HomeJobsಕಳಂಕಿತ ಕೆಪಿಎಸ್‌ಸಿ ಅಧಿಕಾರಿಗಳಿಗೆ ಸೇವೆಯಿಂದ ಬಿಡುಗಡೆ ಭೀತಿ

ಕಳಂಕಿತ ಕೆಪಿಎಸ್‌ಸಿ ಅಧಿಕಾರಿಗಳಿಗೆ ಸೇವೆಯಿಂದ ಬಿಡುಗಡೆ ಭೀತಿ

ಬೆಂಗಳೂರು- ಕರ್ನಾಟಕ ಸಾರ್ವಜನಿಕ ಸೇವಾ ಆಯೋಗದ (ಕೆಪಿಎಸ್‌ಸಿ) 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬೆನ್ನಲ್ಲೇ, ಕಳಂಕಿತ ನೇಮಕಾತಿಯಡಿ ಸೇವೆಗೆ ಸೇರಿದ ಅಧಿಕಾರಿಗಳನ್ನು ಮುಂದುವರಿಸದಂತೆ ರಾಜ್ಯ ಸರ್ಕಾರಕ್ಕೆ ಕಾನೂನು ಇಲಾಖೆ ಸೂಚನೆ ನೀಡಿದೆ.

362 ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳ ನೇಮಕಾತಿಯನ್ನು ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯದ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸುವುದು ಸರ್ಕಾರಕ್ಕೆ ಅನಿವಾರ್ಯವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಕ್ಟೋಬರ್ 29ರಂದು ಸುಪ್ರೀಂ ಕೋರ್ಟ್, 2011ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿಗಳ ನೇಮಕಾತಿಯನ್ನು ಮಾನ್ಯಗೊಳಿಸಲು ರಾಜ್ಯ ಸರ್ಕಾರ ಜಾರಿಗೆ ತಂದಿದ್ದ ಕರ್ನಾಟಕ ನಾಗರಿಕ ಸೇವೆಗಳ (2011ನೇ ಬ್ಯಾಚ್ ಗೆಜೆಟೆಡ್ ಪ್ರೊಬೇಷನರಿಗಳ ಆಯ್ಕೆ ಮತ್ತು ನೇಮಕಾತಿಯ ಮೌಲ್ಯಮಾಪನ) 2022ರ ಕಾಯ್ದೆಯನ್ನು ಅಸಂವಿಧಾನಿಕ ಎಂದು ಘೋಷಿಸಿ ರದ್ದುಗೊಳಿಸಿತ್ತು.

ಕೆಪಿಎಸ್‌ಸಿ ನೇಮಕಾತಿ ಪ್ರಕ್ರಿಯೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತ ನಡೆದಿರುವ ಆರೋಪಗಳ ಹಿನ್ನೆಲೆಯಲ್ಲಿ ಈ ಹಿಂದೆ ನ್ಯಾಯಾಲಯಗಳು ನೇಮಕಾತಿಯನ್ನು ರದ್ದುಗೊಳಿಸಿದ್ದವು. ಆದರೆ, 2022ರ ಕಾಯ್ದೆ ಮೂಲಕ ನೇಮಕಾತಿಗೆ ಮರುಜೀವ ನೀಡುವ ಪ್ರಯತ್ನ ನಡೆದಿತ್ತು.

ಈಗ ಸುಪ್ರೀಂ ಕೋರ್ಟ್ ಆ ಕಾಯ್ದೆಯನ್ನೇ ರದ್ದುಗೊಳಿಸಿರುವುದರಿಂದ ಅದರ ಆಧಾರದ ಮೇಲೆ ನಡೆದ ನೇಮಕಾತಿಗಳೂ ಅಸಿಂಧುವಾಗಿವೆ. ಹೀಗಾಗಿ, ಹಳೆಯ ಅಧಿಕಾರಿಗಳನ್ನು ಸೇವೆಯಲ್ಲಿ ಮುಂದುವರಿಸಲು ಸರ್ಕಾರಕ್ಕೆ ಸ್ವತಂತ್ರ ಅಧಿಕಾರವಿಲ್ಲ ಎಂದು ಕಾನೂನು ಇಲಾಖೆ ಸ್ಪಷ್ಟಪಡಿಸಿದೆ.

ವಿಶೇಷ ಪರೀಕ್ಷೆಗೆ ಅವಕಾಶವಿಲ್ಲ

2011ನೇ ಬ್ಯಾಚ್‌ನ ಅಭ್ಯರ್ಥಿಗಳಿಗೆ ಮಾತ್ರ ಸೀಮಿತವಾಗಿ ವಿಶೇಷ ಪರೀಕ್ಷೆ ನಡೆಸುವುದು ಅಥವಾ ಪ್ರತ್ಯೇಕ ನೇಮಕಾತಿ ಪ್ರಕ್ರಿಯೆ ರೂಪಿಸುವುದು ಸಂವಿಧಾನದ 14 ಮತ್ತು 16ನೇ ವಿಧಿಗಳ ಉಲ್ಲಂಘನೆಗೆ ಕಾರಣವಾಗಬಹುದು ಎಂದು ಇಲಾಖೆ ಎಚ್ಚರಿಸಿದೆ.

