ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಸರ್ಕಾರಿ ವೈದ್ಯರು ಮಾರ್ಚ್ 11 ರಿಂದ 15ರ ತನಕ ಹೊರ ರೋಗಿ ಸೇವೆ (ಒಪಿಡಿ) ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.
ವೈದ್ಯರ ಈ ಪ್ರತಿಭಟನೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಬಲ ನೀಡಿದೆ. ಈ ಪ್ರತಿಭಟನೆ ಕಾರಣ ರಾಜ್ಯದಲ್ಲಿ ಆರೋಗ್ಯ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ನಿರೀಕ್ಷೆ ಇದೆ. ಸರ್ಕಾರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಲಿದೆಯೇ? ಎಂದು ಕಾದು ನೋಡಬೇಕಿದೆ.
ಈ ಪ್ರತಿಭಟನೆ ಕುರಿತು ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ (ರಿ) ಮಾಹಿತಿ ನೀಡಿದೆ. ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘ (ರಿ) ಇಲಾಖೆಯ ಎಲ್ಲಾ ವೃಂದ ಸಂಘಗಳ ಸಹಯೋಗದೊಂದಿಗೆ ಈ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದೆ.
ಆರೋಗ್ಯ ಇಲಾಖೆಯ ಅಧಿಕಾರಿ/ ನೌಕರರ ನ್ಯಾಯಯುತ ಬೇಡಿಕೆಗಳ ಸಂಬಂಧದಿನಾಂಕ 13-02-2026ರಂದು ನಡೆದ ರಾಜ್ಯ ಕಾರ್ಯಕಾರಿಣಿ ಮತ್ತು ಎಲ್ಲಾ ವೃಂದ ಸಂಘಗಳ ಸಭೆಯಲ್ಲಿ ರಾಜ್ಯದ ಸಮಸ್ತ ಆರೋಗ್ಯ ಇಲಾಖೆಯ ಅಧಿಕಾರಿ/ ನೌಕರರು ದಿನಾಂಕ 11-03-2026ರಿಂದ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಗೊಳ್ಳಲು ಸರ್ವಾನುಮತದಿಂದ ತೀರ್ಮಾನಿಸಲಾಗಿರುತ್ತದೆ ಎಂದು ತಿಳಿಸಿದೆ.
ದಿನಾಂಕ 11-03-2026 ರಿಂದ 15-03-2026ರ ವರೆಗೆ ಕಪ್ಪುಪಟ್ಟಿ ಧರಿಸಿ ಹೊರರೋಗಿ ಸೇವೆ ನೀಡದೇ ಕೇವಲ ತುರ್ತು ಸೇವೆ ಮಾತ್ರ ಒದಗಿಸುವುದು. ದಿನಾಂಕ 16-03-2026 ಸೋಮವಾರದಿಂದ ಅನಿರ್ದಿಷ್ಟಾವಧಿವರೆಗೆ ಕರ್ತವ್ಯಕ್ಕೆ ಗೈರು ಹಾಜರಾಗುವುದು ಎಂದು ಹೇಳಿದೆ.
ಈಡೇರದೇ ಇರುವ ನ್ಯಾಯಯುತ ಬೇಡಿಕೆಗಳು
- ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಸಮರ್ಪಕವಾಗಿ ಇಲಾಖೆಯಿಂದ ಔಷಧಿಗಳನ್ನು ಸರಬರಾಜು ಮಾಡದೇ ಇರುವುದು.
- ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪ್ರತಿ 3 ವರ್ಷಕ್ಕೊಮ್ಮೆ ತಿದ್ದುಪಡಿ ಮಾಡಲು ಸರ್ಕಾರಿ ಆದೇಶವಿದ್ದಾಗ್ಯೂ ಸಹ ಉಲ್ಲಂಘಿಸಿ, 1973 ರಿಂದ ಇಲ್ಲಿಯವರೆಗೆ ಆರೋಗ್ಯ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡದೇ ಇರುವುದು.
- ಇಲಾಖೆಯ ಎಲ್ಲಾ ವೃಂದಗಳ ಜೇಷ್ಠತಾ ಪಟ್ಟಿಯನ್ನು ಇದುವರೆಗೂ ಪ್ರಕಟಿಸದೇ ಇರುವುದು.
