ಮಂಗಳೂರು: ಕಾಲೇಜಿನಲ್ಲಿ ವಿದ್ಯಾರ್ಥಿ ಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಎನ್ ಎಸ್ ಯು ಐ ಮತ್ತು ಎಬಿವಿಪಿ ಕಾರ್ಯಕರ್ತರ ನಡುವೆ ರಾಜಕೀಯ ಸಂಘರ್ಷ ಆರಂಭವಾಗಿ, ಪರಸ್ಪರ ಹೊಡೆದಾಡಿಕೊಳ್ಳುವ ಹಂತಕ್ಕೆ ಹೋದ ಘಟನೆ ಮಂಗಳೂರಿನ ಹಂಪನಕಟ್ಟೆ ವಿಶ್ವವಿದ್ಯಾನಿಲಯದಲ್ಲಿ ನಡೆದಿದೆ.
ಕಾಲೇಜಿನ ಕ್ಯಾಂಪಸ್ ಸಂಘರ್ಷದಿಂದಾಗಿ ರಣಾಂಗಣವಾಗಿ ಮಾರ್ಪಟ್ಟಿದೆ. ಮುಂಬರುವ ವಿದ್ಯಾರ್ಥಿ ಚುನಾವಣೆಗೂ ಮುನ್ನವೇ ಇಂತಹ ಘಟನೆ ನಡೆದಿದ್ದು, ಪೋಷಕರಲ್ಲಿ ಆತಂಕ ಸೃಷ್ಟಿಸಿದೆ.
ಈ ಹಿಂದೆ ಕಾಲೇಜು ಚುನಾವಣೆ ಎಂದು ಹೇಳಿಕೊಂಡು ವಿದ್ಯಾರ್ಥಿಗಳ ನಡುವೆ ದೊಡ್ಡ ಜಗಳಗಳು ನಡೆಯುತ್ತಿತ್ತು. ಇದೀಗ ರಾಜ್ಯ ಬಜೆಟ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿ ಸಂಘದ ಚುನಾವಣೆ ಘೋಷಣೆ ಮಾಡಿದ್ದು ಅಷ್ಟರಲ್ಲೇ ಮಂಗಳೂರಿನ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ರಾಜಕೀಯ ಸಂಘರ್ಷವೇ ನಡೆದಿದೆ.
ಬಜೆಟ್ನಲ್ಲಿ ಚುನಾವಣೆ ಮತ್ತು ವಿದ್ಯಾರ್ಥಿ ಇಂದಿರಾ ಕ್ಯಾಂಟೀನ್ ಘೋಷಣೆಯನ್ನು ಸ್ವಾಗತಿಸಿ ಎನ್ ಎಸ್ ಯು ಐ ಕಾರ್ಯಕರ್ತರು ಕಾಲೇಜು ಕ್ಯಾಂಪಸ್ ಒಳಗೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಅಷ್ಟಕ್ಕೇ ನಿಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪರವಾಗಿ ಜಯಘೋಷಗಳನ್ನು ಕೂಗಿದ್ದಾರೆ. ಇದು ಶೈಕ್ಷಣಿಕ ಕೇಂದ್ರದಲ್ಲಿ ರಾಜಕೀಯ ಅಟ್ಟಹಾಸ ಎಂದು ಎಬಿವಿಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಶೈಕ್ಷಣಿಕ ಚಟುವಟಿಕೆಗೆ ಅಡ್ಡಿಪಡಿಸಿ ಕಾಲೇಜನ್ನು ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿ ಎಬಿವಿಪಿ ವಿದ್ಯಾರ್ಥಿಗಳು ಕಾಲೇಜಿನ ಮುಂಭಾಗ ರಸ್ತೆ ತಡೆ ನಡೆಸಿದರು. ರಾಜಕೀಯ ಘೋಷಣೆ ಕೂಗಲು ಅವಕಾಶ ನೀಡಿದ ಪ್ರಾಂಶುಪಾಲ ಗಣಪತಿ ಗೌಡ ಅವರ ವಿರುದ್ಧ ಧಿಕ್ಕಾರ ಕೂಗಿ ಕಿಡಿಕಾರಿದರು. ವಿದ್ಯಾರ್ಥಿಗಳ ನಡುವೆ ನಡೆದ ವಾಗ್ವಾದಕ್ಕೆ ಪ್ರಾಂಶುಪಾಲರು ಕಂಗಾಲಾದ ಘಟನೆ ನಡೆಯಿತು.
ಸಿಹಿ ಹಂಚಲು ಮಾತ್ರ ಅನುಮತಿ ನೀಡಿದ್ದೆವು, ಘೋಷಣೆ ಕೂಗಿದ್ದು ಗಮನಕ್ಕೆ ಬಂದಿಲ್ಲ ಎಂದು ಪ್ರಾಂಶುಪಾಲರು ಸಮಜಾಯಿಷಿ ನೀಡಿದ್ದು ವಿದ್ಯಾರ್ಥಿಗಳ ಕೆಂಗಣ್ಣಿಗೆ ಕಾರಣವಾಯಿತು ಘಟನೆ ಸಂಬಂಧ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ವರದಿ ನೀಡುವುದಾಗಿ ಪ್ರಾಂಶುಪಾಲರು ಭರವಸೆ ನೀಡಿದ್ದಾರೆ. ವಿದ್ಯಾರ್ಥಿ ಚುನಾವಣೆ ಆರಂಭವಾಗುವ ಮೊದಲೇ ಕಾಲೇಜು ಕ್ಯಾಂಪಸ್ನಲ್ಲಿ ಕಿತ್ತಾಟ ಶುರುವಾಗಿರುವುದು ಭಾರಿ ಚರ್ಚೆಗೆ ಕಾರಣವಾಗಿದೆ.

