HomeKarnatakaBIG NEWS: ಸೈಬರ್ ಖದೀಮರಿಗೆ ಶಾಕ್: ರಾಜ್ಯದಲ್ಲಿ ಸೈಬರ್ ವಂಚನೆ ತಡೆಗೆ ಅತ್ಯಾಧುನಿಕ ತಂತ್ರಜ್ಞಾನ, ಮತ್ತಷ್ಟು...

BIG NEWS: ಸೈಬರ್ ಖದೀಮರಿಗೆ ಶಾಕ್: ರಾಜ್ಯದಲ್ಲಿ ಸೈಬರ್ ವಂಚನೆ ತಡೆಗೆ ಅತ್ಯಾಧುನಿಕ ತಂತ್ರಜ್ಞಾನ, ಮತ್ತಷ್ಟು ಬಿಗಿ ಕ್ರಮ

ಬೆಂಗಳೂರು: ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಪೊಲೀಸ್‌ ವೈರ್‌ಲೆಸ್‌ ಕೇಂದ್ರ ಕಚೇರಿಗೆ ಭೇಟಿ ನೀಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ, ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.

ದೇಶಾದ್ಯಂತ ಸೈಬರ್ ಅಪರಾಧಗಳು ಮತ್ತು ಆನ್‌ಲೈನ್ ವಂಚನೆ ಪ್ರಕರಣಗಳು ತೀವ್ರವಾಗಿ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಕರ್ನಾಟಕ ಸರ್ಕಾರ ಮತ್ತು ಪೊಲೀಸ್ ಇಲಾಖೆ ವಂಚಕರಿಗೆ ಬಿಸಿ ಮುಟ್ಟಿಸಲು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಬಿಗಿ ಕ್ರಮಗಳನ್ನು ಕೈಗೊಂಡಿದೆ. ಸೈಬರ್ ವಂಚನೆಗೆ ಒಳಗಾದ ಹಣವನ್ನು ಬ್ಯಾಂಕ್‌ಗಳಲ್ಲಿ ಫ್ರೀಜ್ ಮಾಡುವ (Lien Mark) ಪ್ರಕ್ರಿಯೆಯಲ್ಲಿ ಕರ್ನಾಟಕ ಅತ್ಯುನ್ನತ ಸಾಧನೆ ಮಾಡಿದೆ.

ವಂಚನೆಗೊಳಗಾದ ಸಾರ್ವಜನಿಕರ ಹಣವನ್ನು ಬ್ಯಾಂಕುಗಳಲ್ಲೇ ತಡೆಹಿಡಿಯುವಲ್ಲಿ (Lien Marked Amount) ಕರ್ನಾಟಕ ಪೊಲೀಸರು ಗಮನಾರ್ಹ ಯಶಸ್ಸು ಸಾಧಿಸಿದ್ದಾರೆ. ಮಹಾರಾಷ್ಟ್ರದಲ್ಲಿ ವರದಿಯಾದ ₹3,203 ಕೋಟಿ ವಂಚನೆಯಲ್ಲಿ ₹548 ಕೋಟಿ ಮೊತ್ತವನ್ನು (17%) ಹಣವನ್ನು ಬ್ಲಾಕ್ ಮಾಡಿದ್ದರೆ, ಕರ್ನಾಟಕದಲ್ಲಿ ವರದಿಯಾದ ₹2,640 ಕೋಟಿಯಲ್ಲಿ ₹436 ಕೋಟಿ (17%) ಹಣವನ್ನು ಯಶಸ್ವಿಯಾಗಿ ತಡೆಹಿಡಿಯುವ ಮೂಲಕ ಸಾರ್ವಜನಿಕರ ಹಣವನ್ನು ರಕ್ಷಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2025ರಲ್ಲಿ ವೆಬ್‌ ಮೂಲಕ ಹಾಗೂ 2026ರಲ್ಲಿ ವಾಟ್ಸಾಪ್ ಚಾಟ್‌ ಮೂಲಕ ದೂರು ಕೊಡುವ ಸೌಲಭ್ಯವನ್ನು ಪರಿಚಯಿಸಿದ ನಂತರ, ವೈರ್‌ಲೆಸ್‌ ಘಟಕಕ್ಕೆ ದೂರು ನೀಡುವ ಸಾರ್ವಜನಿಕರ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ. 2026ರಲ್ಲಿ ಮೊದಲ 5 ತಿಂಗಳಲ್ಲೇ (ಜನವರಿ-ಮೇವರೆಗೆ) 10,33,352 ಕರೆಗಳು ಬಂದಿದ್ದು, 90,225 ದೂರುಗಳು ದಾಖಲಾಗಿವೆ. ಈ ಅವಧಿಯಲ್ಲಿ ₹807 ಕೋಟಿಯಷ್ಟು ವಂಚನೆಯಾಗಿದ್ದು, ಅದರಲ್ಲಿ ಈಗಾಗಲೇ ₹216 ಕೋಟಿ, ಅಂದರೆ 27% ರಷ್ಟು ಹಣವನ್ನು ಬ್ಲಾಕ್ ಮಾಡಲಾಗಿದೆ.

