ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರ ಹೊಟ್ಟೆಯನ್ನು ಶಸ್ತ್ರಚಿಕಿತ್ಸೆಗಾಗಿ ವೈದ್ಯರು ತೆರೆದಾಗ, ಅಲ್ಲಿ ಕಂಡ ದೃಶ್ಯ ಕಂಡು ಸ್ವತಃ ವೈದ್ಯರೇ ದಂಗಾಗಿದ್ದಾರೆ. ಬಿಹಾರದ ಮೋತಿಹಾರಿಯಲ್ಲಿರುವ ಎಸ್‌ಆರ್‌ಪಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ಇಂತಹದೊಂದು ಅಪರೂಪದ ವೈದ್ಯಕೀಯ ಪ್ರಕರಣ ವರದಿಯಾಗಿದೆ.
ಏನಿದು ಘಟನೆ? ನೇಪಾಳ ಮೂಲದ 35 ವರ್ಷದ ಮಹಿಳೆಯೊಬ್ಬರು ಕಳೆದ ದೀರ್ಘಕಾಲದಿಂದ ತೀವ್ರ ಹೊಟ್ಟೆ ನೋವು ಮತ್ತು ಹಸಿವಿನ ಕೊರತೆಯಿಂದ ಬಳಲುತ್ತಿದ್ದರು. ಹಲವು ಕಡೆ ಚಿಕಿತ್ಸೆ ಪಡೆದರೂ ಫಲಕಾರಿ ಆಗದಿದ್ದಾಗ ಅವರು ಎಸ್‌ಆರ್‌ಪಿ ಆಸ್ಪತ್ರೆಗೆ ದಾಖಲಾಗಿದ್ದರು. ಇಲ್ಲಿನ ಮುಖ್ಯ ವೈದ್ಯರಾದ ಡಾ. ಸುಜಿತ್ ಕುಮಾರ್ ಅವರು ಎಂಡೋಸ್ಕೋಪಿ ಪರೀಕ್ಷೆ ನಡೆಸಿದಾಗ, ಮಹಿಳೆಯ ಹೊಟ್ಟೆಯಲ್ಲಿ ದೊಡ್ಡದಾದ ಕೂದಲಿನ ಉಂಡೆ ಇರುವುದು ಪತ್ತೆಯಾಗಿದೆ. ಕೂಡಲೇ ಶಸ್ತ್ರಚಿಕಿತ್ಸೆ ನಡೆಸಿದ ತಜ್ಞ ವೈದ್ಯರ ತಂಡ, ಸುಮಾರು 1.5 ಕಿಲೋಗ್ರಾಂ ತೂಕದ ಕೂದಲಿನ ರಾಶಿಯನ್ನು ಹೊರತೆಗೆದಿದೆ.
ವೈದ್ಯಕೀಯ ಭಾಷೆಯಲ್ಲಿ ಏನಂತಾರೆ? ಈ ವಿಚಿತ್ರ ಸಮಸ್ಯೆಯನ್ನು ವೈದ್ಯಕೀಯ ಲೋಕದಲ್ಲಿ ‘ಟ್ರೈಕೊಬೆಜೋವರ್’ (Trichobezoar) ಎಂದು ಕರೆಯಲಾಗುತ್ತದೆ. ಜಗತ್ತಿನಾದ್ಯಂತ ಈವರೆಗೆ ಇಂತಹ ಕೇವಲ 500 ಪ್ರಕರಣಗಳು ಮಾತ್ರ ವರದಿಯಾಗಿವೆ. ಸಾಮಾನ್ಯವಾಗಿ ಮಾನಸಿಕ ಒತ್ತಡ ಅಥವಾ ‘ಟ್ರೈಕೊಫೇಜಿಯಾ’ ಎಂಬ ಹವ್ಯಾಸದಿಂದಾಗಿ ಕೆಲವರು ತಮ್ಮದೇ ಕೂದಲನ್ನು ತಿಂದಿರುತ್ತಾರೆ. ಕೂದಲು ಜೀರ್ಣವಾಗದ ಕಾರಣ ವರ್ಷಗಳ ಕಾಲ ಹೊಟ್ಟೆಯಲ್ಲೇ ಶೇಖರಣೆಯಾಗಿ ದೊಡ್ಡ ಉಂಡೆಯಂತಾಗುತ್ತದೆ. ಇದರಿಂದ ಜೀರ್ಣಾಂಗ ವ್ಯವಸ್ಥೆ ಸಂಪೂರ್ಣ ಹದಗೆಡುತ್ತದೆ.
ಸದ್ಯ ಮಹಿಳೆ ಚೇತರಿಸಿಕೊಳ್ಳುತ್ತಿದ್ದು, ಅಪಾಯದಿಂದ ಪಾರಾಗಿದ್ದಾರೆ. ಇಂತಹ ಅಪರೂಪದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ವೈದ್ಯರ ತಂಡಕ್ಕೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ. ದೀರ್ಘಕಾಲದ ಹೊಟ್ಟೆ ನೋವು ಅಥವಾ ಅಜೀರ್ಣದ ಸಮಸ್ಯೆ ಇದ್ದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ ಎಂದು ತಜ್ಞರು ಈ ಮೂಲಕ ಎಚ್ಚರಿಸಿದ್ದಾರೆ.

