ಹಿಮಾಚಲ ಪ್ರದೇಶದ ಸಿರ್ಮೌರ್ ಜಿಲ್ಲೆಯ ವಿಲಕ್ಷಣ ವಿವಾಹ ಪದ್ಧತಿಯೊಂದು ಈಗ ಮತ್ತೆ ಸಾರ್ವಜನಿಕವಾಗಿ ಚರ್ಚೆಗೆ ಬಂದಿದೆ. ಈ ಕುಟುಂಬಕ್ಕೆ ಈಗ ಪುಟ್ಟ ಅತಿಥಿಯ ಆಗಮನವಾಗಿದ್ದು, ಈ ವಿಶಿಷ್ಟ ದಂಪತಿಗಳು ಮಗುವನ್ನು ಬರಮಾಡಿಕೊಂಡ ಬೆನ್ನಲ್ಲೇ ಅವರ ಜೀವನಶೈಲಿಯ ಬಗ್ಗೆ ಜಾಲತಾಣಗಳಲ್ಲಿ ಪರ-ವಿರೋಧದ ಚರ್ಚೆಗಳು ಶುರುವಾಗಿವೆ.
ಏನಿದು ಜೋಡಿದಾರ್ ಸಂಪ್ರದಾಯ? ಸಿರ್ಮೌರ್ ಜಿಲ್ಲೆಯ ಕೆಲವು ಭಾಗಗಳಲ್ಲಿ ಇಂದಿಗೂ ‘ಜೋಡಿದಾರ್’ ಅಥವಾ ಬಹುಪತಿತ್ವ (Polyandry) ಸಂಪ್ರದಾಯ ಅಸ್ತಿತ್ವದಲ್ಲಿದೆ. ಈ ಪದ್ಧತಿಯಂತೆ ಒಂದು ಕುಟುಂಬದ ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಸಹೋದರರು ಒಬ್ಬಳೇ ಮಹಿಳೆಯನ್ನು ವಿವಾಹವಾಗುತ್ತಾರೆ. ಇಲ್ಲಿನ ಸುನೀತಾ ಚೌಹಾಣ್ ಎಂಬುವವರು ಪ್ರದೀಪ್ ನೇಗಿ ಮತ್ತು ಕಪಿಲ್ ನೇಗಿ ಎಂಬ ಸಹೋದರರನ್ನು ವಿವಾಹವಾಗಿದ್ದು, ಈ ವಿಶಿಷ್ಟ ಕುಟುಂಬಕ್ಕೆ ಈಗ ಮಗು ಜನಿಸಿದೆ.
ತಂದೆಯ ಸಂಭ್ರಮದ ಪೋಸ್ಟ್ ವೈರಲ್ ಮಗುವಿನ ಜನನ ಇಡೀ ಕುಟುಂಬದಲ್ಲಿ ಸಡಗರ ತಂದಿದೆ. ಒಬ್ಬ ತಂದೆ ಮನೆಯಲ್ಲೇ ಮಗುವನ್ನು ಸಂಭಾಳಿಸುತ್ತಿದ್ದರೆ, ಉದ್ಯೋಗದ ನಿಮಿತ್ತ ವಿದೇಶದಲ್ಲಿರುವ ಇನ್ನೊಬ್ಬ ತಂದೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. “ಈ ಮಗುವಿನ ಆಗಮನ ನಮ್ಮ ಜೀವನವನ್ನು ಪೂರ್ಣಗೊಳಿಸಿದೆ. ಆದಷ್ಟು ಬೇಗ ಮನೆಗೆ ಮರಳಿ ನನ್ನ ಮಗುವನ್ನು ಎತ್ತಿಕೊಳ್ಳಲು ಕಾತುರನಾಗಿದ್ದೇನೆ” ಎಂದು ಅವರು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಈಗ ಇಂಟರ್ನೆಟ್‌ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ ಈ ಕುಟುಂಬದ ವಿಡಿಯೋ ಮತ್ತು ಫೋಟೋಗಳು ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಇದು ಅಲ್ಲಿನ ಸಂಸ್ಕೃತಿ ಮತ್ತು ಪರಂಪರೆಯ ಭಾಗ ಎಂದು ಗೌರವಿಸಿದರೆ, ಇನ್ನು ಕೆಲವರು ಇಂದಿನ ಆಧುನಿಕ ಯುಗದಲ್ಲಿ ಇಂತಹ ಪದ್ಧತಿಗಳು ಆಶ್ಚರ್ಯಕರ ಎಂದು ಅಭಿಪ್ರಾಯಪಟ್ಟಿದ್ದಾರೆ. ಕಳೆದ ವರ್ಷವೇ ಈ ಕುಟುಂಬವು ತಮ್ಮ ಆಧುನಿಕ ಹಿನ್ನೆಲೆ ಮತ್ತು ಶಿಕ್ಷಣದ ನಡುವೆಯೂ ಈ ಸಂಪ್ರದಾಯವನ್ನು ಪಾಲಿಸುತ್ತಿರುವುದಕ್ಕಾಗಿ ಸುದ್ದಿಯಾಗಿತ್ತು.
ಸದ್ಯ ಸಿರ್ಮೌರ್‌ನ ಈ ಗ್ರಾಮದಲ್ಲಿ ಹಬ್ಬದ ವಾತಾವರಣ ಮನೆಮಾಡಿದ್ದು, ಸ್ಥಳೀಯರು ಮತ್ತು ಪರಿಚಿತರು ಈ ವಿಶಿಷ್ಟ ಕುಟುಂಬಕ್ಕೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

