ಸರ್ಕಾರದ ಸೂಚನೆಯಂತೆ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ (ಕೆಎಸ್ಐಸಿ) ಮೈಸೂರು ರೇಷ್ಮೆ ಸೀರೆಗಳ ಆನ್ಲೈನ್ ಖರೀದಿಯನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಿದೆ. ಸೀರೆಗಳಿಗೆ ಭಾರೀ ಬೇಡಿಕೆ ಇದ್ದು, ಸದ್ಯದ ಮಟ್ಟಿಗೆ ಸೀರೆ ಖರೀದಿ ಮಾಡಬೇಕಾದರೆ ಅಂಗಡಿಗಳಿಗೆ ಭೇಟಿ ನೀಡಬೇಕಿದೆ.
ಕೆಎಸ್ಐಸಿ ಅಂಗಡಿಗಳಿಗೆ ಭೇಟಿ ನೀಡುವ ಗ್ರಾಹಕರಿಗೆ ಸೀರೆಗಳು ಲಭ್ಯವಾಗುವಂತೆ ಮಾಡಲು ಆನ್ಲೈನ್ ಖರೀದಿಗೆ ತಾತ್ಕಾಲಿಕ ತಡೆ ಹಾಕಿದೆ. ಆನ್ಲೈನ್ನಲ್ಲಿ ಭಾರೀ ಬೇಡಿಕೆ ಬರುತ್ತಿದ್ದು, ಇದರಿಂದಾಗಿ ಅಂಗಡಿಗಳಿಗೆ ಪೂರೈಕೆ ಮಾಡುವ ಸೀರೆಗಳಿಗೆ ಕೊರತೆ ಉಂಟಾಗಿದೆ.
ಅಂಗಡಿಯಲ್ಲಿ ಸುಲಭವಾಗಿ ಸೀರೆಗಳು ಸಿಗುವಂತೆ ಮಾಡಲು ಆನ್ಲೈನ್ ಖರೀದಿ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ಈ ಕುರಿತು ರೇಷ್ಮೆ ಸಚಿವ ಕೆ.ವೆಂಕಟೇಶ್ ವಿಧಾನಸಭೆಯಲ್ಲಿಯೇ ಘೋಷಣೆ ಮಾಡಿದ್ದಾರೆ.
ಸೀರೆಗಳ ಉತ್ಪಾದನೆ ಹೆಚ್ಚಳವಾಗಿ, ಸಂಗ್ರಹ ಜಾಸ್ತಿಯಾದ ಬಳಿಕ ಮೈಸೂರು ಸಿಲ್ಕ್ ಸೀರೆಗಳ ಆನ್ಲೈನ್ ವಹಿವಾಟು ಮತ್ತೆ ಪ್ರಾರಂಭಿಸಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದ್ದಾರೆ.
ಕರ್ನಾಟಕದ ಹೊರ ರಾಜ್ಯದ ಜನರಿಗೆ ಅನುಕೂಲ ಮಾಡಿಕೊಡಲು ಕೆಎಸ್ಐಸಿ ಆನ್ಲೈನ್ ಮೂಲಕ ಸೀರೆಗಳ ಮಾರಾಟ ಪ್ರಾರಂಭಿಸಿತ್ತು. ಆದರೆ ಈಗ ಆನ್ಲೈನ್ ಬೇಡಿಕೆ ಹೆಚ್ಚಿದ್ದು, ಕರ್ನಾಟಕದಲ್ಲಿ ಅಂಗಡಿಗಳಿಗೆ ಪೂರೈಕೆಗೆ ತೊಂದರೆ ಉಂಟಾಗುವ ನಿರೀಕ್ಷೆ ಇದೆ.
ಮಾಹಿತಿಗಳ ಪ್ರಕಾರ ಪ್ರತಿದಿನ 300 ರಿಂದ 400 ಸೀರೆಗಳು ಮಾರಾಟವಾಗುತ್ತಿವೆ. ಕಳೆದ ವರ್ಷ ಮಾರಾಟವಾದ ಮೈಸೂರು ರೇಷ್ಮೆ ಸೀರೆಗಳ ಸಂಖ್ಯೆ 3.1 ಲಕ್ಷ ಎಂದು ಅಧಿಕಾರಿಗಳು ಹೇಳಿದ್ದಾರೆ.
- 2022-23 – 98,277
- 2023-24 – 1,08,035
- 2024-25 – 1,03,347 ಸೀರೆಗಳು ಮಾರಾಟವಾಗಿವೆ.
ವರ್ಷದಿಂದ ವರ್ಷಕ್ಕೆ ಮೈಸೂರು ರೇಷ್ಮೆ ಸೀರೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ವಿಶೇಷ ರಿಯಾಯಿತಿ, ಆನ್ಲೈನ್ ಸೇಲ್ ಆರಂಭಿಸಿದ ಬಳಿಕ ಬೇಡಿಕೆ ಇನ್ನೂ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶೇ 25, ಶೇ 50ರಷ್ಟು ರಿಯಾಯಿತಿ ನೀಡಿ, ವಿಶೇಷ ಮಾರಾಟ ಮೇಳ ಘೋಷಣೆ ಮಾಡಿದಾಗ ಮುಂಜಾನೆ 3 ಗಂಟೆಗೆ ಜನರು ಸೀರೆ ಖರೀದಿ ಮಾಡಲು ಆಗಮಿಸುತ್ತಿದ್ದಾರೆ ಎಂದು ಸಚಿವರು ವಿಧಾನಸಭೆಯಲ್ಲಿ ಉತ್ತರ ನೀಡಿದ್ದಾರೆ.
ಶಿಢ್ಲಘಟ್ಟ, ರಾಮನಗರ, ಕೊಳ್ಳೇಗಾಲದ ಮಾರುಕಟ್ಟೆಯಿಂದ ರೇಷ್ಮೆಯನ್ನು ಖರೀದಿ ಮಾಡಿ ಸೀರೆಗಳನ್ನು ತಯಾರು ಮಾಡಲಾಗುತ್ತಿದೆ. ಉತ್ತಮ ಗುಣಮಟ್ಟದ ರೇಷ್ಮೆ ಖರೀದಿಗಾಗಿ ತಮಿಳುನಾಡು, ಮಹಾರಾಷ್ಟ್ರದಿಂದ ಭಾರೀ ಸ್ಪರ್ಧೆ ಇದೆ.
ಮೈಸೂರು ರೇಷ್ಮೆ ಸೀರೆಗಳಿಗೆ ಇರುವ ಬೇಡಿಕೆ ಗಮನಿಸಿ ಮಾಸಿಕ 7,500 ಮೀಟರ್ ಸೀರೆ ತಯಾರು ಮಾಡುವ 30 ಘಟಕಗಳನ್ನು ತೆರೆಯಲಾಗಿದೆ. ಆದರೆ ಸೀರೆಗಳಿಗೆ ಬೇಡಿಕೆ ಹೆಚ್ಚುತ್ತಲೇ ಇದೆ.
ಸೀರೆಗಳ ಮಾರಾಟದಿಂದ ಕೆಎಸ್ಐಸಿ 2024-25ರಲ್ಲಿ 101 ಕೋಟಿ ರೂ., 2023-24ರಲ್ಲಿ 73 ಕೋಟಿ ಮತ್ತು 2022-23ರಲ್ಲಿ 46 ಕೋಟಿ ರೂ. ಆದಾಯವನ್ನುಗಳಿಸಿದೆ.

