ಹಾಸನ: ಬಸ್ ನಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ನಗದು ಮತ್ತು ಲಕ್ಷ ರೂಪಾಯಿ ಮೌಲ್ಯದ ಚೆಕ್ ಇದ್ದ ಬ್ಯಾಗ್ ಅನ್ನು ಸಾರಿಗೆ ಬಸ್ ಚಾಲಕ ಮತ್ತು ನಿರ್ವಾಹಕರು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಚನ್ನರಾಯಪಟ್ಟಣ ಘಟಕಕ್ಕೆ ಸೇರಿದ ಬಸ್ ಚಾಲಕ ಎನ್.ಸಿ. ಕೃಷ್ಣೇಗೌಡ, ನಿರ್ವಾಹಕ ಜಗದೀಶ್ ಅವರ ಪ್ರಾಮಾಣಿಕತೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚನ್ನರಾಯಪಟ್ಟಣದಿಂದ ಹಾಸನಕ್ಕೆ ತೆರಳುತ್ತಿದ್ದ ಬಸ್ ನಲ್ಲಿ ಉದ್ಯಮಿಗಳಾದ ಕಪಿಲ್ ಶರ್ಮಾ ಮತ್ತು ಬಾಲಕೃಷ್ಣ ಶರ್ಮಾ ಎಂಬುವರು 67,500 ರೂಪಾಯಿ ಮತ್ತು 1.10 ಲಕ್ಷ ರೂಪಾಯಿ ಮೌಲ್ಯದ ಸಹಿ ಇರುವ ಚೆಕ್ ಇದ್ದ ಬ್ಯಾಗ್ ಸಹಿತ ಪ್ರಯಾಣಿಸುತ್ತಿದ್ದರು. ತಾಂತ್ರಿಕ ಸಮಸ್ಯೆಯಿಂದ ಬಸ್ ಕೆಟ್ಟ ಕಾರಣ ಬೇರೆ ಬಸ್ ಹತ್ತುವ ಅವಸರದಲ್ಲಿ ಉದ್ಯಮಿಗಳು ಈ ಬ್ಯಾಗ್ ಬಿಟ್ಟು ಹೋಗಿದ್ದರು. ಇದನ್ನು ಗಮನಿಸಿದ ಜಗದೀಶ್ ಮತ್ತು ಕೃಷ್ಣೆಗೌಡ ಬ್ಯಾಗ್ ಅನ್ನು ತೆಗೆದಿಟ್ಟು ಮರಳಿಸಿದ್ದಾರೆ.

