ಬೆಂಗಳೂರು: ಲಾರಿ ಚಾಲಕನಿಂದ 5,000 ರೂ. ಲಂಚ ಪಡೆದ ಆರೋಪ ಹಿನ್ನೆಲೆಯಲ್ಲಿ ಪುಲಕೇಶಿನಗರ ಸಂಚಾರ ಠಾಣೆಯ ಹೆಡ್ ಕಾನ್ ಸ್ಟೇಬಲ್ ಸೋಮಶೇಖರ್ ಅವರನ್ನು ಅಮಾನತು ಮಾಡಲಾಗಿದೆ.
ಜುಲೈ 18ರಂದು ಸಂಜೆ ಸೈಯದ್ ಅಫ್ರೋಜ್ ಎಂಬುವರು ಸೈಂಟ್ ಚಾನ್ಸ್ ಮುಖ್ಯ ರಸ್ತೆಯಲ್ಲಿ ಕಬ್ಬಿಣದ ಸರಕು ತುಂಬಿದ್ದ ಲೋಡ್ ಗಾಡಿಯನ್ನು ಚಾಲನೆ ಮಾಡಿಕೊಂಡು ಬರುತ್ತಿದ್ದರು. ಇದನ್ನು ಗಮನಿಸಿದ ಸೋಮಶೇಖರ್ ವಾಹನ ತಡೆದು ಬಿಎನ್ಎಸ್ 285 ಸೆಕ್ಷನ್ ನಡಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿ ಎಂದು ಕೇಸು ದಾಖಲಿಸಿದ್ದರು.
ಬಿಎನ್ಎಸ್ 285 ಸೆಕ್ಷನ್ ನಡಿ ದಾಖಲಾದ ಪ್ರಕರಣಕ್ಕೆ ನ್ಯಾಯಾಲಯದಲ್ಲಿ ದಂಡ ಪಾವತಿಸಬೇಕಿದೆ. ದಂಡದ ಮೊತ್ತವನ್ನು ನ್ಯಾಯಾಧೀಶರ ನಿರ್ಣಯಿಸುತ್ತಾರೆ. ಆದರೆ ಹೆಡ್ ಕಾನ್ ಸ್ಟೇಬಲ್ ಸೋಮಶೇಖರ್ ಕೋರ್ಟ್ ನಲ್ಲಿ ದಂಡ ಕಟ್ಟುವ ಪ್ರಕರಣಕ್ಕೆ ಪೊಲೀಸ್ ಠಾಣೆಯಲ್ಲಿ 5000 ಲಂಚ ರೂ. ಪಡೆದಿದ್ದಾರೆ. ಹಣ ನೀಡುವ ವೇಳೆ ಲಾರಿ ಚಾಲಕ ತನ್ನ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದು, ನಂತರ ವಿಡಿಯೋ ಸಮೇತ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿ ಹಣ ಪಡೆದ ಆರೋಪದ ಮೇಲೆ ಹೆಡ್ ಕಾನ್ ಸ್ಟೇಬಲ್ ಸೋಮಶೇಖರ್ ಅವರನ್ನು ಅಮಾನತು ಮಾಡಿ ಪೂರ್ವ ವಿಭಾಗ ಸಂಚಾರ ಡಿಸಿಪಿ ಸಾಹಿಲ್ ಬಾಗ್ಲಾ ಆದೇಶಿಸಿದ್ದಾರೆ.

