HomeKarnatakaBIG NEWS: ನಂಬಿದವರಿಗೆ ನಾಮ ಹಾಕುವ ಕುಮಾರಣ್ಣ; ಬಣ್ಣದೋಕುಳಿಯಾಟಕ್ಕೆ ಲಾಗಾ ಹೊಡೆದ ಗೋಸುಂಬೆ; ನಿಮ್ಮ ಜಾತ್ಯತೀತತೆ...

BIG NEWS: ನಂಬಿದವರಿಗೆ ನಾಮ ಹಾಕುವ ಕುಮಾರಣ್ಣ; ಬಣ್ಣದೋಕುಳಿಯಾಟಕ್ಕೆ ಲಾಗಾ ಹೊಡೆದ ಗೋಸುಂಬೆ; ನಿಮ್ಮ ಜಾತ್ಯತೀತತೆ ನಾಟ್ಯಕ್ಕೆ ತೆನೆ ಹೊತ್ತ ಮಹಿಳೆ’ಕೋಮು-ಕುಂಡ’ದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ; HDK ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನದಿಂದ ಸಿ.ಎಂ.ಇಬ್ರಾಹಿಂ ಅವರನ್ನು ಉಚ್ಛಾಟನೆ ಮಾಡಿದ ಬೆನ್ನಲ್ಲೇ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಕ್ಪ್ರಹಾರ ನಡೆಸಿದೆ.

ಹೆಚ್.ಡಿ.ಕೆ ವಿರುದ್ಧ ಕಿಡಿ ಕಾರಿರುವ ಕಾಂಗ್ರೆಸ್, ನಿಮ್ಮ ಬಾಯಲ್ಲಿರುವುದು ನಾಲಿಗೆಯೋ ಅಥವಾ ಕೊಳಕುಮಂಡಲ ಹಾವೋ?! ಕೈ ಹಿಡಿದವರ ತಲೆ ಕಡಿಯುವ, ಹೆಗಲು ಕೊಟ್ಟವರ ಬೆನ್ನಿಗೆ ಚೂರಿ ಹಾಕುವ, ನಂಬಿದವರಿಗೆ ನಾಮ ಬಳಿಯುವ ಕುಮಾರಸ್ವಾಮಿ ರಾಮಾಯಣದ ಮಂಥರೆ, ಮಹಾಭಾರತದ ಶಕುನಿಯೇ ಸರಿ ಎಂದು ವಾಗ್ದಾಳಿ ನಡೆಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕ್ಷಣಕ್ಕೊಂದು ಬಣ್ಣ, ದಿನಕ್ಕೊಂದು ವೇಷ ತೊಡುವ ನಿಮ್ಮ ಬಣ್ಣದೋಕುಳಿಯಾಟಕ್ಕೆ ಗೋಸುಂಬೆಯೇ ಲಾಗ ಹೊಡೆದಿದೆ! ಹಿಂದಿನ ನಿಮ್ಮ ಎಲ್ಲ ಅಕ್ರಮ, ಅನಾಚಾರ, ಅವ್ಯವಹಾರಗಳು ಹೊರಬರುತ್ತವೆ ಎಂದು ಹೆದರಿ ಬಿಜೆಪಿ ಸೆರಗಿನೊಳಗೆ ಸೇರಿಕೊಂಡಿರುವ ನಿಮ್ಮ ಜಾತ್ಯತೀತತೆ ನಾಟ್ಯಕ್ಕೆ ಬೆರಗಾಗಿ ತೆನೆ ಹೊತ್ತ ಮಹಿಳೆಯೇ “ಕೋಮು-ಕುಂಡ”ದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೊದಲ ಬಾರಿ ನಿಮ್ಮನ್ನು ಸಿಎಂ ಮಾಡಿದ ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರಿಸದೆ ವಚನ ಭ್ರಷ್ಟರಾದಿರಿ, ದ್ರೋಹ ಮಾಡಿದಿರಿ. ಕಾಂಗ್ರೆಸ್ ನಿಮ್ಮನ್ನು ಸಿಎಂ ಮಾಡಿದಾಗ ಯಡಿಯೂರಪ್ಪ ಅಸೆಂಬ್ಲಿಯಲ್ಲಿ ಹೇಳಿದ್ದರು. “ಶಿವಕುಮಾರ್, ಈ ಅಪ್ಪ ಮಕ್ಕಳನ್ನು ನಂಬಬೇಡಿ, ಬಳಸಿ ಬಿಸಾಡುತ್ತಾರೆ. ಹಾವು ಇವರ ಲಾಂಚನ” ಎಂದು. ಆದರೆ ಸಿದ್ದಾಂತಕ್ಕಾಗಿ ಕಾಂಗ್ರೆಸ್ ನಿಮ್ಮ ಜತೆ ನಿಂತಿತ್ತು. ಕಾಂಗ್ರೆಸ್ ದಯಾಭಿಕ್ಷೆಯಿಂದ ಎರಡನೇ ಬಾರಿಗೆ ಸಿಎಂ ಆದ ನಿಮಗೆ ಕಿಂಚಿತ್ತಾದರೂ ನಿಯತ್ತು ಬೇಡವೇ? ಓಹ್.. ಕ್ಷಮಿಸಿ, ಆತ್ಮಸಾಕ್ಷಿ ಮಾರಿಕೊಂಡೇ ರಾಜಕೀಯ ಬಯಲಾಟ ಆಡುವ ನಿಮ್ಮಂತವರಿಂದ ನೀತಿ, ನಿಯತ್ತು, ನೈತಿಕತೆ ನಿರೀಕ್ಷೆ ಮಾಡುವುದೇ ಮಹಾಪಾಪ!

