ನಂಜನಗೂಡು: ಸಂಕಷ್ಟದಲ್ಲಿರುವವರ ದನಿಗೆ ಸ್ಪಂದಿಸುವುದರಲ್ಲಿ ತಾವೆಂದೂ ಹಿಂದೆ ಬೀಳುವುದಿಲ್ಲ ಎಂಬುದನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ವಿಡಿಯೋ ಒಂದರ ಮೂಲಕ ಹರಡಿದ್ದ ಬಡ ದಂಪತಿಯ ಕಣ್ಣೀರ ಕಥೆಗೆ ಸ್ಪಂದಿಸಿದ ಅವರು, ಇಂದು ಸ್ವತಃ ನಂಜನಗೂಡಿನ ಹುಲ್ಲಳ್ಳಿ ಗ್ರಾಮಕ್ಕೆ ಭೇಟಿ ನೀಡಿ ನೆರವಿನ ಹಸ್ತ ಚಾಚಿದ್ದಾರೆ.
ಏನಿದು ಘಟನೆ?
ಹುಲ್ಲಳ್ಳಿ ಗ್ರಾಮದ ಪೂಜಾ ಎಂಬುವವರು ತೀವ್ರ ಅನಾರೋಗ್ಯದಿಂದಾಗಿ ಹಾಸಿಗೆ ಹಿಡಿದಿದ್ದಾರೆ. ಅವರಿಗೆ ಸರಿಯಾಗಿ ನಡೆದಾಡಲು ಸಹ ಸಾಧ್ಯವಾಗುತ್ತಿಲ್ಲ. ಇತ್ತ ಅವರ ಪತಿ ರವಿ ಕೂಡ ಅಪಘಾತದಲ್ಲಿ ಗಾಯಗೊಂಡು ದುಡಿಯಲಾಗದ ಸ್ಥಿತಿಯಲ್ಲಿದ್ದಾರೆ. ಇಡೀ ಸಂಸಾರದ ಹೊರೆ ವಯಸ್ಸಾದ ಪೋಷಕರ ಮೇಲೆ ಬಿದ್ದಿತ್ತು.
ಕುಮಾರಣ್ಣನ ಗಮನ ಸೆಳೆದ ವಿಡಿಯೋ
ಈ ದಂಪತಿಯ ಸ್ಥಿತಿಯನ್ನು ಕಂಡು ಮನನೊಂದ ಚೇತನ್ ಎಂಬ ಯುವಕ, “ಕುಮಾರಣ್ಣ ಅವರಿಗೆ ಮುಟ್ಟುವವರೆಗೂ ಈ ವಿಡಿಯೋ ಶೇರ್ ಮಾಡಿ” ಎಂದು ಸೋಶಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದ. ಆ ಸಮಯದಲ್ಲಿ ದೆಹಲಿಯಲ್ಲಿದ್ದ ಕುಮಾರಸ್ವಾಮಿ ಅವರ ಮೊಬೈಲ್‌ಗೆ ಈ ವಿಡಿಯೋ ತಲುಪಿದೆ. ವಿಡಿಯೋ ನೋಡಿ ಅತೀವ ದುಃಖಿತರಾದ ಅವರು, ಕೂಡಲೇ ಆ ಕುಟುಂಬಕ್ಕೆ ಭೇಟಿ ನೀಡಲು ನಿರ್ಧರಿಸಿದ್ದರು.
ಸ್ಥಳದಲ್ಲೇ ನೆರವು, ಕುಟುಂಬಕ್ಕೆ ಧೈರ್ಯ
ಇಂದು ಹುಲ್ಲಳ್ಳಿಯ ಪೂಜಾ ಅವರ ಮನೆಗೆ ಭೇಟಿ ನೀಡಿದ ಕುಮಾರಸ್ವಾಮಿ ಅವರು ದಂಪತಿಯ ಆರೋಗ್ಯದ ಬಗ್ಗೆ ಮಾಹಿತಿ ಪಡೆದು ಧೈರ್ಯ ತುಂಬಿದರು.ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಸಾಂತ್ವನ ಹೇಳಿದರು.”ನೀವು ಒಂಟಿಯಲ್ಲ, ನಾನು ಮತ್ತು ನಮ್ಮ ಜೆಡಿಎಸ್ ಪಕ್ಷ ಸದಾ ನಿಮ್ಮ ಜೊತೆಗಿರುತ್ತದೆ” ಎಂದು ಭರವಸೆ ನೀಡಿದರು.
ಸಾರ್ವಜನಿಕರ ಶ್ಲಾಘನೆ
ಸಾಮಾನ್ಯ ಯುವಕನೊಬ್ಬ ಮಾಡಿದ ವಿಡಿಯೋಗೆ ಓಗೊಟ್ಟು, ದೂರದ ಊರಿನಿಂದ ಬಂದು ಸಹಾಯ ಮಾಡಿದ ಕುಮಾರಣ್ಣನ ನಡೆಗೆ ಈಗ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕಷ್ಟ ಅಂದವರ ಮನೆ ಬಾಗಿಲಿಗೆ ಬರುವ ನಾಯಕ ಎಂದು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