ಇಂತಹ ಕ್ರಮವು ಸುಪ್ರೀಂ ಕೋರ್ಟ್ ತೀರ್ಪಿನ ಆಶಯವನ್ನು ಬದಿಗೊತ್ತುವ ಪ್ರಯತ್ನವೆಂದೂ ಪರಿಗಣನೆಯಾಗಬಹುದು.

ಅಲ್ಲದೆ, ಹೊಸ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಹಾಲಿ ಅಧಿಕಾರಿಗಳನ್ನು ಸೇವೆಯಲ್ಲಿ ಉಳಿಸಿಕೊಳ್ಳಲು ಸುಪ್ರೀಂ ಕೋರ್ಟ್ ಯಾವುದೇ ಅನುಮತಿ ನೀಡಿಲ್ಲ.

ನ್ಯಾಯಾಲಯದ ಸ್ಪಷ್ಟಅನುಮತಿಯಿಲ್ಲದೆ ಅಂತಹ ಕ್ರಮ ಕೈಗೊಂಡರೆ ನ್ಯಾಯಾಂಗ ಆದೇಶದ ಉಲ್ಲಂಘನೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಅಭಿಪ್ರಾಯಪಟ್ಟಿದೆ.

ಹೊಸ ನೇಮಕಾತಿಗೆ ಒಂದು ಬಾರಿಯ ವಯೋಮಿತಿ ಸಡಿಲಿಕೆ

ಸುಪ್ರೀಂ ಕೋರ್ಟ್ ತನ್ನ ತೀರ್ಪಿನ 19ನೇ ಪ್ಯಾರಾದಲ್ಲಿ ಮಹತ್ವದ ನಿರ್ದೇಶನ ನೀಡಿದೆ. ಪ್ರಸ್ತುತ ಜಾರಿಯಲ್ಲಿರುವ ನೇಮಕಾತಿ ನಿಯಮಗಳ ಪ್ರಕಾರ ಖಾಲಿ ಇರುವ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಿಗೆ ಹೊಸದಾಗಿ ಅಧಿಸೂಚನೆ ಹೊರಡಿಸಿ, ಮುಕ್ತ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇಮಕಾತಿ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಈ ಪ್ರಕ್ರಿಯೆಯಲ್ಲಿ 2011ರ ಕಳಂಕಿತ ನೇಮಕಾತಿ ಪಟ್ಟಿಯಲ್ಲಿ ಇಲ್ಲದವರು, ಪ್ರಕರಣದ ಆರು ಮೇಲ್ಮನವಿದಾರರು ಹಾಗೂ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ (ಕೆಎಟಿ) ಪ್ರಕರಣ ಬಾಕಿ ಇರುವ ಅರ್ಜಿದಾರರು ಸೇರಿದಂತೆ ಅರ್ಹ ಅಭ್ಯರ್ಥಿಗಳು ಭಾಗವಹಿಸಬಹುದು.

ಇವರಿಗೆ ಮಾತ್ರವಲ್ಲದೆ, ಪ್ರಸ್ತುತ ಅರ್ಹತೆ ಹೊಂದಿರುವ ಇತರ ಅಭ್ಯರ್ಥಿಗಳಿಗೂ ಒಂದು ಬಾರಿಯ ಅವಕಾಶವಾಗಿ ವಯೋಮಿತಿ ಸಡಿಲಿಕೆ ನೀಡಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.

ಹಿರಿಯತೆ ಮತ್ತು ಹಿಂಬಾಕಿ ವೇತನ ಸಿಗದು

ಹೊಸ ನೇಮಕಾತಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಹೊರಡಿಸಿದ ದಿನಾಂಕದಿಂದ ಮಾತ್ರ ಹಿರಿಯತೆ ಅನ್ವಯವಾಗಲಿದೆ. ಹಿಂದಿನ ಸೇವಾವಧಿಯನ್ನು ಆಧರಿಸಿ ಹಿಂಬಾಕಿ ವೇತನ ಅಥವಾ ಹಿಂದಿನ ದಿನಾಂಕದಿಂದಲೇ ನೇಮಕಾತಿ ಪರಿಗಣಿಸುವ ಸೌಲಭ್ಯ ದೊರೆಯುವುದಿಲ್ಲ. ಈಗಾಗಲೇ ಸೇವೆಯಲ್ಲಿರುವ ಅಧಿಕಾರಿಗಳಿಗೂ ಹೊಸದಾಗಿ ನೇಮಕಗೊಂಡ ದಿನಾಂಕದಿಂದ ಮಾತ್ರ ಹಿರಿಯತೆ ಲೆಕ್ಕ ಹಾಕಲಾಗುತ್ತದೆ.

