ನವದೆಹಲಿ: ಮಾತೃತ್ವ ರಜೆ ಮಾದರಿಯಲ್ಲೇ ಮಗುವಿನ ಪೋಷಣೆಗೆ ಪಿತೃತ್ವ ರಜೆ ನೀಡುವ ಬಗ್ಗೆ ಕಾನೂನು ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಮಗುವಿನ ಪಾಲನೆ ಕೇವಲ ತಾಯಿಯ ಜವಾಬ್ದಾರಿಯಲ್ಲ, ಪೋಷಕರಿಬ್ಬರ ಹಂಚಿಕೆಯ ಹೊಣೆಗಾರಿಕೆಯಾಗಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ. ಪಿತೃತ್ವ ರಜೆಯನ್ನು ಸಾಮಾಜಿಕ ಭದ್ರತಾ ಸೌಲಭ್ಯವೆಂದು ಪರಿಗಣಿಸುವಂತೆ ಸಲಹೆ ನೀಡಿದೆ.
ಮಗು ಮೂರು ತಿಂಗಳಿಗಿಂತ ಕಡಿಮೆ ವಯಸ್ಸಿನದ್ದಾಗಿದ್ದರೆ ಮಾತ್ರ ದತ್ತು ಪಡೆದ ತಾಯಂದಿರಿಗೆ ಹೆರಿಗೆ ರಜೆ ನೀಡಬೇಕು ಎಂಬ ನಿರ್ಬಂಧದ ಸಾಂವಿಧಾನಿಕತೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಮತ್ತು ನ್ಯಾಯಮೂರ್ತಿ ಆರ್. ಮಹದೇವನ್ ಅವರನ್ನೊಳಗೊಂಡ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ಈ ಸೂಚನೆ ನೀಡಿದ್ದು, ಪಿತೃತ್ವ ರಜೆ ನೀಡುವ ಸಂಬಂಧ ಕಾನೂನು ರೂಪಿಸುವಂತೆ ತಿಳಿಸಿದೆ.

