ಗ್ರಾಮ ಪಂಚಾಯತಿಗಳಲ್ಲಿ ಸಾರ್ವಜನಿಕರ ಕುಂದುಕೊರತೆಗಳಿಗೆ ಸರಿಯಾಗಿ ಸ್ಪಂದಿಸದ ಮತ್ತು ಕಚೇರಿಯಲ್ಲಿ ಲಭ್ಯವಿರದ ಅಧಿಕಾರಿಗಳಿಗೆ ಸರ್ಕಾರ ಬಿಸಿ ಮುಟ್ಟಿಸಿದೆ. ಸಾರ್ವಜನಿಕರ ಭೇಟಿಗಾಗಿ ನಿಗದಿತ ಸಮಯವನ್ನು ಮೀಸಲಿಡುವುದು ಮತ್ತು ಅಧಿಕಾರಿಗಳ ಓಡಾಟದ ಮೇಲೆ ನಿಗಾ ಇಡಲು ಜಿಪಿಎಸ್ (GPS) ಟ್ರ್ಯಾಕಿಂಗ್ ವ್ಯವಸ್ಥೆ ಜಾರಿಗೆ ತರಲು ಶಿಫಾರಸು ಮಾಡಲಾಗಿದೆ.
ಪಿಡಿಒಗಳು ಪ್ರತಿದಿನ ಕಡ್ಡಾಯವಾಗಿ ಕಚೇರಿಯಲ್ಲಿ ಲಭ್ಯವಿದ್ದು ಸಾರ್ವಜನಿಕರ ಮನವಿಗಳನ್ನು ಸ್ವೀಕರಿಸಬೇಕು.ವಾರದ ಆರು ದಿನಗಳ ಪ್ರವಾಸದ ವಿವರ, ಸಭೆಗಳು ಮತ್ತು ತರಬೇತಿಗಳ ಮಾಹಿತಿಯನ್ನು ಕಚೇರಿಯ ನೋಟಿಸ್ ಬೋರ್ಡ್‌ನಲ್ಲಿ ಕಡ್ಡಾಯವಾಗಿ ಪ್ರದರ್ಶಿಸಬೇಕು.ಪಿಡಿಒ, ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕರು ‘ಪಂಚತಂತ್ರ 2.0’ ತಂತ್ರಾಂಶದ ಮೂಲಕ ಪ್ರತಿದಿನ ಬಯೋಮೆಟ್ರಿಕ್ ಹಾಜರಾತಿ ದಾಖಲಿಸುವುದು ಕಡ್ಡಾಯ ಎಂದು ಸೂಚಿಸಲಾಗಿದೆ.
ಗ್ರಾಮ ಪಂಚಾಯತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಡಿಒ ಮತ್ತು ಕಾರ್ಯದರ್ಶಿಗಳು ಸಾರ್ವಜನಿಕರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಹಾಗೂ ಕೆಲಸದ ಮೇಲೆ ಹೋಗಿದ್ದೇವೆ ಎಂದು ಹೇಳಿ ಕಚೇರಿಯಲ್ಲಿ ಲಭ್ಯವಿರುವುದಿಲ್ಲ ಎಂಬ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಇರುವಂತೆ ಅಧಿಕಾರಿಗಳಿಗೂ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಅಳವಡಿಸಬೇಕೆಂದು ಸಮಿತಿ ಶಿಫಾರಸು ಮಾಡಿದೆ.
ಮಹತ್ವದ ಸೂಚನೆಗಳು
- ಗ್ರಾಮ ಪಂಚಾಯತಿಗಳು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕರಣ 58 ರಂತೆ ಕರ್ತವ್ಯ ನಿರ್ವಹಿಸಬೇಕು.
- ಪ್ರತಿ ವಾರ ಸೋಮವಾರದಿಂದ ಶನಿವಾರದವರೆಗೆ ತಮ್ಮ ಪ್ರವಾಸದ ಕಾರ್ಯಕ್ರಮದ ವಿವರವನ್ನು (ಕ್ಷೇತ್ರ ಭೇಟಿ, ಸಭೆ, ತರಬೇತಿ ಇತ್ಯಾದಿ) ಕಡ್ಡಾಯವಾಗಿ ನೋಟಿಸ್ ಬೋರ್ಡ್‌ನಲ್ಲಿ ಪ್ರಕಟಿಸಬೇಕು.
- ಸಾರ್ವಜನಿಕರ ಭೇಟಿಗಾಗಿ ನಿಗದಿಪಡಿಸಿದ ಸಮಯದಲ್ಲಿ ಕಚೇರಿಯಲ್ಲಿ ಹಾಜರಿದ್ದು ಕುಂದುಕೊರತೆಗಳಿಗೆ ಸ್ಪಂದಿಸಬೇಕು.
- ಪಂಚತಂತ್ರ 2.0 ತಂತ್ರಾಂಶದಲ್ಲಿ ಪಿಡಿಒ, ಕಾರ್ಯದರ್ಶಿಗಳು ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಕಡ್ಡಾಯವಾಗಿ ಬಯೋಮೆಟ್ರಿಕ್ ಹಾಜರಾತಿ ದಾಖಲಿಸಬೇಕು.
- ಪಿಡಿಒ ಹುದ್ದೆಯು ಕಾರ್ಯಕಾರಿ ಹುದ್ದೆಯಾಗಿದ್ದು, ಬಯೋಮೆಟ್ರಿಕ್ ಹಾಜರಾತಿಗೆ ಮಿಚು (Flexi) ಸಮಯದ ಸೌಲಭ್ಯವಿದ್ದರೂ, ದೈನಂದಿನ ಹಾಜರಾತಿ ಕಡ್ಡಾಯ.
- ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕರು ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಕಚೇರಿಯಲ್ಲಿ ಲಭ್ಯವಿರಬೇಕು.
- ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರತಿ ಮಾಹೆ ಈ ಬಯೋಮೆಟ್ರಿಕ್ ಹಾಜರಾತಿಯನ್ನು ಪರಿಶೀಲಿಸಿ ವೇತನ ಪಾವತಿಸಲು ಕ್ರಮವಹಿಸಬೇಕು.




