ಹಾವೇರಿ: ವಿಕಲಚೇತನ ಮಗ ಕಾಲು ಜಾರಿ ಹೊಂಡಕ್ಕೆ ಬೀಳುತ್ತಿದ್ದಂತೆ ಮಗನನ್ನು ರಕ್ಷಿಸಲು ಹೊಂಡಕ್ಕೆ ಇಳಿದ ತಂದೆ ಸೇರಿ ಇಬ್ಬರೂ ಸಾವನ್ನಪ್ಪಿರುವ ಘಟನೆ ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ.
ಶರತ್ ಹಂಸಬಾವಿ (8) ಹಾಗೂ ತಂದೆ ಶಂಭುಲಿಂಗಪ್ಪ ಹಂಸಬಾವಿ(45) ಮೃತ ದುರ್ದೈವಿಗಳು. ಶಂಭುಲಿಂಗಪ್ಪ ವಿಕಲಚೇತನ ಮಗನನ್ನು ವಾಕಿಂಗ್ ಗೆ ಕರೆದೊಯ್ದಿದ್ದರು. ವಾಕಿಂಗ್ ಮಾಡುತ್ತಿದ್ದ ವೇಳೆ ಮಗ ಶರತ್ ಕಾಲುಜಾರಿ ಹೊಂಡಕ್ಕೆ ಬಿದ್ದಿದ್ದಾನೆ.
ಹೊಂಡದಲ್ಲಿ ಬಿದ್ದ ಮಗನನ್ನು ರಕ್ಷಿಸಲು ತಂದೆಯೂ ನೀರಿಗೆ ಹಾರಿದ್ದಾರೆ. ತಂದೆ-ಮಗ ಇಬ್ಬರೂ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಹಾವೇರಿ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ನೀರಿನಿಂದ ಹೊರ ತೆಗೆಯಲಾಗಿದೆ.

