ಬೆಂಗಳೂರು: ರಾಜ್ಯ ಸರ್ಕಾರ ಇಂದಿನಿಂದ ಜನವರಿ 31ರವರೆಗೆ ವಿಧಾನಮಂಡಲ ವಿಶೇಷ ಅಧಿವೇಶನ ಕರೆದುದ್ದು, ನರೇಗಾ ಯೋಜನೆ ಹೆಸರು ಬದಲಾವಣೆ ಆಕ್ಷೇಪಿಸಿ ಕರೆದಿರುವ ಅಧಿವೇಶನ ಇದಾಗಿದೆ. ಆದರೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧಿವೇಶನದಲ್ಲಿ ಭಾಷಣ ಮಾಡಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ಸಂಘರ್ಷ ಮುಂದುವರೆದಿದ್ದು, ಇಂದು ವಿಶೇಷ ಅಧಿವೇಶ ಆರಂಭವಾಗಲಿದೆಯೇ? ರಾಜ್ಯಪಾಲರು ಅಧಿವೇಶನಕ್ಕೆ ಆಗಮಿಸಿ ಭಾಷಣ ಮಾಡುತ್ತಾರೆಯೇ? ಎಂಬ ಪ್ರಶ್ನೆ ಮೂಡಿದೆ.
ಅಧಿವೇಶನದಲ್ಲಿ ರಾಜ್ಯ ಸರ್ಕಾರ ಬರೆದುಕೊಟ್ಟಿರುವ ಭಾಷಣವನ್ನು ಓದುವುದು ರಾಜ್ಯಪಾಲರ ಕರ್ತವ್ಯ. ಆದರೆ ನರೇಗಾ ಹೆಸರು ಬದಲಾವಣೆಗೆ ಆಕ್ಷೇಪ ವ್ಯಕ್ತಪಡಿಸಿ ಕರ್ನಾಟಕ ಸರ್ಕಾರ ಕರೆದಿರುವ ವಿಸೇಷ ಅಧಿವೇಶನ ಇದಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಕೆಲ ಆಕ್ರೋಶ ಪದಗಳು ಭಾಷಣದಲ್ಲಿ ಇದೆ ಎನ್ನಲಾಗಿದೆ. ಈ ಹಿನ್ನೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸರ್ಕಾರ ಸಿದ್ಧಪಡಿಸಿರುವ ಭಾಷಣದಲ್ಲಿ ಇರುವ ಕೇಂದ್ರ ಸರ್ಕಾರದ ವಿರುದ್ಧದ 11 ಪ್ಯಾರಾಗಳನ್ನು ತೆಗೆಯುವಂತೆ ಸೂಚಿಸಿದ್ದಾರೆ. ಆದರೆ ರಾಜ್ಯ ಸರ್ಕಾರ 11 ಪ್ಯಾರಾ ತೆಗೆಯಲು ಒಪ್ಪುತ್ತಿಲ್ಲ. ಇದೇ ಭಾಷಣವನ್ನು ರಾಜ್ಯಪಾಲರು ಅಧಿವೇಶನದಲ್ಲಿ ಓದಬೇಕು ಎಂದು ಪಟ್ಟು ಹಿಡಿದಿದೆ. ಕೇವಲ ಎರಡು ಶಬ್ಧಗಳನ್ನು ಮಾತ್ರ ತೆಗೆದಿದೆ. ಈ ಹಿನ್ನೆಲೆಯಲ್ಲಿ ಅಧಿವೇಶನದ ಆರಂಭದ ದಿನವಾಗಿರುವ ಇಂದು ರಾಜ್ಯಪಾಲರು ಅಧಿವೇಶನಕ್ಕೆ ಆಗಮಿಸಿ ಭಾಷಣ ಮಾಡುತ್ತಾರೆಯೇ? ಎಂಬ ಕುತೂಹಲ ಇಮ್ಮಡಿಗೊಂಡಿದೆ.
ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ಸಂಘರ್ಷದಿಂದಾಗಿ ವಿಶೇಷ ಅಧಿವೇಶನ ನಡೆಯಲಿದೆಯೇ? ಎಂಬ ಗೊಂದಲದ ನಡುವೆಯೇ ವಿಧಾನಸೌಧದಲ್ಲಿ ಜಂಟಿ ಅಧಿವೇಶನಕ್ಕೆ ಪೊಲೀಸರು, ಸಿಬ್ಬಂದಿಗಳು ಸಕಲ ಸಿದ್ಧತೆ ನಡೆಸಿದ್ದಾರೆ. ರಾಜ್ಯಪಾಲರು ಸದನದಲ್ಲಿ ಭಾಗಿಯಾಗುತ್ತಾರೆ ಎಂಬ ರೀತಿಯಲ್ಲಿಯೇ ಸಿದ್ಧತೆಗಳು ನಡೆದಿವೆ. ರಾಜ್ಯಪಾಲರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾಗತಿಸುತ್ತಾರೆ ಎಂದು ತಯಾರಿ ನಡೆಸಲಾಗುತ್ತಿದೆ. ರಾಜ್ಯಪಾಲರು ಅಧಿವೇಶನದಲ್ಲಿ ಭಾಗಿಯಾಗಲಿದ್ದಾರೆಯೇ? ಅಥವಾ ಇಲ್ಲವೇ? ಎಂಬ ಬಗ್ಗೆ ಲೋಕಭವನ ಯಾವುದೇ ಅಧಿಕೃತ ಮಾಹಿತಿಯನ್ನು ಈವರೆಗೆ ನೀಡಿಲ್ಲ. ಈ ನಿಟ್ಟಿನಲ್ಲಿ ಅಧಿವೇಶನಕ್ಕೆ ಸಿದ್ಧತೆ ನಡೆದಿದೆ.
ಇನ್ನು ವಿಧಾನಸೌಧದ ಸುತ್ತಮುತ್ತ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ವಿಶೇಷ ಅಧಿವೇಶನ ನಿಟ್ಟಿನಲ್ಲಿ ವಿಧಾನಸೌಧ ಹಾಗೂ ಸುತ್ತಮುತ್ತಲು ಭದ್ರತೆಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.
ಒಂದೊಮ್ಮೆ ರಾಜ್ಯಪಾಲರು ಇಂದು ಅಧಿವೇಶನಕ್ಕೆ ಬಾರದೇ ಇದ್ದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಕಾನೂನು ಹೋರಾಟಕ್ಕೆ ಮುಂದಾಅಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಳ್ಳುವ ಸಾಧ್ಯತೆಯೂ ಇದೆ. ಮತ್ತೊಂದೆಡೆ ರಾಜ್ಯಪಾಲರು ಭಾಷಣದಲ್ಲಿ ಕೆಲ ಅಂಶಗಳನ್ನು ಬಿಟ್ಟು ಓದಿದರೆ ಸರ್ಕಾರದ ಮುಂದಿನ ನಡೆ ಏನಿರಬೇಕು ಎಂಬ ಬಗ್ಗೆಯೂ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಲಾಗುತ್ತಿದೆ.

