ಬೆಂಗಳೂರು: ವ್ಯಕ್ತಿಯೊಬ್ಬನನ್ನು ಗೋಣಿ ಚೀಲದಲ್ಲಿ ಹಾಕಿಕೊಂಡು ಬಂದು ಆತನನ್ನು ಪಾರ್ಸಲ್ ಮಾಡುವಂತೆ ಕೊರಿಯರ್ ಕಚೇರಿಯಲ್ಲಿ ಯುವಕರ ಗುಂಪು ಹುಚ್ಚಾಟ ನಡೆಸಿದ ಘಟನೆ ಬೆಂಗಳೂರಿನ ವೈಯಾಲಿಕಾವಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ವೈಯಾಲಿಕಾವಲ್ ವಿನಾಯಕ ವೃತದಲ್ಲಿರುವ ಕೊರಿಯರ್ ಕಚೇರಿಗೆ ಮಂಗಳವಾರ ಸಂಜೆ ಆಗಮಿಸಿದ್ದ ಐದು ಜನರ ತಂಡ ಗೋಣಿಚೀಲದಲ್ಲಿ ವೃದ್ಧನನ್ನು ಹಾಕಿ ಕಟ್ಟಿಕೊಂಡು ತಂದಿದ್ದಾರೆ. ಇದನ್ನು ಪಾರ್ಸೆಲ್ ಮಾಡಿ ಎಂದು ಹೇಳಿದ್ದಾರೆ. ಚೀಲ ಅಲುಗಾಡುವುದನ್ನು ಕಂಡ ಸಿಬ್ಬಂದಿ ತೆರೆದು ನೋಡಿದಾಗ ಅದರಲ್ಲಿ ವ್ಯಕ್ತಿಯೊಬ್ಬ ಉಸಿರಾಟ ತೊಂದರೆಯಾಗಿ ಒದ್ದಾಡುವುದು ಕಂಡುಬಂದಿದೆ. ನಂತರ ಆತನಿಗೆ ನೀರು ಕುಡಿಸಿದ್ದಾರೆ. ಯುವಕರ ತಂಡ ಇವರನ್ನು ಬೇರೆ ರಾಜ್ಯಕ್ಕೆ ಪಾರ್ಸಲ್ ಮಾಡಿ ಹಣ ಕೊಡುತ್ತೇವೆ ಎಂದು ಹೇಳಿದೆ. ಚೀಲದಲ್ಲಿ ವ್ಯಕ್ತಿ ಇರುವುದರಿಂದ ಕೊರಿಯರ್ ಮಾಡಲು ಬರುವುದಿಲ್ಲ ಎಂದು ಸಿಬ್ಬಂದಿ ನಿರಾಕರಿಸಿದಾಗ ಜಗಳವಾಡಿದ್ದಾರೆ. ನಂತರ ಕೊರಿಯರ್ ಸಿಬ್ಬಂದಿ ವೈಯಾಲಿಕಾವಲ್ ಠಾಣೆ ಪೋಲಿಸರಿಗೆ ಮಾಹಿತಿ ನೀಡಿದ್ದು, ಯುವಕರ ತಂಡ ಸ್ಥಳದಿಂದ ಪರಾರಿಯಾಗಿದೆ.
ಘಟನೆಯ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದನ್ನು ಆಧರಿಸಿ ಯುವಕರ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಯುವಕರ ಹುಚ್ಚಾಟದ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹುಚ್ಚಾಟ ಮಾಡಿದ ಯುವಕರ ತಂಡವನ್ನು ಪತ್ತೆ ಹಚ್ಚಿದೆ. ಈ ವೇಳೆ ಪ್ರ್ಯಾಂಕ್ ಕತೆ ಬಯಲಾಗಿದೆ. ಅಲ್ಲದೆ ಈ ತಂಡದವರು ಒಂದೇ ಕುಟುಂಬದವರು ಎಂದು ಗೊತ್ತಾಗಿದೆ. ಕ್ಷಮಾಪಣೆ ಬರೆಸಿಕೊಂಡು ಬಿಟ್ಟು ಕಳುಹಿಸಲಾಗಿದೆ.
ಐದು ಮಂದಿ ಸೇರಿಕೊಂಡು ವೈಯಾಲಿಕಾವಲ್ ಕೊರಿಯರ್ ಆಫೀಸ್ ನಲ್ಲಿ ತಂದೆಯನ್ನು ಚೀಲದಲ್ಲಿ ಹಾಕಿ ತೆಗೆದುಕೊಂಡು ಹೋಗಿದ್ದೆವು. ಯುಗಾದಿ ಮತ್ತು ರಂಜಾನ್ ಹಿನ್ನೆಲೆಯಲ್ಲಿ ಎಲ್ಲಾ ಬಸ್ ಗಳ ಪ್ರಯಾಣ ದರ ಹೆಚ್ಚಾಗಿದ್ದು ಸೀಟು ಸಿಗುತ್ತಿಲ್ಲ ಎನ್ನುವ ಸಂದೇಶ ನೀಡಲು ಪ್ರ್ಯಾಂಕ್ ವಿಡಿಯೋ ಮಾಡಲಾಗಿತ್ತು. ಈ ರೀತಿ ಮಾಡುವುದು ತಪ್ಪು ಎಂದು ಗೊತ್ತಿರಲಿಲ್ಲ. ಈಗ ತಪ್ಪು ಎಂದು ಗೊತ್ತಾಗಿದೆ. ಹೀಗಾಗಿ ಕ್ಷಮೆ ಕೋರುತ್ತಿದ್ದೇವೆ ಎಂದು ಯುವತಿ ಪೊಲೀಸರ ಎದುರು ಹೇಳಿಕೊಂಡಿದ್ದಾಳೆ.

