‘ಧುರಂಧರ್’ 2025ರ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಿ ದೇಶಾದ್ಯಂತ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಸಿನಿಮಾ. ಈ ಚಿತ್ರ ಒಟಿಟಿಗೆ ಬರಲು ಸಿದ್ಧವಾಗಿದೆ. ಮನೆಯಲ್ಲಿ ಕೂತು ಭಾರೀ ಸದ್ದು, ಸುದ್ದಿ ಮಾಡಿದ್ದ ಚಿತ್ರವನ್ನು ಜನರು ಆನಂದಿಸಬಹುದು.
ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಚಿತ್ರ ಡಿಸೆಂಬರ್ 5,2025ರಲ್ಲಿ ತೆರೆ ಕಂಡಿತ್ತು. ಬಿಡುಗಡೆಯಾಗಿ ಕೇವಲ 40 ದಿನಗಳಲ್ಲಿ ರೂ. 1,300 ಕೋಟಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ ಹೊಸ ರೆಕಾರ್ಡ್ ಮಾಡಿದೆ.
ಭಾರತೀಯ ಗುಪ್ತಚರ ಸಂಸ್ಥೆಗಳ ಕಾರ್ಯಾಚರಣೆ ಆಧಾರಿತ ‘ಧುರಂಧರ್’ ಚಿತ್ರ ಯಶಸ್ವಿಯಾದ ಹಿನ್ನಲೆಯಲ್ಲಿ ಈ ಚಿತ್ರದ ಸೀಕ್ವೆಲ್ ‘ಧುರಂಧರ್: ದಿ ರಿವೆಂಜ್’ ಚಿತ್ರವನ್ನು ಘೋಷಣೆ ಮಾಡಲಾಗಿದೆ.
ಒಟಿಟಿಗೆ ‘ಧುರಂಧರ್‘: ‘ಧುರಂಧರ್’ ಸಿನಿಮಾ ಒಟಿಟಿಗೆ ಬರುವ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಜನವರಿ 30ರಂದು ನೆಟ್ ಫಿಕ್ಸ್‌ನಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಈ ಕುರಿತು ಈಗಾಗಲೇ ಪೋಸ್ಟರ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದೆ.
‘ಧುರಂಧರ್’ ಸಿನಿಮಾವನ್ನು ನೆಟ್ ಫಿಕ್ಸ್‌ನಲ್ಲಿ ಹಿಂದಿ, ತೆಲಗು, ತಮಿಳು, ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ವೀಕ್ಷಣೆ ಮಾಡಬಹುದು. ‘ಧುರಂಧರ್’ ಸಿನಿಮಾದ ಹಾಡಿನ ರೀಲ್ಸ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ತುಂಬಿ ಹೋಗಿದೆ.
‘ಧುರಂಧರ್’ ಬಿಡುಗಡೆ ಬಳಿಕ ಪಾಕಿಸ್ತಾನದಲ್ಲಿ ಒಂದು ದಿನ ಸ್ಪೈ ಆಗಿ ಕಾರ್ಯ ನಿರ್ವಹಣೆ ಮಡುವ ರೀಲ್ಸ್‌ಗಳು ಭಾರೀ ಮೆಚ್ಚುಗೆ ಗಳಿಸಿದ್ದವು. ಚಿತ್ರಮಂದಿರದಲ್ಲಿ ‘ಧುರಂಧರ್’ ನೋಡಲು ಮಿಸ್ ಮಾಡಿಕೊಂಡವರು ಈಗ ಮನೆಯಲ್ಲಿ ಚಿತ್ರವನ್ನು ವೀಕ್ಷಿಸಬಹುದು.
ವರದಿಗಳ ಪ್ರಕಾರ ‘ಧುರಂಧರ್’ ಚಿತ್ರಮಂದಿರದಲ್ಲಿ ಭಾರೀ ಯಶಸ್ಸು ಕಂಡ ಬಳಿಕ ಒಟಿಟಿ ಹಕ್ಕುಗಳನ್ನು ಸಹ ದುಬಾರಿ ಬೆಲೆಗೆ ಮಾರಾಟ ಮಾಡಿದೆ. ವರದಿ ಪ್ರಕಾರ ಹಿಂದಿ ಚಲನಚಿತ್ರವೊಂದಕ್ಕೆ ಸಿಕ್ಕಿದ ಅತ್ಯಂತ ಲಾಭದಾಯಕ ಡಿಜಿಟಲ್ ಹಕ್ಕುಗಳ ಒಪ್ಪಂದಕ್ಕೆ ‘ಧುರಂಧರ್’ ಮಾರಾಟವಾಗಿದೆ.