ಹಿಂದೆ ನೀವು ಮಕ್ಮಲ್ ಟೋಪಿ ಹಾಕಿದ್ದೇನು? ಬಿರಿಯಾನಿ ತಿಂದಿದ್ದೇನು? ಮಸೀದಿ ಹೊಕ್ಕಿದ್ದೇನು? ಆಹಾ..! ಅದೇನು ನಾಟಕ, ಅದೇನು ಪಂಚರಂಗಿ ಆಟ?
ಈಗ, ಅಲ್ಪಸಂಖ್ಯಾತರನ್ನು ನಂಬಿಕೊಂಡು ರಾಜಕಾರಣ ಮಾಡಿಲ್ಲ ಎನ್ನುವ ನಿಮ್ಮ ಬಾಯಲ್ಲಿರುವುದು ನಾಲಿಗೆಯೋ ಅಥವಾ ಕೊಳಕುಮಂಡಲ ಹಾವೋ?! ಇನ್ನೊಂದೆಡೆ ಅಲ್ಪಸಂಖ್ಯಾತರ ಅಗತ್ಯವಿಲ್ಲ, ಅವರನ್ನು ನಂಬಿಕೊಂಡು ರಾಜಕಾರಣ ಮಾಡಿಲ್ಲ ಅನ್ನುತ್ತೀರಿ. ಹಾಗಾದರೆ ನಿಮಗೆ ನೀವೇ ಮತ ಹಾಕಿಕೊಂಡು ಗೆದ್ದಿರಾ ಕುಮಾರಣ್ಣ..?!

ಐಟಿ, ಇಡಿ ಕಿಂದರ ಜೋಗಿ ಅಮಿತ್ ಶಾ ಕಾಲಿಗೆ ಬಿದ್ದು ರಾಜಕೀಯ ವಿರೋಧಿಗಳಿಗೆ ಗುಂಡಿ ತೋಡುವುದರಲ್ಲಿ ಮಗ್ನರಾಗಿರುವ ಕುಮಾರಣ್ಣ ಒಂದು ವಿಷಯ ತಿಳಿದುಕೊಳ್ಳಿ. ನೀವೇ ನಿಮ್ಮ ಪಾಲಿನ ಭಸ್ಮಾಸುರ! ಸ್ವಲ್ಪ ಕಾಲ ತಡೆದು ನೋಡಿ, ನಿಮ್ಮ ಗುಂಡಿಯಲ್ಲಿ ಬಿದ್ದು ನೀವೇ ಹೆಂಗೆ ಒದ್ದಾಡುತ್ತೀರಿ ಅಂತಾ! ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದೆ.

For Latest News Updates, Join Our Whatsapp Community🚩
RELATED ARTICLES

Most Popular