ಬೆಳಗ್ಗಿನ ಜಾವದ ಗಡಿಬಿಡಿಯಲ್ಲಿ ಉಪಾಹಾರ ತಯಾರಿಸುವುದು ದೊಡ್ಡ ಸವಾಲಿನ ಕೆಲಸ. ಸಮಯದ ಅಭಾವದಿಂದಾಗಿ ಅನೇಕರು ಬ್ರೇಕ್‌ಫಾಸ್ಟ್ ಸ್ಕಿಪ್ ಮಾಡುತ್ತಾರೆ ಅಥವಾ ಜಂಕ್ ಫುಡ್ ಮೊರೆ ಹೋಗುತ್ತಾರೆ. ಆದರೆ, ದಿನದ ಆರಂಭ ಆರೋಗ್ಯಕರ ಹಾಗೂ ಪ್ರೋಟೀನ್‌ಯುಕ್ತ ಆಹಾರದೊಂದಿಗೆ ಇರಬೇಕಾದುದು ಮುಖ್ಯ. ಇಂತಹ ಬ್ಯುಸಿ ದಿನಗಳಿಗಾಗಿಯೇ ಕೇವಲ ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದಾದ ಹೈ-ಪ್ರೋಟೀನ್ ಟೊಮೆಟೊ ಸ್ಯಾಂಡ್‌ವಿಚ್ ಅತ್ಯುತ್ತಮ ಆಯ್ಕೆಯಾಗಿದೆ.
ಪನೀರ್ ಮತ್ತು ಗೋಡಂಬಿಯ ಪೋಷಕಾಂಶ ಹಾಗೂ ಟೊಮೆಟೊದ ಚಾಟ್‌ಪಟಾ ರುಚಿ ಹೊಂದಿರುವ ಈ ಸ್ಯಾಂಡ್‌ವಿಚ್ ದಿನವಿಡೀ ನಿಮ್ಮನ್ನು ಎನರ್ಜಿಟಿಕ್ ಆಗಿಡಲು ನೆರವಾಗುತ್ತದೆ. ಕಚೇರಿ ಅಥವಾ ಕಾಲೇಜಿಗೆ ಹೋಗುವವರಿಗೆ ಇದು ಒಂದು ಪರ್ಫೆಕ್ಟ್ ಮತ್ತು ಹೆಲ್ದೀ ಬ್ರೇಕ್‌ಫಾಸ್ಟ್ ಆಪ್ಷನ್ ಆಗಿದೆ.
ಈ ಸ್ಯಾಂಡ್‌ವಿಚ್‌ನ ವಿಶೇಷತೆಗಳೇನು?
- ಪ್ರೋಟೀನ್ ಭರಿತ ಆಹಾರ: ಇದರಲ್ಲಿ ಬಳಸಲಾಗುವ ಪನೀರ್ ಮತ್ತು ಗೋಡಂಬಿ ಮಿಶ್ರಣವು ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಒದಗಿಸುತ್ತದೆ ಮತ್ತು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ನೋಡಿಕೊಳ್ಳುತ್ತದೆ.
- ಸಮಯದ ಉಳಿತಾಯ: ಇದಕ್ಕೆ ಹೆಚ್ಚಿನ ಪ್ರಕ್ರಿಯೆಯ ಅಗತ್ಯವಿಲ್ಲ. ಇದರ ಸ್ಪ್ರೆಡ್ ಅನ್ನು ಮೊದಲೇ ಸಿದ್ಧಪಡಿಸಿಟ್ಟುಕೊಂಡರೆ ಕೇವಲ ಐದು ನಿಮಿಷದಲ್ಲಿ ಸ್ಯಾಂಡ್‌ವಿಚ್ ಸಿದ್ಧವಾಗುತ್ತದೆ.
- ಸಮತೋಲಿತ ಪೋಷಕಾಂಶ: ಪ್ರೋಟೀನ್, ಉತ್ತಮ ಕೊಬ್ಬು ಹಾಗೂ ತರಕಾರಿಗಳ ಮಿಶ್ರಣವಿರುವುದರಿಂದ ಇದು ದೇಹಕ್ಕೆ ಭಾರ ಎನಿಸದೆ ಉತ್ತಮ ಪೋಷಣೆ ನೀಡುತ್ತದೆ.
- ಪ್ರಯಾಣಕ್ಕೆ ಸೂಕ್ತ: ಕಚೇರಿಗೆ ಅಥವಾ ದೂರದ ಪ್ರಯಾಣಕ್ಕೆ ಪ್ಯಾಕ್ ಮಾಡಿಕೊಂಡು ಹೋಗಲು ಇದು ಅತ್ಯಂತ ಸುಲಭ ಮತ್ತು ಆರಾಮದಾಯಕ ಆಹಾರವಾಗಿದೆ.