ಚಿತ್ರದ ನಿರ್ಮಾಪಕರು ಮತ್ತು ನೆಟ್ ಫ್ಲಿಕ್ಸ್ ನಡುವಿನ ಈ ಹಕ್ಕುಗಳ ಒಪ್ಪಂದವು ಒಂದು ಐತಿಹಾಸಿಕ ಮೈಲುಗಲ್ಲು. ನೆಟ್ ಫ್ಲಿಕ್ಸ್ ‘ಧುರಂಧರ್’ ಮತ್ತು ಅದರ ಮುಂಬರುವ ಭಾಗ ‘ಧುರಂಧರ್-2’ ಎರಡೂ ಒಟಿಟಿ ಹಕ್ಕುಗಳನ್ನು ಸುಮಾರು 130 ಕೋಟಿ ರೂಪಾಯಿಗಳ ಮೊತ್ತಕ್ಕೆ ಖರೀದಿ ಮಾಡಿದೆ ಎಂಬ ವರದಿಗಳು ಇವೆ.
‘ಧುರಂಧರ್’ ಚಿತ್ರ ದೇಶ ಮತ್ತು ವಿದೇಶದಲ್ಲಿ ದೊಡ್ಡ ಮಟ್ಟದ ಗಳಿಕೆ ಮಾಡಿದೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರವು ಭಾರತದಲ್ಲಿ ಇದುವರೆಗೆ ರೂ. 826.41 ಕೋಟಿ ಸಂಗ್ರಹಿಸಿದೆ, ಹಾಗೆಯೇ ಜಾಗತಿಕ ಮಟ್ಟದಲ್ಲಿ ಇದರ ಒಟ್ಟು ಗಳಿಕೆ ರೂ. 1283.5 ಕೋಟಿ ದಾಟಿದೆ ಎಂದು ಅಂದಾಜಿಸಲಾಗಿದೆ.
‘ಧುರಂಧರ್’ ಬಳಿಕ ಹಲವು ಹೊಸ ಚಿತ್ರಗಳು ಬಿಡುಗಡೆಯಾದರೂ ಸಹ ಚಿತ್ರಮಂದಿರಗಳಲ್ಲಿ ‘ಧುರಂಧರ್’ ತನ್ನ ಅಬ್ಬರವನ್ನು ಮುಂದುವರಿಸಿತ್ತು. ಆ ವೇಳೆಗೆ ಚಿತ್ರತಂಡ ‘ಧುರಂಧರ್-2’ ಸಿನಿಮಾ ಘೋಷಣೆ ಮಾಡಿತು. ಮಾರ್ಚ್ 19ರಂದು ಅದು ಬಿಡುಗಡೆಯಾಗಲಿದೆ.
ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಧುರಂದರ್’ ಚಿತ್ರವು ಕಂದಹಾರ್ ವಿಮಾನ ಅಪಹರಣ, 2001ರ ಸಂಸತ್ ಭವನದ ಮೇಲಿನ ದಾಳಿ ಮತ್ತು 26/11 ಮುಂಬೈ ದಾಳಿಯ ನಂತರ ಪಾಕಿಸ್ತಾನದಲ್ಲಿ ನಡೆಯುವ ಗುಪ್ತಚರ ಸಂಸ್ಥೆಗಳ ಚಟುವಟಿಕೆಗಳನ್ನು ಆಧರಿಸಿದೆ.
ಈ ಚಿತ್ರದಲ್ಲಿ ರಣವೀರ್ ಸಿಂಗ್, ಸಂಜಯ್ ದತ್, ಅಕ್ಷಯ್ ಖನ್ನಾ, ಆರ್. ಮಾಧವನ್, ಅರ್ಜುನ್ ರಾಂಪಾಲ್, ರಾಕೇಶ್ ಬೇಡಿ, ಸಾರಾ ಅರ್ಜುನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಧುರಂದರ್’ ಯಶಸ್ವಿಯಾದ ಕಾರಣ ಧುರಂದರ್-2 ಮೇಲೆಯೂ ಅಪಾರ ನಿರೀಕ್ಷೆ ಇದೆ.

