ಬೆಂಗಳೂರು: ರಾಜ್ಯದಲ್ಲಿ 1ನೇ ತರಗತಿ ದಾಖಲಾತಿಗೆ ಮಗುವಿಗೆ 6 ವರ್ಷ ತುಂಬಿರಬೇಕು ಎಂಬ ಕಡ್ಡಾಯ ನಿಯಮದ ವಿಚಾರವಾಗಿ ಪೋಷಕರಿಗೆ ರಾಜ್ಯ ಸರ್ಕಾರ ದೊಡ್ಡ ಸಮಾಧಾನ ನೀಡಿದೆ. ಈ ಕುರಿತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ವಿಧಾನಸಭೆಯಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ.
ಹೌದು. ರಾಜ್ಯದಲ್ಲಿ ಒಂದನೇ ತರಗತಿ ದಾಖಲಾತಿಗೆ ಮಗುವಿಗೆ 6 ವರ್ಷ ತುಂಬಿರಲೇಬೇಕು ಎಂಬ ಕಡ್ಡಾಯ ನಿಯಮದಿಂದ ಕಂಗಾಲಾಗಿದ್ದ ಪೋಷಕರಿಗೆ ರಾಜ್ಯ ಸರ್ಕಾರ ಇದೀಗ ಬಿಗ್ ರಿಲೀಫ್ ನೀಡಿದೆ. ಈ ಕುರಿತು ವಿಧಾನಸಭೆಯಲ್ಲಿ ಮಹತ್ವದ ಘೋಷಣೆ ಮಾಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, 2026-27ನೇ ಶೈಕ್ಷಣಿಕ ಸಾಲಿನ ದಾಖಲಾತಿಯಲ್ಲಿ 60 ದಿನಗಳ ವಿನಾಯಿತಿ ನೀಡಲಾಗುವುದು ಎಂದು ತಿಳಿಸಿದ್ದಾರೆ. ಇದರಿಂದಾಗಿ ವಯೋಮಿತಿಯ ಅಲ್ಪ ವ್ಯತ್ಯಾಸದಿಂದಾಗಿ ಅಡ್ಮಿಷನ್ ಸಿಗದೆ ಆತಂಕದಲ್ಲಿದ್ದ ಸಾವಿರಾರು ಪೋಷಕರಿಗೆ ಹಾದಿ ಸುಗಮವಾದಂತಾಗಿದೆ. ಮಗುವಿಗೆ 6 ವರ್ಷ ಪೂರೈಸಲು ಕೇವಲ 60 ದಿನಗಳು ಬಾಕಿ ಇದ್ದರೂ ಸಹ ಈ ಬಾರಿ ಒಂದನೇ ತರಗತಿಗೆ ಸೇರಿಸಲು ಅವಕಾಶ ಸಿಗಲಿದ್ದು, ಸರ್ಕಾರದ ಈ ನಿರ್ಧಾರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
60 ದಿನಗಳ ಸಡಿಲಿಕೆ : 1ನೇ ತರಗತಿ ದಾಖಲಾತಿಗೆ 6 ವರ್ಷ ತುಂಬಿರಲೇಬೇಕು ಎಂಬ ನಿಯಮದಲ್ಲಿ ಈ ವರ್ಷವೂ 60 ದಿನಗಳ ವಿನಾಯಿತಿ ನೀಡಲು ಸರ್ಕಾರ ನಿರ್ಧರಿಸಿದೆ.
ಯಾರಿಗೆ ಅನ್ವಯ?: 2026-27ನೇ ಸಾಲಿನಲ್ಲಿ 1ನೇ ತರಗತಿಗೆ ದಾಖಲಾಗುವ ಮಕ್ಕಳಿಗೆ ಈ ಸಡಿಲಿಕೆ ಅನ್ವಯವಾಗಲಿದೆ. ಮಗುವಿಗೆ 6 ವರ್ಷ ತುಂಬಲು 60 ದಿನಗಳು ಬಾಕಿ ಇದ್ದರೂ ಸಹ ದಾಖಲಾತಿ ಪಡೆಯಲು ಅವಕಾಶವಿರುತ್ತದೆ.
ತಾಂತ್ರಿಕ ಬದಲಾವಣೆ: ಈ ವಿನಾಯಿತಿಗೆ ಪೂರಕವಾಗಿ ಸರ್ಕಾರದ ದಾಖಲಾತಿ ತಂತ್ರಾಂಶದಲ್ಲೂ (SATS) ಅಗತ್ಯ ಬದಲಾವಣೆಗಳನ್ನು ಮಾಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಕಾನೂನು ಚೌಕಟ್ಟು: ಕರ್ನಾಟಕ ಶಿಕ್ಷಣ ಕಾಯ್ದೆ 1993ರ ಅಡಿಯಲ್ಲಿ ಈ ವಿನಾಯಿತಿಯನ್ನು ನೀಡಲಾಗಿದೆ.