ಆದರೆ, ಅವರ ಹಿಂದಿನ ಸೇವಾವಧಿಯನ್ನು ಪಿಂಚಣಿ ಮತ್ತು ನಿವೃತ್ತಿ ಸೌಲಭ್ಯಗಳ ಲೆಕ್ಕಾಚಾರಕ್ಕೆ ಪರಿಗಣಿಸಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಸರ್ಕಾರದ ಮುಂದಿರುವ ಆಯ್ಕೆಗಳೇನು?

ಕಾನೂನು ಇಲಾಖೆಯು ಕಡಿಮೆ ಅಪಾಯದ ಪರ್ಯಾಯವನ್ನೂ ಸೂಚಿಸಿದೆ. 2011ನೇ ಬ್ಯಾಚ್‌ಗೆ ಯಾವುದೇ ವಿಶೇಷ ಆದ್ಯತೆ ನೀಡದೆ, ಎಲ್ಲ ಅರ್ಹ ಅಭ್ಯರ್ಥಿಗಳಿಗೆ ಮುಕ್ತವಾಗಿರುವ ತಾತ್ಕಾಲಿಕ ಅಥವಾ ಗುತ್ತಿಗೆ ಆಧಾರಿತ ನೇಮಕಾತಿ ವ್ಯವಸ್ಥೆಯನ್ನು ಪರಿಗಣಿಸಬಹುದು ಎಂದು ತಿಳಿಸಿದೆ.

ಆದರೆ, ಹಾಲಿ ಅಧಿಕಾರಿಗಳ ಸೇವೆಯನ್ನು ಮುಂದುವರಿಸುವುದು ಅಥವಾ ಪರಿವರ್ತನಾ ವ್ಯವಸ್ಥೆ ರೂಪಿಸುವುದು ಅಗತ್ಯವೆನಿಸಿದರೆ, ಸರ್ಕಾರ ಮೊದಲು ಸುಪ್ರೀಂ ಕೋರ್ಟ್‌ನಿಂದ ಸ್ಪಷ್ಟನೆ ಪಡೆಯಬೇಕು ಎಂದು ಸಲಹೆ ನೀಡಿದೆ.

ಇದೇ ವೇಳೆ, ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ 2011ನೇ ಬ್ಯಾಚ್‌ನ ಅಧಿಕಾರಿಗಳು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ. ನ್ಯಾಯಾಲಯ ಯಾವುದೇ ನಿರ್ದಿಷ್ಟ ಗಡುವು ನೀಡದಿದ್ದರೂ, ತೀರ್ಪಿನ ಪರಿಣಾಮವಾಗಿ ಅಧಿಕಾರಿಗಳನ್ನು ಸೇವೆಯಿಂದ ಬಿಡುಗಡೆ ಮಾಡುವ ಅನಿವಾರ್ಯತೆ ಎದುರಾಗಬಹುದು ಎಂಬ ಆತಂಕ ಅಧಿಕಾರಿಗಳಲ್ಲಿದೆ.

ಕೆಪಿಎಸ್‌ಸಿ ನೇಮಕಾತಿ ಹಗರಣಕ್ಕೆ ಸಂಬಂಧಿಸಿದ ಸುಮಾರು ಒಂದೂವರೆ ದಶಕದ ಕಾನೂನು ಹೋರಾಟ ನಿರ್ಣಾಯಕ ಘಟ್ಟ ತಲುಪಿದೆ. ಒಂದು ಕಡೆ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕಾದ ಸಾಂವಿಧಾನಿಕ ಹೊಣೆಗಾರಿಕೆ, ಮತ್ತೊಂದೆಡೆ ಈಗಾಗಲೇ ಹಲವು ವರ್ಷಗಳಿಂದ ಸರ್ಕಾರಿ ಸೇವೆಯಲ್ಲಿರುವ ಅಧಿಕಾರಿಗಳ ಭವಿಷ್ಯ ಎಂಬ ಎರಡು ಸವಾಲುಗಳು ರಾಜ್ಯ ಸರ್ಕಾರದ ಮುಂದಿವೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಂದಿನ ಹೆಜ್ಜೆ ಮತ್ತು ಸುಪ್ರೀಂ ಕೋರ್ಟ್‌ನಿಂದ ಪಡೆಯುವ ಸ್ಪಷ್ಟನೆ ಮಹತ್ವ ಪಡೆದುಕೊಂಡಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular