HomeJobsಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿಗಳಿಗೆ ಪತ್ರ

ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಮುಖ್ಯಮಂತ್ರಿಗಳಿಗೆ ಪತ್ರ

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಲಕ್ಷ ಲಕ್ಷ ಹುದ್ದೆಗಳು ಖಾಲಿ ಇವೆ. ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರ ವಿಳಂಬ ಮಾಡುತ್ತಿದೆ. ಈ ಕುರಿತು ‘ಉದ್ಯೋಗ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ದನಿ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ಟಿ. ನಾರಾಯಣಸ್ವಾಮಿ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದಾರೆ.

ರಾಜ್ಯ ಸರ್ಕಾರದಲ್ಲಿನ ಎಲ್ಲಾ ಖಾಲಿ ಹುದ್ದೆಗಳ ತಕ್ಷಣದ ಭರ್ತಿ ಹಾಗೂ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಮಾನ್ಯ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಲಕ್ಷಾಂತರ ಯುವಕರ ಭವಿಷ್ಯ ಮತ್ತು ಸಾಮಾಜಿಕ ಸಮಾನತೆಯ ದೃಷ್ಟಿಯಿಂದ ಈ ಬೇಡಿಕೆಗಳು ಈಡೇರಲೇಬೇಕು. ಈ ಕುರಿತು ಮುಂಬರುವ ಸದನದ ಒಳಗೂ ಮತ್ತು ಹೊರಗೂ ಸರ್ಕಾರದ ಅನ್ಯಾಯದ ವಿರುದ್ಧ ಧ್ವನಿ ಎತ್ತಿ, ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇವೆ ಎಂದು ಅವರು ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಪತ್ರದ ವಿವರ: ಈ ಪತ್ರವು ಎಸ್‌ಸಿ/ ಎಸ್‌ಟಿ ಮೀಸಲಾತಿ ಹೆಚ್ಚಳದ ಕ್ರೆಡಿಟ್ ರಾಜಕಾರಣ, ಒಳಮೀಸಲಾತಿ ಜಾರಿಯಲ್ಲಿನ ವಿಳಂಬ ಹಾಗೂ ಖಾಲಿ ಹುದ್ದೆಗಳ ಭರ್ತಿ ಕುರಿತು ಬಹಿರಂಗ ಪತ್ರ ಎಂಬ ವಿಷಯವನ್ನು ಒಳಗೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಾವಣಗೆರೆಯ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ತಾವು ನೀಡಿದ ಭಾಷಣವು ಕೇವಲ ರಾಜಕೀಯ ಪ್ರೇರಿತವಾಗಿದೆಯೇ ಹೊರತು, ಅದರಲ್ಲಿ ದಲಿತ ಮತ್ತು ಹಿಂದುಳಿದ ವರ್ಗಗಳ ಹಿತಾಸಕ್ತಿ ಎಳ್ಳಷ್ಟೂ ಕಾಣುತ್ತಿಲ್ಲ. ಜನರ ಕಣ್ಣಿಗೆ ಮಣ್ಣೆರಚುವ ಭಾಷಣಗಳಿಂದ ಸಮುದಾಯದ ಏಳಿಗೆ ಅಸಾಧ್ಯವೆಂಬ ಕಟು ಸತ್ಯವನ್ನು ಈ ಮೂಲಕ ತಮಗೆ ನೆನಪಿಸಬಯಸುತ್ತೇನೆ ಎಂದು ಪತ್ರದಲ್ಲಿ ಹೇಳಿದ್ದಾರೆ.

ಮೀಸಲಾತಿ ಹೆಚ್ಚಳ ಮತ್ತು ನಿಮ್ಮ ದ್ವಂದ್ವ ನಿಲುವು: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿ ಪ್ರಮಾಣವನ್ನು ಕ್ರಮವಾಗಿ ಶೇ. 15 ರಿಂದ 17ಕ್ಕೆ ಮತ್ತು ಶೇ. 3 ರಿಂದ 7ಕ್ಕೆ ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದು ಬಿಜೆಪಿ ಸರ್ಕಾರ ಮತ್ತು ಅಂದಿನ ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿಯವರು.

ಅಂದು ಆ ನಿರ್ಧಾರವನ್ನು “ಚುನಾವಣಾ ಗಿಮಿಕ್” ಎಂದು ಲೇವಡಿ ಮಾಡಿದ್ದ ತಾವು, ಇಂದು ಅದೇ ಅಂಕಿ-ಅಂಶಗಳನ್ನು ಬಳಸಿಕೊಂಡು ವೇದಿಕೆಗಳ ಮೇಲೆ ಹಕ್ಕು ಸಾಧಿಸುತ್ತಿರುವುದು ನಿಮ್ಮ ನೈತಿಕ ಅಧಃಪತನಕ್ಕೆ ಸಾಕ್ಷಿಯಾದಂತಿದೆ. ಬಿಜೆಪಿ ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಾ, ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನವನ್ನು ಈಗಲಾದರೂ ನಿಲ್ಲಿಸಿ.

ಒಳಮೀಸಲಾತಿ, ರಾಜಕೀಯ ನಾಟಕ ಬಿಡಿ: ಒಳಮೀಸಲಾತಿ ವಿಷಯದಲ್ಲಿ ಕಾಂಗ್ರೆಸ್ ಸರ್ಕಾರವು ಕಾಲಹರಣ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಒಂದು ಸ್ಪಷ್ಟವಾದ ನಿರ್ಧಾರ ಕೈಗೊಳ್ಳಲು ತಮಗಿರುವ ಅಡ್ಡಿಯಾದರೂ ಏನು?

ಸಮುದಾಯಗಳ ನಡುವೆ ಒಡಕು ಮೂಡಿಸಿ ರಾಜಕೀಯ ಲಾಭ ಪಡೆಯುವುದು ನಿಮ್ಮ ಉದ್ದೇಶವೇ?. ಒಳಮೀಸಲಾತಿ ಜಾರಿಗೊಳಿಸಲು ಇರುವ ಅಡೆತಡೆಗಳಿಗಿಂತ ನಿಮ್ಮ ಸರ್ಕಾರದ ಇಚ್ಛಾಶಕ್ತಿಯ ಕೊರತೆಯೇ ಎದ್ದು ಕಾಣುತ್ತಿದೆ.ಕೇವಲ ಭಾಷಣಗಳಲ್ಲಿ ಸಾಮಾಜಿಕ ನ್ಯಾಯ” ಎಂದು ಜಪಿಸುವ ತಾವು, ಕಾರ್ಯರೂಪಕ್ಕೆ ಬಂದಾಗ ಹಿಂಜರಿಯುತ್ತಿರುವುದು ಯಾಕೆ? ಎಂದು ಪ್ರತ್ರದಲ್ಲಿ ಪ್ರಶ್ನೆ ಮಾಡಲಾಗಿದೆ.

ಖಾಲಿ ಹುದ್ದೆಗಳ ಭರ್ತಿ ಮತ್ತು ಖಾಲಿಯಾದ ಖಜಾನೆ: ರಾಜ್ಯದಲ್ಲಿ ಸುಮಾರು 2.84 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿಯಿವೆ. ಒಳಮೀಸಲಾತಿಯ ನೆಪವೊಡ್ಡಿ ನೀವು ಈ ನೇಮಕಾತಿಗಳನ್ನು ತಡೆಹಿಡಿದಿರುವುದು ಅಕ್ಷಮ್ಯ ಅಪರಾಧ. ವಾಸ್ತವದಲ್ಲಿ, ಸರ್ಕಾರದ ಖಜಾನ ಸಂಪೂರ್ಣ ಖಾಲಿಯಾಗಿದೆ. ಹೊಸ ನೇಮಕಾತಿಗಳಿಗೆ ಸಂಬಳ ನೀಡಲು ನಿಮ್ಮ ಬಳಿ ಹಣವಿಲ್ಲ.

ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಆರ್ಥಿಕತೆಯನ್ನು ಹದಗೆಡಿಸಿ, ಈಗ ಉದ್ಯೋಗಾಕಾಂಕ್ಷಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದೀರಿ. ಒಳಮೀಸಲಾತಿ ವಿವಾದವನ್ನು ಒಂದು ‘ಗುರಾಣಿ’ಯನ್ನಾಗಿ ಮಾಡಿಕೊಂಡು ಹಣಕಾಸಿನ ಮುಗ್ಗಟ್ಟನ್ನು ಮರೆಮಾಚುವ ನಿಮ್ಮ ತಂತ್ರ ನಮಗೆ ಅರ್ಥವಾಗುತ್ತದೆ ಎಂದು ಪತ್ರದಲ್ಲಿ ಹೇಳಿದ್ದಾರೆ.

SCSP/TSP ಅನುದಾನದ ದಾರಿ ತಪ್ಪಿಸುವಿಕೆ: ಶೇ. 24.1 ರಷ್ಟು ಹಣವನ್ನು ಮೀಸಲಿಟ್ಟಿದ್ದೇವೆ ಎಂದು ಹೇಳುವ ತಾವು, ಆ ಹಣವು ಸರಿಯಾದ ಉದ್ದೇಶಕ್ಕೆ ಬಳಕೆಯಾಗುತ್ತಿದೆಯೇ ಎಂದು ಆತ್ಮಾವಲೋಕನ ಮಾಡಿಕೊಳ್ಳಿ.

ಎಸ್ ಸಿ/ಎಸ್‌ಟಿ ಸಮುದಾಯದ ಅಭಿವೃದ್ಧಿಗೆ ಬಳಕೆಯಾಗಬೇಕಿದ್ದ ಸಾವಿರಾರು ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಯೋಜನೆಗಳಿಗೆ ಡೈವರ್ಟ್ ಮಾಡಿರುವುದು ಸಮುದಾಯಕ್ಕೆ ಮಾಡಿದ ದ್ರೋಹವಲ್ಲವೇ? 9ನೇ ಶೆಡ್ಯೂಲ್‌ಗೆ ಸೇರಿಸುವ ಮುನ್ನವೇ ಹಣ ಹಂಚಿಕೆ ಮಾಡಿದ್ದೇವೆ ಎನ್ನುವ ನೀವು, ಕಾನೂನಾತ್ಮಕ ಪ್ರಶ್ನೆಗಳಿಗೆ ಉತ್ತರಿಸಲು ತಯಾರಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.

ಪತ್ರದಲ್ಲಿನ ಆಗ್ರಹಗಳು

  • ತಕ್ಷಣವೇ ಒಳಮೀಸಲಾತಿ ಕುರಿತು ಸ್ಪಷ್ಟ ನಿರ್ಧಾರ ಕೈಗೊಂಡು ಅನುಷ್ಠಾನಕ್ಕೆ ತನ್ನಿ.
  • ಕೋರ್ಟ್ ಆದೇಶದ ಅನ್ವಯ, ಯಾವುದೇ ವಿಳಂಬವಿಲ್ಲದ 2.84 ಲಕ್ಷ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಿ.
  • ಉದ್ಯೋಗ ನೇಮಕಾತಿಯಲ್ಲಿ ಶೆಡ್ಯೂಲ್ 9ರ ಬದಲಾವಣೆಗಳನ್ನು ನಂತರದ ಹಂತದಲ್ಲಿ ಅಳವಡಿಸಿಕೊಳ್ಳಲು ಅವಕಾಶವಿದೆ, ಮೊದಲು ನೇಮಕಾತಿ ಆರಂಭಿಸಿ ಯುವಜನತೆಗೆ ದಾರಿಕಲ್ಪಿಸಿ, ಸಂತ ಭಾಷಣ ಬಿಟ್ಟು ಕೇಂದ್ರದೊಂದಿಗೆ ಚರ್ಚಿಸಿ ಶೆಡ್ಯೂಲ್ 9ಗೆ ಸೇರಿಸಲು ಕೇಂದ್ರಕ್ಕೆ ಹೋಗಿ ಪ್ರಯತ್ನ ಮಾಡಿ ಹುಸಿ ಭಾಷಣ ಬೇಡ.
  • ಸಂತೆಯಲ್ಲಿ ಭಾಷಣ ಮಾಡುವುದರಿಂದ ಹೊಟ್ಟೆ ತುಂಬುವುದಿಲ್ಲ, ಬದುಕು ಕೂಡಲೇ ಎಚ್ಚೆತ್ತುಕೊಂಡು ದಲಿತ ಸರ್ಕಾರವು ವಿರೋಧಿ ಹಸನಾಗುವುದಿಲ್ಲ. ಹೋರಾಟ ಮಾಡಬೇಕಾಗುವ ಸನ್ನಿವೇಶ ಧೋರಣೆಯನ್ನು ಕೈಬಿಡದಿದ್ದರೆ ಬೀದಿಗಿಳಿದು ಹೋರಾಡಬೇಕಾಗುತ್ತದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular