ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ನೇತೃತ್ವದ ನಿಯೋಗ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಸರ್ಕಾರಿ ನೌಕರರ ಕುರಿತು ಹಲವು ಬೇಡಿಕೆಗಳನ್ನು ಸಲ್ಲಿಕೆ ಮಾಡಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ನೇತೃತ್ವದ ನಿಯೋಗವು ಸಿ.ಆ.ಸು.ಇ (ಆ.ಸು) ಇಲಾಖೆಯ ಉಪ ಕಾರ್ಯದರ್ಶಿ ಸುಮ ಅವರನ್ನು ಭೇಟಿ ಮಾಡಿತ್ತು.
ಈ ಸಂದರ್ಭದಲ್ಲಿ ಹಿರಿಯ ಉಪಾಧ್ಯಕ್ಷ ಆರ್.ಮೋಹನ್ ಕುಮಾರ್, ಉಪಾಧ್ಯಕ್ಷ ಚೇತನ್ ರಾಜು, ಲೋಕೇಶ್ ಮುಂತಾದವರು ಉಪಸ್ಥಿತರಿದ್ದರು.
ಸರ್ಕಾರಿ ನೌಕರರ ಬೇಡಿಕೆಗಳು
- ಬೆಳಗಾವಿ ವಿಭಾಗದ ವಿಜಯಪುರ ಹಾಗೂ ಬಾಗಲಕೋಟೆ ಮತ್ತು ಕಲಬುರುಗಿ ವಿಭಾಗದ ಜಿಲ್ಲೆಗಳಿಗೆ 2026ರ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಕಚೇರಿ ಕೆಲಸದ ವೇಳೆಯನ್ನು ಬೆಳಗ್ಗೆ 8 ರಿಂದ 1.30ರ ವರೆಗೆ ನಿಗದಿಪಡಿಸಿ ಆದೇಶ ಹೊರಡಿಸುವಂತೆ ಮನವಿ ಮಾಡಲಾಯಿತು.
- 2024, 2025 ಮತ್ತು 2026ನೇ ಸಾಲುಗಳ ರಾಜ್ಯ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ಏಪ್ರಿಲ್ 21ರ ರಾಜ್ಯ ಸರ್ಕಾರಿ ನೌಕರರ ದಿನಾಚರಣೆಯಂದೇ ಪ್ರಶಸ್ತಿ ನೀಡಲು ಕ್ರಮವಹಿಸುವಂತೆ ರಾಜ್ಯಾಧ್ಯಕ್ಷರು ಮನವಿ ಮಾಡಿದರು.
- ಈಗಾಗಲೇ 2024 ಮತ್ತು 2025ನೇ ಸಾಲುಗಳ ಆಯ್ಕೆ ಪಟ್ಟಿ ತಯಾರಾಗಿದ್ದು ಅಪರ ಮುಖ್ಯಕಾರ್ಯದರ್ಶಿಗಳ ಸಭೆ ಏರ್ಪಡಿಸಿ, ಅಂತಿಮ ಪಟ್ಟಿ ತಯಾರಿಸುವುದಾಗಿ ತಿಳಿಸಿದರು ಮತ್ತು 2026ನೇ ಸಾಲಿನ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಸಹ ಏಪ್ರಿಲ್ ತಿಂಗಳ ಒಳಗೆ ಅಂತಿಮಗೊಳಿಸುವುದಾಗಿ ಭರವಸೆ ನೀಡಿದರು.
ಸರ್ಕಾರಿ ನೌಕರರ ಎಲ್ಲಾ ಬೇಡಿಕೆಗಳನ್ನು ಪರಿಶೀಲನೆ ನಡೆಸಿದ ಉಪ ಕಾರ್ಯದರ್ಶಿಗಳು ಸಕರಾತ್ಮಕವಾಗಿ ಸ್ಪಂದಿಸಿ, ಶೀಘ್ರವಾಗಿ ಮಾನ್ಯ ಮುಖ್ಯಕಾರ್ಯದರ್ಶಿಗಳಿಂದ ಅನುಮೋದನೆ ಪಡೆದು ಆದೇಶ ಹೊರಡಿಸುವುದಾಗಿ ಭರವಸೆ ನೀಡಿದರು.

