ವೃತ್ತಿಯಾಗಿಸಿಕೊಂಡ ಸ್ಕಾಟ್ ಶುರುವಿನಲ್ಲಿ ಕೇವಲ ಕುತೂಹಲಕ್ಕಾಗಿ ಈ ಕೆಲಸ ಮಾಡುತ್ತಿದ್ದ ಸ್ಕಾಟ್, ಈಗ ಇದನ್ನೇ ಪೂರ್ಣಾವಧಿಯ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾನೆ. ಹರಾಜಿನಲ್ಲಿ ಸಿಗುವ ಇಂತಹ ಬ್ಯಾಗ್‌ಗಳನ್ನು ಖರೀದಿಸಿ ಅದರೊಳಗೆ ಸಿಗುವ ಆಸಕ್ತಿದಾಯಕ ವಸ್ತುಗಳನ್ನು ಆನ್‌ಲೈನ್‌ನಲ್ಲಿ ಮಾರಿ ಹಣ ಗಳಿಸುತ್ತಾನೆ. ಈ ಕುರಿತಾದ ಅವನ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆಯುತ್ತಿವೆ.
ಲಕ್ಷ ರೂಪಾಯಿ ನೀಡಿ ಕಸದಂತಹ ವಸ್ತುಗಳನ್ನು ಖರೀದಿಸಿರುವ ಸ್ಕಾಟ್‌ನ ವಿಡಿಯೋ ನೋಡಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಆದರೆ ಸ್ಕಾಟ್ ಮಾತ್ರ ಎದೆಗುಂದದೆ, ಈ ಬ್ಯಾಗ್‌ನಲ್ಲಿ ಸಿಕ್ಕ ವಸ್ತುಗಳನ್ನು ಮಾರಿ ಹಾಕಿದ ಹಣವನ್ನು ವಾಪಸ್ ಪಡೆಯುವ ಭರವಸೆ ಹೊಂದಿದ್ದಾನೆ. ಕೆಲವು ಬಾರಿ ಈ ಬ್ಯಾಗ್‌ಗಳಲ್ಲಿ ಅದೃಷ್ಟವಶಾತ್ ಚಿನ್ನ ಅಥವಾ ಬೆಲೆಬಾಳುವ ವಾಚ್‌ಗಳೂ ಸಿಗುವುದುಂಟು ಎನ್ನುತ್ತಾನೆ ಈತ.

