ಹಾವೇರಿ: ಬೀದಿನಾಯಿಗಳ ಹಾವಳಿ ಬೆನ್ನಲ್ಲೇ ಇದೀಗ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಂಗಗಳ ದಾಳಿ ಆರಂಭವಾಗಿದೆ. ಮಂಗಗಳ ದಾಳಿಯಿಂದ ನಾಲ್ವವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಅಂತರವಳ್ಳಿ ಗ್ರಾಮದಲ್ಲಿ ಮಂಗಳು ಗ್ರಾಮಸ್ಥರ ಮೇಲೆ ದಾಳಿ ನಡೆಸುತ್ತಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಸಂಜೀವ ರೆಡ್ಡಿ, ಕರಿಯಪ್ಪ, ಶೇಖರಪ್ಪ, ಕೃಷ್ಣ ಎಂಬುವವರು ಮಂಗನ ದಾಳಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಂಗಗಳನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಹಲವು ಬಾರಿ ಗ್ರಾಮ ಪಂಚಾಯಿಗೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ದಿವ್ಯ ನಿರ್ಲಕ್ಷ ತೋರುತ್ತಿದ್ದಾರೆ. ಮಂಗನ ದಾಳಿಯಿಂದ ಮನೆಯಿಂದ ಹೊರಬರುವುದೂ ಸಾಧ್ಯವಾಗದ ಸ್ಥಿತಿ ಅಂತರವಳ್ಳಿಯಲ್ಲಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳ ಬೇಜವಾಬ್ದಾರಿಗೆ ಬೇಸತ್ತ ಗ್ರಾಮಸ್ಥರು ಇಂದು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಪಿಡಿಒ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

