ಬೆಂಗಳೂರು : ಯುವಜನತೆಗೆ ಉದ್ಯೋಗ ಆಧಾರಿತ ತಾಂತ್ರಿಕ ಶಿಕ್ಷಣ ನೀಡುವ ಉದ್ದೇಶದಿಂದ ರಾಜ್ಯ ಸರ್ಕಾರವು ಕಲಬುರಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಬೃಹತ್ ಕೌಶಲ್ಯ ಕೇಂದ್ರವನ್ನು ಸ್ಥಾಪಿಸುತ್ತಿದೆ.
ಕಲಬುರಗಿ ವಿವಿ ಆವರಣದಲ್ಲಿ ₹120 ಕೋಟಿ ವೆಚ್ಚದಲ್ಲಿ ಕೇಂದ್ರದ ಸ್ಥಾಪನೆ ಮಾಡಲಾಗುತ್ತಿದ್ದು, ಕಲ್ಯಾಣ ಕರ್ನಾಟಕ ಭಾಗದ ಪ್ರತಿಭೆಗಳಿಗೆ ಜಾಗತಿಕ ಮಟ್ಟದ ಉದ್ಯಮ ವಲಯಕ್ಕೆ ಪೂರಕವಾದ ತಾಂತ್ರಿಕ ಕೌಶಲ್ಯ ಒದಗಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ.
ಈ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ’ ಉದ್ಯೋಗ ಭರವಸೆಯ ಕೋರ್ಸ್‌ಗಳನ್ನು ಒದಗಿಸುವಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಗಳು (ಜಿಟಿಟಿಸಿ) ಮಹತ್ವದ ಪಾತ್ರ ವಹಿಸುತ್ತಿದ್ದು, ಗುಣಮಟ್ಟದ ಉದ್ಯಮ ಆಧಾರಿತ ತಾಂತ್ರಿಕ ತರಬೇತಿ ನೀಡುತ್ತಿದೆ. ಉದ್ಯೋಗ ಆಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ಕಲಬುರಗಿ ವಿಶ್ವವಿದ್ಯಾಲಯದ ಆವರಣದಲ್ಲಿ ₹120 ಕೋಟಿ ವೆಚ್ಚದಲ್ಲಿ ಜಿಟಿಟಿಸಿ- ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ.
ಕಲ್ಯಾಣ ಕರ್ನಾಟಕ ಭಾಗದ ಸ್ಥಳೀಯ ಹಾಗೂ ಆಸಕ್ತ ಪ್ರತಿಭೆಗಳಿಗೆ ಜಾಗತಿಕ ಮಟ್ಟದ ಸ್ಪರ್ಧಾತ್ಮಕ ಉದ್ಯಮ ವಲಯದಲ್ಲಿ ಉದ್ಯೋಗ ಪಡೆಯುವಂತಹ ಕೌಶಲ್ಯ ಒದಗಿಸುವುದು ನಮ್ಮ ಗುರಿಯಾಗಿದೆ. ಈ ನಿಟ್ಟಿನಲ್ಲಿ ಜಿಟಿಸಿಸಿಗಳು ಯುವಜನತೆಯ ಆಸಕ್ತಿಗೆ ಪೂರಕವಾದ ತರಬೇತಿ ನೀಡಿ, ಅವರನ್ನು ಉದ್ಯಮ ಬಯಸುವ ಪ್ರತಿಭೆಗಳನ್ನಾಗಿ ರೂಪಿಸುವ ಮಹತ್ಕಾರ್ಯ ನಡೆಸುತ್ತಿವೆ.
ನಿರುದ್ಯೋಗ ಪರಿಹರಿಸಲು ಯುವಜನತೆಗೆ ಅಗತ್ಯವಿರುವುದು ಸೂಕ್ತ ತರಬೇತಿ ಮತ್ತು ಅವಕಾಶ ಎನ್ನುವುದನ್ನು ಗ್ಯಾರಂಟಿ ಸರ್ಕಾರ ಅರಿತಿದೆ ‘ ಎಂದು ಹೇಳಿದ್ದಾರೆ.