ಬೇಕಾಗುವ ಸಾಮಗ್ರಿಗಳು
ಪ್ರೋಟೀನ್ ಮಿಶ್ರಣಕ್ಕಾಗಿ:
- ಪನೀರ್ – 150 ಗ್ರಾಂ
- ನೆನೆಸಿದ ಗೋಡಂಬಿ – 10 ರಿಂದ 12
- ಬೆಳ್ಳುಳ್ಳಿ ಎಸಳು – 2
- ಆಲಿವ್ ಎಣ್ಣೆ – 1 ಚಮಚ
- ಕಾಳುಮೆಣಸಿನ ಪುಡಿ – ಕಾಲು ಚಮಚ
- ರುಚಿಗೆ ತಕ್ಕಷ್ಟು ಉಪ್ಪು
ಟೊಮೆಟೊ ಫಿಲ್ಲಿಂಗ್‌ಗಾಗಿ:
- ಸಣ್ಣದಾಗಿ ಹೆಚ್ಚಿದ ಟೊಮೆಟೊ – 2
- ಎಣ್ಣೆ – 1 ಚಮಚ
- ಸಣ್ಣದಾಗಿ ಹೆಚ್ಚಿದ ಬೆಳ್ಳುಳ್ಳಿ – 2 ಎಸಳು
- ಸಣ್ಣದಾಗಿ ಹೆಚ್ಚಿದ ಈರುಳ್ಳಿ – 1 (ಬೇಕಿದ್ದರೆ ಮಾತ್ರ)
- ಒಣ ಮೆಣಸಿನಕಾಯಿ ಚೂರುಗಳು (ಚಿಲ್ಲಿ ಫ್ಲೇಕ್ಸ್) – ಅರ್ಧ ಚಮಚ
- ಕೊತ್ತಂಬರಿ ಸೊಪ್ಪು – 1 ಚಮಚ
- ರುಚಿಗೆ ತಕ್ಕಷ್ಟು ಉಪ್ಪು
ಇತರ ಸಾಮಗ್ರಿಗಳು:
- ಬ್ರೆಡ್ ಸ್ಲೈಸ್‌ಗಳು – 4
- ಟೋಸ್ಟ್ ಮಾಡಲು ಬೆಣ್ಣೆ ಅಥವಾ ಎಣ್ಣೆ
ತಯಾರಿಸುವ ವಿಧಾನ
ಮೊದಲಿಗೆ ಪ್ರೋಟೀನ್ ಸ್ಪ್ರೆಡ್ ತಯಾರಿಸಲು ಒಂದು ಮಿಕ್ಸಿ ಜಾರ್‌ಗೆ ಪನೀರ್, ನೆನೆಸಿದ ಗೋಡಂಬಿ, ಬೆಳ್ಳುಳ್ಳಿ, ಆಲಿವ್ ಎಣ್ಣೆ, ಕಾಳುಮೆಣಸಿನ ಪುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ನುಣ್ಣಗೆ ರುಬ್ಬಿಕೊಳ್ಳಿ.
ನಂತರ ಒಂದು ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿ, ಹೆಚ್ಚಿದ ಬೆಳ್ಳುಳ್ಳಿ ಹಾಕಿ ಹುರಿಯಿರಿ. ಇದಕ್ಕೆ ಈರುಳ್ಳಿ ಮತ್ತು ಟೊಮೆಟೊ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಬಾಡಿಸಿ. ಬಳಿಕ ಚಿಲ್ಲಿ ಫ್ಲೇಕ್ಸ್, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಟೊಮೆಟೊ ಮೆತ್ತಗಾಗುವವರೆಗೆ ಬೇಯಿಸಿ, ನಂತರ ಈ ಮಿಶ್ರಣವನ್ನು ಪೂರ್ತಿಯಾಗಿ ತಣ್ಣಗಾಗಲು ಬಿಡಿ.
ಈಗ ಬ್ರೆಡ್ ಸ್ಲೈಸ್ ತೆಗೆದುಕೊಂಡು ಅದರ ಮೇಲೆ ಸಿದ್ಧಪಡಿಸಿದ ಪನೀರ್ ಪ್ರೋಟೀನ್ ಮಿಶ್ರಣವನ್ನು ಸಮನಾಗಿ ಹರಡಿ. ಇದರ ಮೇಲೆ ಟೊಮೆಟೊ ಮಸಾಲೆಯನ್ನು ಇಡಿ. ಮತ್ತೊಂದು ಬ್ರೆಡ್ ಸ್ಲೈಸ್‌ನಿಂದ ಇದನ್ನು ಮುಚ್ಚಿ, ಪ್ಯಾನ್ ಮೇಲೆ ಬೆಣ್ಣೆ ಅಥವಾ ಎಣ್ಣೆ ಹಾಕಿ ಎರಡೂ ಕಡೆ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಚೆನ್ನಾಗಿ ಟೋಸ್ಟ್ ಮಾಡಿ.
ಈಗ ಬಿಸಿಬಿಸಿಯಾದ ಮತ್ತು ಕ್ರಿಸ್ಪಿಯಾದ ಹೈ-ಪ್ರೋಟೀನ್ ಟೊಮೆಟೊ ಸ್ಯಾಂಡ್‌ವಿಚ್ ಸವಿಯಲು ಸಿದ್ಧ. ನಿಮ್ಮ ದಿನದ ಆರಂಭವನ್ನು ಹೆಲ್ದೀ ಆಗಿ ಮಾಡಲು ಇದನ್ನು ಇಂದೇ ಪ್ರಯತ್ನಿಸಿ.