- ಇಲಾಖೆಯ ಎಲ್ಲಾ ವೃಂದದ ಯಾವುದೇ ಅಧಿಕಾರಿ/ ನೌಕರರಿಗೆ ಕಳೆದ 5 ವರ್ಷಗಳಿಂದ ಮುಂಬಡ್ತಿಗಳನ್ನು ನೀಡದೇ ಇರುವುದು.
- ನಿಯಮಗಳಲ್ಲಿ ಅವಕಾಶವಿದ್ದಾಗ್ಯೂ, ಸೇವಾನಿರತ ವೈದ್ಯರು, ಅಧಿಕಾರಿ/ ನೌಕರರ ಉನ್ನತ ವ್ಯಾಸಂಗ ಸ್ನಾತಕೋತ್ತರ ವ್ಯಾಸಂಗಕ್ಕೆ ಅವಕಾಶ ನೀಡದೇ ಇರುವುದು.
- ಇಲಾಖೆಯ ವರ್ಗಾವಣೆ ಕಾಯಿದೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸದೇ ಅವೈಜ್ಞಾನಿಕವಾಗಿ ಕೌನ್ಸಿಲಿಂಗ್ ವರ್ಗಾವಣೆ ಮಾಡುತ್ತಿರುವುದು.
- ವೈದ್ಯಕೀಯ ಶಿಕ್ಷಣ ಇಲಾಖೆಯ ಸ್ವಾಯತ್ತ ಸಂಸ್ಥೆಗಳಲ್ಲಿ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಮಹಾನಗರ ಪಾಲಿಕೆ ಹಾಗೂ ನಗರ ಪಾಲಿಕೆಗಳಲ್ಲಿ ಮಂಜೂರಾಗಿರುವ ಆರೋಗ್ಯ ಇಲಾಖೆಯ ಎನ್-ಕೇಡರ್ ಹುದ್ದೆಗಳಿಗೆ ನೇಮಕಾತಿ, ಮುಂಬಡ್ತಿ ಮತ್ತು ವರ್ಗಾವಣೆಗಳಿಗೆ ಆರೋಗ್ಯ ಇಲಾಖೆಯ ವೈದ್ಯರು, ಅಧಿಕಾರಿ/ ನೌಕರರನ್ನೇ ನಿಯೋಜಿಸುವುದು.
- ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ದೃಷ್ಟಿಯಿಂದ ಇಲಾಖೆಯಲ್ಲಿ ಖಾಲಿ ಇರುವ ವೈದ್ಯರು, ಅರೆ ವೈದ್ಯಕೀಯ ಹಾಗೂ ಇತರೆ ವೃಂದದ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದು.
- ಗುತ್ತಿಗೆ ವೈದ್ಯರು/ ನೌಕರರು ಹಾಗೂ ಎನ್.ಹೆಚ್.ಎಂ. ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಹಾಗೂ ಕಾಲ ಕಾಲಕ್ಕೆ ಸೂಕ್ತ ವೇತನ ಹೆಚ್ಚಳ ಮಾಡದೇ ಇರುವುದು.
- ಇಲಾಖೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆ ಅಡಿ ಕಾರ್ಯನಿರತ ಸುಮಾರು 6000 ನೌಕರರಿಗೆ ಹಲವಾರು ವರ್ಷಗಳಿಂದ 3-4 ತಿಂಗಳಿಗೊಮ್ಮೆ ವೇತನ/ ಭತ್ಯೆಗಳನ್ನು ನೀಡುತ್ತಿರುವುದು.
- ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ತಜ್ಞ ವೈದ್ಯರು ಇತರೆ ಸಿಬ್ಬಂದಿಯವರಿಗೆ ಸಿ.ಜಿ.ಹೆಚ್.ಎಸ್/ ಎ.ಐ.ಸಿ.ಟಿ.ಇ. (ವೈದ್ಯಕೀಯ ಶಿಕ್ಷಣ ಇಲಾಖೆಯ ಮಾದರಿಯಲ್ಲಿ ವೇತನ ನೀಡುವುದು.
ಈ ಬೇಡಿಕೆಗಳ ಈಡೇರಿಕೆಗಾಗಿ ಕರ್ತವ್ಯಕ್ಕೆ ಗೈರು ಹಾಜರಾಗಿ ಆರೋಗ್ಯ ಇಲಾಖೆಯ ಎಲ್ಲ ವೃಂದ ಸಂಘಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಸಮಸ್ತ ಅಧಿಕಾರಿ ಹಾಗೂ ನೌಕರ ಬಾಂಧವರು ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.

