ಬೆಂಗಳೂರು: ಕುವೆಂಪು ವಿಶ್ವವಿದ್ಯಾಲಯದಲ್ಲಿ ಸ್ಮಾರ್ಟ್ ಕ್ಲಾಸ್ ಗಳ ಕಾಮಗಾರಿಯಲ್ಲಿ ನಡೆದ ಬಹುಕೋಟಿ ಹಗರಣದ ತನಿಖೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಆದೇಶ ಹೊರಡಿಸಿದ್ದಾರೆ.
ತನಿಖೆಗಾಗಿ ನಿವೃತ್ತ ನ್ಯಾಯಮೂರ್ತಿ ಆರ್. ಗುರುರಾಜನ್ ಅವರ ಏಕಸದಸ್ಯ ಸತ್ಯಶೋಧನಾ ಸಮಿತಿ ನೇಮಕ ಮಾಡಿ ಶನಿವಾರ ಆದೇಶ ಹೊರಡಿಸಲಾಗಿದೆ. ತನಿಖೆ ನಡೆಸಿ ಒಂದು ತಿಂಗಳಲ್ಲಿ ವರದಿ ಸಲ್ಲಿಕೆಗೆ ಸೂಚಿಸಲಾಗಿದೆ.
ಕುವೆಂಪು ವಿವಿಯಲ್ಲಿ ಸ್ಮಾರ್ಟ್ ಕ್ಲಾಸ್ ಗಳ ನಿರ್ಮಾಣಕ್ಕೆ ನೀಡಿದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಉಪಯೋಜನೆಯ ಹಣ ದುರುಪಯೋಗ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಗುರುರಾಜನ್ ಅವರನ್ನು ನೇಮಕ ಮಾಡಲಾಗಿದೆ. ಸಮಿತಿಗೆ ನೆರವು ನೀಡುವ ಜವಾಬ್ದಾರಿಯನ್ನು ಲೋಕಭವನದ ವಕೀಲ ಅಭಿಷೇಕ್ ಕುಮಾರ್ ಅವರಿಗೆ ವಹಿಸಲಾಗಿದೆ.
ಕುವೆಂಪು ವಿವಿಯಲ್ಲಿ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಒದಗಿಸಲು 2022ರ ಜನವರಿಯಲ್ಲಿ ರಾಜ್ಯ ಸರ್ಕಾರ 5 ಕೋಟಿ ರೂ. ಒದಗಿಸಿದ್ದು, ಸ್ನಾತಕೋತರ ಅಧ್ಯಯನ ವಿಭಾಗಗಳಲ್ಲಿ ಸ್ಮಾರ್ಟ್ ಕ್ಲಾಸ್ ಗಳನ್ನು ಸಿದ್ಧಪಡಿಸಿದ್ದು, ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ದರದಲ್ಲಿ ಸಾಮಗ್ರಿ ಖರೀದಿಸಿ ವಂಚಿಸಲಾಗಿದೆ. ಭೌತಿಕವಾಗಿ ಪರಿಶೀಲನೆ ನಡೆಸದೇ, ನಗದು ರಶೀದಿ ಪಡೆಯದೆ ಗುತ್ತಿಗೆ ಕಂಪನಿಯೊಂದಕ್ಕೆ 2.99 ಕೋಟಿ ರೂ. ಪಾವತಿಸಲಾಗಿದೆ ಎಂದು ಕೆಲವರು ಉನ್ನತ ಶಿಕ್ಷಣ ಇಲಾಖೆಗೆ ದೂರು ನೀಡಿದ್ದರು.
ಶಿವಮೊಗ್ಗ ಜಿಲ್ಲಾ ನ್ಯಾಯಾಧೀಶ ಎಚ್.ಬಿ. ರವೀಂದ್ರನಾಥ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ಅಂದಿನ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಸೇರಿದಂತೆ ಹಲವು ಅಧಿಕಾರಿಗಳು ಲೋಪ ಎಸಗಿದ್ದಾರೆ ಎಂದು ವರದಿ ನೀಡಿತ್ತು. ರಾಜ್ಯ ಸರ್ಕಾರ ಸಲ್ಲಿಸಿದ ಈ ವರದಿ ಆಧಾರದಲ್ಲಿ ದೂರುಗಳ ಸತ್ಯಾಸತ್ಯತೆ ಪರಿಶೀಲಿಸಲು ರಾಜ್ಯಪಾಲರು ಹೊಸ ಸಮಿತಿ ರಚಿಸಿದ್ದಾರೆ.