ಇಲಾಖೆಯ ಪ್ರಮುಖ ಹೆಜ್ಜೆಗಳು

ಸೈಬರ್ ಅಪರಾಧಗಳ ತನಿಖೆ ಮತ್ತು ಹಣ ಹಿಂಪಡೆಯುವಿಕೆಯನ್ನು ಚುರುಕುಗೊಳಿಸಲು ಪೊಲೀಸ್ ಇಲಾಖೆ ಹಲವು ಪ್ರಮುಖ ಹೆಜ್ಜೆಗಳನ್ನು ಇಟ್ಟಿದೆ. ಬ್ಯಾಂಕುಗಳಲ್ಲಿ ಸೈಬರ್ ವಂಚನೆಯಾದ ಹಣವನ್ನು ತಕ್ಷಣವೇ ಫ್ರೀಜ್ (Lien Marking) ಮಾಡಲು ಬ್ಯಾಂಕ್ ಫಾಲೋ-ಅಪ್ ಟೀಮ್ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ. ಇಲಾಖೆಯ ವೈರ್‌ಲೆಸ್ ಸಿಬ್ಬಂದಿಗೆ ಸೈಬರ್ ಅಪರಾಧ, ಸಿಸ್ಟಮ್ ಅಡ್ಮಿನ್ ಮತ್ತು I4C (Indian Cyber Crime Coordination Centre) ಪ್ಲಾಟ್‌ಫಾರ್ಮ್ ಬಳಕೆಯ ಬಗ್ಗೆ ವಿಶೇಷ ತರಬೇತಿ ನೀಡಲಾಗಿದೆ. ಬ್ಯಾಂಕುಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು, ಸಿಸಿಟಿವಿ ದೃಶ್ಯಾವಳಿಗಳ ವಿನಂತಿ ಹಾಗೂ ಬ್ಲಾಕ್ ಆದ ಹಣವನ್ನು ಸಾರ್ವಜನಿಕರಿಗೆ ಮರಳಿ ಕೊಡಿಸಲು ಹಾಗೂ ಎಫ್‌ಐಆರ್ (FIR) ದಾಖಲಿಸಲು ವಿಶೇಷ ಸಂಪರ್ಕ ಅಧಿಕಾರಿಗಳನ್ನು (Liaison Officers) ಬಳಸಿಕೊಳ್ಳಲಾಗುತ್ತಿದೆ.

ತಂತ್ರಜ್ಞಾನ ಆಧಾರಿತ ಆಧುನಿಕ ಸುಧಾರಣೆಗಳು

ಸಾರ್ವಜನಿಕರಿಗೆ ದೂರು ನೀಡಲು ಸುಲಭವಾಗುವಂತೆ ಮತ್ತು ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸಲು ಇಲಾಖೆಯು ಇತ್ತೀಚೆಗೆ ಹಲವು ತಾಂತ್ರಿಕ ಸುಧಾರಣೆಗಳನ್ನು ತಂದಿದೆ.

2025ರಲ್ಲಿ ವೆಬ್-ಆಧಾರಿತ ಕಂಪ್ಲೇಂಟ್ ಬಾಟ್ ಮತ್ತು 2026 ರಲ್ಲಿ ವಾಟ್ಸಾಪ್ ಕಂಪ್ಲೇಂಟ್ ಬಾಟ್ (WhatsApp Complaint Bot) ಪರಿಚಯಿಸಲಾಗಿದೆ. ದೂರುಗಳ ಆದ್ಯತೆಯ ಮೇರೆಗೆ ಕರೆಗಳನ್ನು ವಿಂಗಡಿಸಲು ಮತ್ತು ಸ್ವಯಂಚಾಲಿತವಾಗಿ ನಿರ್ವಹಿಸಲು IVRS ತಂತ್ರಜ್ಞಾನ ಬಳಸಲಾಗುತ್ತಿದೆ. ಸಾರ್ವಜನಿಕರು ಕರೆ ಮಾಡಿದಾಗ ಕಡಿತಗೊಂಡ ಕರೆಗಳಿಗೆ (Dropped Calls) ದೂರುಗಳನ್ನು ಅಪ್‌ಲೋಡ್ ಮಾಡಲು ಸ್ವಯಂಚಾಲಿತ ಬಾಟ್ ಲಿಂಕ್ ಕಳುಹಿಸಲಾಗುತ್ತಿದೆ. I4C ಪ್ಲಾಟ್‌ಫಾರ್ಮ್‌ನಲ್ಲಿ ಬ್ಯಾಂಕ್ ವಹಿವಾಟುಗಳನ್ನು ವೇಗವಾಗಿ ನಿರ್ಬಂಧಿಸಲು 51 ಪಿಎಸ್ಐ ಮತ್ತು ಹೆಡ್ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿದೆ.

ಒಟ್ಟಾರೆಯಾಗಿ, ತಂತ್ರಜ್ಞಾನ ಹಾಗೂ ದಕ್ಷ ಅಧಿಕಾರಿಗಳ ಸಮಯೋಚಿತ ಕ್ರಮದಿಂದಾಗಿ ಕರ್ನಾಟಕವು ಸೈಬರ್ ವಂಚಕರ ಜಾಲವನ್ನು ಭೇದಿಸುವಲ್ಲಿ ಮತ್ತು ಸಾರ್ವಜನಿಕರ ದುಡಿಮೆಯ ಹಣವನ್ನು ರಕ್ಷಿಸುವಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿ ನಿಂತಿದೆ. ರಾಜ್ಯದ ಪೊಲೀಸರು ಬಳಸುತ್ತಿರುವ ವೈರ್‌ಲೆಸ್‌ ವ್ಯವಸ್ಥೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಮತ್ತಷ್ಟು ಸದೃಢಗೊಳಿಸುವುದು ನಮ್ಮ ಉದ್ದೇಶವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಗ್ಯಾರಂಟಿ ಸರ್ಕಾರ ಬದ್ಧವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular