ಕೇವಲ ಒಂದು ಸಣ್ಣ ಗೂಗಲ್ ಮೀಟ್ (Google Meet) ವಿಡಿಯೋ ಕರೆಯ ಮೂಲಕ ಭಾರತೀಯ ಗ್ರಾಹಕ ಸೇವಾ ತಂಡದ (Customer Support Team) ಸುಮಾರು 80 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಅಮೆರಿಕ ಮೂಲದ ಡಿಜಿಟಲ್ ಬ್ಯಾಂಕಿಂಗ್ ಸಂಸ್ಥೆಯಾದ ಬ್ಲೂವೈನ್ (Bluevine) ಈ ಕಠಿಣ ಕ್ರಮ ಕೈಗೊಂಡಿದೆ ಎಂದು ವಜಾಗೊಂಡ ಮಾಜಿ ಉದ್ಯೋಗಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸಾಮಾಜಿಕ ಜಾಲತಾಣದಲ್ಲಿ “ಗೂಗಲ್ ಮೀಟ್ ಮೂಲಕ ಸಾಮೂಹಿಕ ವಜಾ” ಎಂಬ ಶೀರ್ಷಿಕೆಯಡಿ ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿರುವ ಉದ್ಯೋಗಿ, ಅಂದು ಆಡಳಿತಾತ್ಮಕ ಕಾರಣಗಳನ್ನು (Operational reasons) ನೀಡಿ ಸಂಪೂರ್ಣ ತಂಡಕ್ಕೆ ಮನೆಯಿಂದಲೇ ಕೆಲಸ ಮಾಡುವಂತೆ (Work from home) ಸೂಚಿಸಲಾಗಿತ್ತು ಎಂದು ತಿಳಿಸಿದ್ದಾರೆ. ಆದರೆ, ಸಂಜೆಯ ಶಿಫ್ಟ್ ಕೆಲಸ ಆರಂಭವಾದ ಕೆಲವೇ ಗಂಟೆಗಳಲ್ಲಿ ಯಾವುದೇ ಮುನ್ಸೂಚನೆ ಇಲ್ಲದೆ ದಿಢೀರ್ ವರ್ಚುವಲ್ ಮೀಟಿಂಗ್ ಕರೆಯಲಾಯಿತು.
ಸಂಜೆ 6:30 ಕ್ಕೆ ಕೆಲಸ ಆರಂಭಿಸಿದ್ದ ಉದ್ಯೋಗಿಗಳು ಸುಮಾರು 3 ಗಂಟೆಗಳ ಕಾಲ ಎಂದಿನಂತೆ ಕೆಲಸ ನಿರ್ವಹಿಸಿದ್ದರು. ಆದರೆ ರಾತ್ರಿ 9:30 ರ ಸುಮಾರಿಗೆ ಎಲ್ಲರಿಗೂ ಗೂಗಲ್ ಮೀಟ್ ಲಿಂಕ್ ಕಳುಹಿಸಿ, ಭಾರತದ ಇಡೀ ಕಸ್ಟಮರ್ ಕೇರ್ ತಂಡವನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಲಾಗಿದೆ ಎಂದು ತಿಳಿಸಲಾಯಿತು. ಈ ಅನಿರೀಕ್ಷಿತ ನಿರ್ಧಾರದಿಂದಾಗಿ ಸುಮಾರು 80 ಮಂದಿ ನೌಕರರು ಒಂದೇ ಕ್ಷಣದಲ್ಲಿ ಉದ್ಯೋಗ ಕಳೆದುಕೊಂಡಿದ್ದು, ಅವರ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಎಂದು ಪೋಸ್ಟ್‌ನಲ್ಲಿ ವಿವರಿಸಲಾಗಿದೆ.
ಯಾವುದೇ ಮುಂಚಿತ ಎಚ್ಚರಿಕೆ ಅಥವಾ ಕಾಲಾವಕಾಶ ನೀಡದೆ ಈ ರೀತಿ ಅಮಾನವೀಯವಾಗಿ ಉದ್ಯೋಗದಿಂದ ಕಿತ್ತೊಗೆದಿರುವುದಕ್ಕೆ ಉದ್ಯೋಗಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಉದ್ಯೋಗದ ಅಭದ್ರತೆಯ ನಡುವೆಯೂ ಹಲವು ದಿನಗಳಿಂದ ಹೆಚ್ಚುವರಿ ಸಮಯ ದುಡಿದಿದ್ದ ನೌಕರರಿಗೆ ಕಂಪನಿಯು ಈ ರೀತಿ ಅನ್ಯಾಯವೆಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಲಾಗಿದ್ದು, ಈ ವಿಚಾರ ಸದ್ಯ ಕಾರ್ಪೊರೇಟ್ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

