ಮಣಿಪುರದಲ್ಲಿ ಸರ್ಕಾರ ರಚನೆಯ ಚಟುವಟಿಕೆ ಬಿರುಸುಗೊಂಡಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದ್ದು, ಅದು ಫೆಬ್ರವರಿ 13ರಂದು ಅಂತ್ಯಗೊಳ್ಳಲಿದೆ. ಆದ್ದರಿಂದ ಹೊಸ ಸರ್ಕಾರ ರಚನೆಯ ಪ್ರಕ್ರಿಯೆ ಬಿರುಸಾಗಿದ್ದು, ಎನ್‌ಡಿಎ ಮೈತ್ರಿಕೂಟದ ಶಾಸಕರು ದೆಹಲಿ ವಿಮಾನ ಏರಿದ್ದಾರೆ.
ರಾಜ್ಯದ ಆಡಳಿತ ಪಕ್ಷವಾಗಿದ್ದ ಎನ್‌ಡಿಎ ಮೈತ್ರಿಕೂಟದ ಶಾಸಕರು ಪಕ್ಷದ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ಹೋಗಿದ್ದಾರೆ. ಬಿಜೆಪಿ ಈಶಾನ್ಯ ರಾಜ್ಯಗಳ ಉಸ್ತುವಾರಿ ಸಮಿತ್ ಪಾತ್ರ ಶಾಸಕರನ್ನು ಸೋಮವಾರ ಭೇಟಿಯಾಗಲಿದ್ದಾರೆ.
ಮಣಿಪುರದಲ್ಲಿನ ಗಲಭೆ ಬಳಿಕ ಕೇಂದ್ರ ಸರ್ಕಾರ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿತ್ತು. 2025ರ ಫೆಬ್ರವರಿಯಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲಾಗಿತ್ತು. ಆದರೆ ಸರ್ಕಾರವನ್ನು ವಿಸರ್ಜನೆ ಮಾಡಿರಲಿಲ್ಲ.
ಮೊದಲ 6 ತಿಂಗಳ ರಾಷ್ಟ್ರಪತಿ ಆಳ್ವಿಕೆ ಅಂತ್ಯಗೊಂಡ ಬಳಿಕ ಪುನಃ 6 ತಿಂಗಳು ವಿಸ್ತರಣೆ ಮಾಡಲಾಗಿತ್ತು. ಈಗ ರಾಷ್ಟ್ರಪತಿ ಆಳ್ವಿಕೆ ಫೆಬ್ರವರಿ 13ಕ್ಕೆ ಅಂತ್ಯಗೊಳ್ಳಲಿದ್ದು, ಸರ್ಕಾರ ರಚನೆಯ ಬಗ್ಗೆ ಚರ್ಚೆಗಳು ಆರಂಭವಾಗಿದೆ.
ಇದು ರಾಜ್ಯ ರಾಜಕೀಯದಲ್ಲಿ ಸಭೆಗಳು ಸೇರಿದಂತೆ ವಿವಿಧ ಬಿರುಸಿನ ಚಟುವಟಿಕೆಗೆ ಕಾರಣವಾಗಿದೆ. ರಾಷ್ಟ್ರಪತಿ ಆಳ್ವಿಕೆ ಅವಧಿ ಮುಗಿಯುವ ಗಡುವು ಹತ್ತಿರವಾಗುತ್ತಿರುವ ಕಾರಣ ಶಾಸಕರು ಸಹ ಸರ್ಕಾರ ರಚನೆ ಪ್ರಕ್ರಿಯೆಯಲ್ಲಿ ಬ್ಯುಸಿಯಾಗುತ್ತಿದ್ದಾರೆ.
“ಸರ್ಕಾರ ರಚನೆಯೇ ನಮ್ಮ ಕಾರ್ಯಸೂಚಿಯಾಗಿದೆ. ಹೈಕಮಾಂಡ್ ಆಯ್ಕೆ ಮಾಡುವ ಯಾವುದೇ ನಾಯಕನನ್ನು ನಾವು ಒಪ್ಪಿಕೊಳ್ಳುತ್ತೇವೆ” ಎಂದು ಬಿಜೆಪಿ ಶಾಸಕ ಸೊರೊಖೈಬಮ್ ರಾಜೇನ್ ಇಂಫಾಲ್ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಶಾಸಕ ನಿಶಿಕಾಂತ್ ಸಿಂಗ್ ಸಪಮ್, “ಸಾಮಾಜಿಕ ಜಾಲತಾಣದಲ್ಲಿ ಬರುವ ಸುದ್ದಿ, ಮತ್ತು ವದಂತಿಗಳನ್ನು ನಂಬದಂತೆ ಎಚ್ಚರಿಸಿದ್ದಾರೆ. ನಾಯಕತ್ವದ ವಿಷಯಗಳ ಬಗ್ಗೆ ನಿರ್ಧರಿಸಲು ಪಕ್ಷವು ತನ್ನದೇ ಆದ ಆಂತರಿಕ ವ್ಯವಸ್ಥೆಯನ್ನು ಹೊಂದಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಮಣಿಪುರದ ಬಿಜೆಪಿ ರಾಜ್ಯಾಧ್ಯಕ್ಷೆ ಎ.ಶಾರದಾ ದೇವಿ ಅವರು ದೆಹಲಿಗೆ ಪ್ರಯಾಣಿಸಿದ್ದಾರೆ. ಇದು ಮಣಿಪುರ ಸರ್ಕಾರ ರಚನೆ, ಮುಂದಿನ ಪ್ರಮುಖ ಬೆಳವಣಿಗೆ ಮತ್ತು ನಾಯಕತ್ವದ ಕುರಿತು ನಿರ್ಧಾರಗಳನ್ನು ಹೈಕಮಾಂಡ್ ಮಟ್ಟದಲ್ಲಿ ತೆಗೆದುಕೊಳ್ಳಬಹುದು ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.
ಹೊಸ ಸರ್ಕಾರ ರಚನೆ ಕುರಿತು ರಾಜ್ಯದ ವಿವಿಧ ಭಾಗಗಳಲ್ಲಿ ವಿರೋಧ ಕೇಳಿ ಬರುತ್ತಿದೆ. ಕುಕಿ ಪಂಗಡದವರು ವಾಸಿಸುವ ಮಣಿಪುರದ ಕೆಲವು ಜಿಲ್ಲೆಗಳ ಕೆಲವು ಸಂಘಟನೆಗಳು, ತಾವು ಮಣಿಪುರದಲ್ಲಿ ಸರ್ಕಾರ ರಚನೆಯನ್ನು ಬೆಂಬಲಿಸುವುದಿಲ್ಲ ಎಂದು ಹೇಳಿಕೆ ನೀಡಿವೆ.
ಕುಕಿ ಪಂಗಡದ ಒಂದು ವರ್ಗವು ಮಣಿಪುರದಿಂದ ಬೇರ್ಪಟ್ಟು ತಮ್ಮದೇ ಸಮುದಾಯಕ್ಕಾಗಿ ಪ್ರತ್ಯೇಕ ಆಡಳಿತವನ್ನು ರಚಿಸಲು ಬಯಸಿದೆ. ಈ ಕುರಿತಾದ ಸಂಧಾನ ಮಾತುಕತೆಗಳನ್ನು ನಡೆಸಲಾಗುತ್ತಿದೆ, ಒಪ್ಪಂದಕ್ಕೆ ಎರಡು ಪ್ರಮುಖ ಸಂಘಟನೆಗಳು ಸಹಿ ಹಾಕಿವೆ ಎಂದು ಹೇಳಿದೆ.
ಮಣಿಪುರದಲ್ಲಿ ಗಲಭೆ ಆರಂಭವಾದ ಬಳಿಕ ಉಂಟಾದ ರಾಜಕೀಯ ಅನಿಶ್ಚಿತತೆ ಮತ್ತು ಆಡಳಿತಾತ್ಮಕ ವೈಫಲ್ಯ ಕೊನೆಗೊಳ್ಳಬೇಕೆಂದು ಜನರ ಒತ್ತಡ ಹೆಚ್ಚಾಗುತ್ತಿದ್ದರೂ, ಮೈತೇಯಿ ಸಮುದಾಯ ಮತ್ತು ಪ್ರತ್ಯೇಕ ಆಡಳಿತದ ಬೇಡಿಕೆಯ ನೇತೃತ್ವ ವಹಿಸಿರುವ ಕೆಲವು ಕುಕಿ ಪಂಗಡದ ಸಂಘಟನೆಗಳ ನಡುವಿನ ನಿಲುವುಗಳಲ್ಲಿ ಸಾಮಾನ್ಯತೆ ಇಲ್ಲ.
ದೆಹಲಿಯಲ್ಲಿನ ಹೈಕಮಾಂಡ್ ನಾಯಕರು, ಪಕ್ಷದ ಮಣಿಪುರ ಘಟಕವಾಗಲಿ ಈ ಸರ್ಕಾರ ರಚನೆ ಬೆಳವಣಿಗೆಗಳ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಆದರೆ ಎನ್‌ಡಿಎ ಶಾಸಕರು ದೆಹಲಿ ವಿಮಾನ ಏರಿದ್ದು, ಸೋಮವಾರ ಏನಾಗಲಿದೆ? ಎಂದು ಕಾದು ನೋಡಬೇಕು.

