ಬೆಂಗಳೂರು: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯಗಳ(ಅರಿವು ಕೇಂದ್ರ) ಮೇಲ್ವಿಚಾರಕರಿಗೆ ಮಾಸಿಕ 19,200 ರೂಪಾಯಿ ಕನಿಷ್ಠ ಗೌರವಧನ ನಿಗದಿ ಮಾಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ರಾಜ್ಯದಲ್ಲಿ 5420 ಗ್ರಂಥಾಲಯ ಮೇಲ್ವಿಚಾರಕರಿದ್ದು, ಅವರಿಗೆ 12,000 ರೂ. ಗೌರವಧನ ನೀಡಲಾಗುತ್ತಿತ್ತು. ಕಾರ್ಮಿಕ ಇಲಾಖೆ ಕನಿಷ್ಠ ವೇತನ ಅಧಿಸೂಚನೆ ಹೊರಡಿಸಿದ ನಂತರ ಗ್ರಾಮೀಣಾಭಿವೃದ್ಧಿ ಇಲಾಖೆ ಕೂಡ ವೇತನ ಪರಿಷ್ಕರಣೆ ಮಾಡಿದೆ. ಸರ್ಕಾರ ನೇರವಾಗಿ 12,000 ರೂ. ನೀಡಲಿದೆ. ಉಳಿದ 200 ರೂ. ರಾಜ್ಯ ಮಟ್ಟದಲ್ಲಿ ಸಂಗ್ರಹಿಸುವ ಗ್ರಂಥಾಲಯ ಸೆಸ್ ನಿಂದ ಪಾವತಿಸಲು ಅನುಮೋದನೆ ನೀಡಲಾಗಿದೆ ಎಂದು ಹೇಳಿದ್ದಾರೆ.
ಅರಿವು ಕೇಂದ್ರಗಳಿಗೆ ಕಿಯೋನಿಕ್ಸ್ ನಿಂದ ಎಐ ಆಧಾರಿತ ಕಂಪ್ಯೂಟರ್ ಗಳನ್ನು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು, ಗ್ರಾಮೀಣ ಯುವಕರ ಕಲಿಕೆಗೆ ಅನುಕೂಲವಾಗುತ್ತದೆ. ಡಿಜಿಟಲ್ ಗ್ರಂಥಾಲಯಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಗ್ರಂಥಾಲಯ ಇಲ್ಲದ ಎಲ್ಲಾ ಗ್ರಾಮಗಳಲ್ಲಿಯೂ ಶಾಖೆಗಳನ್ನು ತೆರೆಯಲಾಗುತ್ತಿದೆ. ಅರಿವು ಕೇಂದ್ರಗಳಲ್ಲಿ ವಿವಿಧ ವಿದೇಶಿ ಭಾಷೆ ಮಾತನಾಡುವ ತರಬೇತಿ ಶಿಬಿರ ಆಯೋಜಿಸುವ ಮೂಲಕ ಉದ್ಯೋಗ ಅರ್ಹತೆ ಹೆಚ್ಚಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

