ಬೆಂಗಳೂರು: ರಾಜ್ಯದ ಹಲವೆಡೆ ಸುರಿದ ಭಾರಿ ಆಲಿಕಲ್ಲು ಮಳೆ ಕಾಶ್ಮೀರದಂತಹ ವಾತಾವರಣ ಸೃಷ್ಟಿಸಿದೆ. ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಜನರಿಗೆ ತಂಪು ನೀಡಿದರೂ, ಈ ಅಕಾಲಿಕ ಮಳೆ ರೈತರ ಬದುಕಿನಲ್ಲಿ ಆತಂಕ ಮೂಡಿಸಿದೆ.
ಬೆಂಗಳೂರು ಸೇರಿ 17 ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆಯಾಗಿದ್ದು, ಕಳಘಟಗಿ, ಹುಬ್ಬಳ್ಳಿ, ಕುಂದಗೋಳದಲ್ಲಿ ಹಿಮ ಬಿದ್ದಂತೆ ಭಾಸವಾಗಿದೆ. ಮಳೆ ಸಂಬಂಧಿತ ಘಟನೆಗಳಲ್ಲಿ ಮೃತಪಟ್ಟಿದ್ದಾರೆ. .ಗದಗದಲ್ಲಿ ಸಿಡಿಲು ಬಡಿದು ರೈತ ಸಾವು, ಬೆಳಗಾವಿಯಲ್ಲಿ ಮನೆ ಗೋಡೆ ಕುಸಿದು ಮಹಿಳೆ ಸಾವನ್ನಪ್ಪಿದ್ದಾರೆ. ಮಾವು, ದ್ರಾಕ್ಷಿ, ದಾಳಿಂಬೆ ಮತ್ತು ಕಾಫಿ ಬೆಳೆಗಳಿಗೆ ತೀವ್ರ ಹಾನಿಯಾಗುವ ಆತಂಕ ಉಂಟಾಗಿದೆ.ರಸ್ತೆಗಳಲ್ಲಿ ಆಲಿಕಲ್ಲುಗಳು ರಾಶಿ ಬಿದ್ದಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು.
ಬೆಂಗಳೂರು, ಬೆಳಗಾವಿ, ವಿಜಯಪುರ, ವಿಜಯನಗರ, ಧಾರವಾಡ, ಚಾಮರಾಜನಗರ, ಹಾವೇರಿ ಸೇರಿ ರಾಜ್ಯದ 17 ಜಿಲ್ಲೆಗಳಲ್ಲಿ ಮಂಗಳವಾರ ಆಲಿಕಲ್ಲು ಮಳೆಯಾಗಿದ್ದು, ರಾಜ್ಯದ ಬಹುತೇಕ ಪ್ರದೇಶ ಕೆಲ ಕಾಲ ಆಲಿಕಲ್ಲಿನಿಂದ ಆವೃತವಾಗಿ ‘ಕಾಶ್ಮೀರ’ದಂತೆ ಭಾಸವಾಯಿತು. ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಜನರಿಗೆ ಈ ಮಳೆ ತಂಪು ನೀಡಿದರೂ, ದ್ರಾಕ್ಷಿ, ದಾಳಿಂಬೆ, ಕಾಫಿ ಮತ್ತು ಮಾವು ಸೇರಿದಂತೆ ತೋಟಗಾರಿಕಾ ಬೆಳೆಗಳಿಗೆ ಭಾರೀ ಹಾನಿ ಸಂಭವಿಸುವ ಆತಂಕ ಮೂಡಿಸಿದೆ. ಹಲವೆಡೆ ರಸ್ತೆಗಳು ಆಲಿಕಲ್ಲು ಮಳೆಯಿಂದ ಆವೃತವಾಗಿ ಸಂಚಾರ ಅಸ್ತವ್ಯಸ್ತಗೊಂಡಿದೆ.
ಎಲ್ಲೆಲ್ಲಿ ಮಳೆಯಾಗಿದೆ?
ಬೆಂಗಳೂರು, ಬೆಳಗಾವಿ, ವಿಜಯಪುರ, ಧಾರವಾಡ, ಚಾಮರಾಜನಗರ, ಹಾವೇರಿ, ಗದಗ, ಉತ್ತರ ಕನ್ನಡ, ಕೊಪ್ಪಳ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣನ ಅಬ್ಬರ ಜೋರಾಗಿದೆ.
ಮುಂದಿನ ನಾಲ್ಕು ದಿನ ಮಳೆ ಮುನ್ಸೂಚನೆ
ರಾಜ್ಯದ ವಿವಿಧೆಡೆ ಮುಂದಿನ ನಾಲ್ಕು ದಿನ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮೋಡ ಮುಸುಕಿದ ವಾತಾವರಣ ಇರಲಿದ್ದು, ಮುಂದಿನ ನಾಲ್ಕು ದಿನಗಳವರೆಗೆ ಚದುರಿದಂತೆ ಮಳೆಯಾಗಲಿದೆ. ಕೆಲವು ಪ್ರದೇಶಗಳಲ್ಲಿ ಜೋರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಒಳನಾಡಿನ ಬೀದರ್, ಕಲಬುರಗಿ, ರಾಯಚೂರು ಇತರೆ ಜಿಲ್ಲೆಗಳಲ್ಲಿ ತೀವ್ರ ಬಿಸಿಲಿನ ನಡುವೆಯೂ ಗುಡುಗು ಸಹಿತ ಹಗುರ ಮಳೆಯಾಗುವ ನಿರೀಕ್ಷೆ ಇದೆ. ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಗುಡುಗು ಮತ್ತು ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ.
ಮಂಡ್ಯ, ಚಾಮರಾಜನಗರ, ಮೈಸೂರು, ಹಾಸನ, ಕೊಡಗು, ಚಿಕ್ಕಮಗಳೂರು ಭಾಗದಲ್ಲಿ ಉತ್ತಮ ಮಳೆಯಾಗುವ ಸಂಭವ ಇದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇದ್ದು, ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ.

