ಯಾದಗಿರಿ: ಹೇಮರೆಡ್ಡಿ ಮಲ್ಲಮ್ಮ ಸಹಕಾರ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಗಳು ತೀವ್ರಗೊಂದ ಬೆನ್ನಲ್ಲೇ ಬ್ಯಾಂಕ್ ಅಧ್ಯಕ್ಷ ಬಸನಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಯಾದಗಿರಿ ಜಿಲ್ಲೆಯ ಹೇಮರೆಡ್ಡಿ ಮಲ್ಲಮ್ಮ ಸಹಕಾರ ಬ್ಯಾಂಕ್ ನಲ್ಲಿ 16 ಕೋಟಿ ವ್ಯವಹಾರದಲ್ಲಿ 13 ಕೋಟಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ಬ್ಯಾಂಕ್ ಅಧ್ಯಕ್ಷ ಬಸನಗೌಡ 8 ಪುಟಗಳ ಡೆತ್ ನೋಟ್ ಬರೆದಿಟ್ಟು ಶಹಪುರದ ಮನೆಯಲ್ಲಿಯೇ ನೇಣಿಗೆ ಕೊರಳೊಡ್ಡಿದ್ದಾರೆ.
ಹಣ ನೀಡುವಂತೆ ಠೇವಣಿದಾರರು ಬ್ಯಾಂಕ್ ಮುಂದೆ ಧರಣಿ ಆರಂಭಿಸುತ್ತಿದ್ದಂತೆಯೇ ಊರು ಬಿಟ್ಟಿದ್ದ ಬಸನಗೌಡ, ನಿನ್ನೆ ರಾತ್ರಿ ಮನೆಗೆ ವಾಪಸ್ ಆಗಿದ್ದರು. ಇಂದು ಬೆಳಿಗ್ಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬ್ಯಾಂಕ್ ಸಿಇಒ, ಸಹಾಯಕ ವ್ಯವಸ್ಥಾಪಕ, ಪಿಗ್ಮಿ ಏಜೆಂಟ್ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇವರಿಂದಲೇ ಬ್ಯಾಂಕ್ ಹಣ ಅವ್ಯವಹಾರವಾಗಿದೆ ಎಂದು ದೂರಲಾಗಿತ್ತು. ಆದರೆ ಠೇವಣಿದಾರರು ಆಡಳಿತ ಮಂಡಳಿ ವಿರುದ್ಧ ಆರೋಪ ಮಾಡಿದ್ದರು. ಬ್ಯಾಂಕ್ ಅಧ್ಯಕ್ಷ ಬಸನಗೌಡ ಸೇರಿ ಆಡಳಿತ ಮಂಡಳಿ ವಿರುದ್ಧ ಆರೋಪ ಮಾಡಿದ್ದರು. ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ ಬ್ಯಾಂಕ್ ಅಧ್ಯಕ್ಷ ಬಸನಗೌಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

